*ಮಹಾರಾಷ್ಟ್ರದಲ್ಲಿನ ಕನ್ನಡದ ಕುರುಹುಗಳು.....* ಒಂದು ಕಿರುನೋಟ
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 'ಕನ್ನಡ' ಎಂಬ ತಾಲೂಕೇ ಇದೆ ಗೊತ್ತೇನ್ರೀ..ಇಷ್ಟೇ ಸಾಕಲ್ವೇನ್ರೀ ಕನ್ನಡ ನಾಡಿನ ವಿಸ್ತಾರ ಎಷ್ಟು ಅಂತಾ ಹೇಳೋಕೆ.
ಮರಾಠಿ ನೆಲದ ಇತಿಹಾಸ ಕೆದಕುತ್ತಾ ಹೋದ್ರೇ ಅಲ್ಲಿ ಕನ್ನಡ ಕುರುಹುಗಳೇ ದಂಡಿ ದಂಡಿಯಾಗಿ ಸಿಗ್ತವೆ.
ಮಹಾರಾಷ್ಟ್ರದ ಏಕಮೇವಾ ದ್ವಿತೀಯ ಧುರೀಣ, ಭಾರತದ ಕ್ರಾಂತಿಪುರುಷ ಲೋಕಮಾನ್ಯ ಬಾಲ ಗಂಗಾಧರ ತಿಲಕರು 1914ರಲ್ಲಿ ಬೆಳಗಾವಿ ಜಿಲ್ಲೆಯ ಗುರ್ಲಹೊಸೂರಿಗೆ ಬಂದಿದ್ದರು. (ಈಗದು ಮಲಪ್ರಭಾ ಅಣೆಕಟ್ಟೆಯಲ್ಲಿ ಮುಳುಗಡೆಯಾಗಿದೆ.)
ಅಲ್ಲಿ ಕರ್ನಾಟಕ ರಾಜಕೀಯ ಪರಿಷತ್ ಸಮಾವೇಶ ನಡೆದಿತ್ತು. 'ಒಂದು ಕಾಲಕ್ಕೆ ಕರ್ನಾಟಕ-ಮಹಾರಾಷ್ಟ್ರ ಈ ಎರಡೂ ರಾಜ್ಯಗಳ ಜನ ಆಡುತ್ತಿದ್ದ ಭಾಷೆ ಒಂದೇ ಇತ್ತು, ಅದವೇ ಕನ್ನಡ' ಅಂತಾ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತಿಲಕರು ಹೇಳಿದ್ದರು. ಇದು ಕನ್ನಡದ ತಾಕತ್ತು. ನಾವು ನಮ್ಮತನ ಮರೆಯಬಾರದು.
ಚಾಲುಕ್ಯರ ಕಾಲದಲ್ಲಿ ಕರ್ನಾಟಕ ಮಾತ್ರ ಆಗಿರದೆ, ಮಹಾರಾಷ್ಟ್ರವೇ ಆಗಿದ್ದಿತು. 1605 ಸ್ಥಾಪನೆಗೊಂಡ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೇ ತನ್ನ ದಾಖಲೆಗಳಲ್ಲಿ ಇದನ್ನ ಉಲ್ಲೇಖಿಸಿದೆ. 1676ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮುಂಬೈನಲ್ಲಿ ತನ್ನ ವ್ಯಾಪಾರಿ ಮಳಿಗೆ ಸ್ಥಾಪಿಸಿತು.
ಆಗ ತನ್ನೊಂದಿಗೆ ವ್ಯಾಪಾರ ಮಾಡಲು ಬಯಸುವವರು ಕನ್ನಡ ಮತ್ತು ಪೋರ್ತುಗೀಜ ಭಾಷೆಯಲ್ಲಿ ವ್ಯವಹರಿಸಬೇಕೆಂದು ಜಾಹೀರನಾಮೆ ಹೊರಡಿಸಿತ್ತು. ಅಷ್ಟೇ ಅಲ್ಲ, ಇತ್ತೀಚೆಗಿನ ಇತಿಹಾಸ ನೋಡ್ತಾ ಬಂದ್ರೇ, ಮುಂಬೈ ನಗರದಲ್ಲಿ ಜನರಾಡುವ ಭಾಷೆ ಕನ್ನಡವೇ ಆಗಿತ್ತು.
ಅಚ್ಚ ಕನ್ನಡ ದೊರೆಗಳಾದ 'ಶಿಲಾಹಾರರು' ಮುಂಬೈ ನಗರ ಆಳಿದ್ದರು. ಇಲ್ಲಿನ ದೊಂಬವಳ್ಳಿ, ಬೋರಿವಳ್ಳಿ, ಕಂದವಳ್ಳಿ, ಮಲ್ಲಾಡ ಕನ್ನಡ ದೊರೆಯ ಆಡಳಿತಕ್ಕೊಳಪಟ್ಟಿದ್ದವು.
1818ರಲ್ಲಿ ಮುಂಬೈ ಪ್ರಾಂತದ ಮೊಟ್ಟಮೊದಲ ಗವರ್ನರ್ ಸರ್ ವಿಲಿಯಂ ಎಲಫಿನ್ಸ್‌ಟನ್‌ಗೆ ನೀಡಿದ್ದ ಮೊಟ್ಟ ಮೊದಲ ಮಾನಪತ್ರ ಕನ್ನಡದಲ್ಲಿತ್ತು. ಮಹಾರಾಷ್ಟ್ರದ ಅರ್ಧಕ್ಕೂ ಹೆಚ್ಚು ನಗರ ಮತ್ತು ಹಳ್ಳಿಗಳ ಹೆಸರು ಕನ್ನಡವೇ ಆಗಿವೆ.
ಅವು ಎಷ್ಟೇ ಸ್ಥಿತ್ಯಂತರಗೊಂಡಿದ್ರೂ ತಮ್ಮ ಮೂಲ ಸ್ವರೂಪ ಇನ್ನೂ ಕಳೆದುಕೊಂಡಿಲ್ಲ. ಅವು ಕನ್ನಡವೆಂದು ಅವುಗಳ ಗುರುತನ್ನ ಈಗಲೂ ಹಿಡಿಯಬಹುದಾಗಿದೆ. ಇದನ್ನ ಮರಾಠಿ ಸಂಶೋಧಕ ರಾಜನವಾಡೆ ಯಾವುದೇ ಅಳುಕಿಲ್ಲದೇ ದಾಖಲಿಸಿದ್ದಾರೆ.
ಸಂಗೊಳ್ಳಿ ಎಂಬ ಕನ್ನಡ ಪದ ಈಗ ಸಂಗೋಲಾ ಆಗಿದೆ. ಮಂಗಳವೀಡು ಅದೀಗ ಮಂಗಳವೇಡೆ ಅಂತಿದೆ. ಸಿಂಧುದುರ್ಗ ಜಿಲ್ಲೆಯ ಸಾವಂತವಾಡಿಯಿಂದ ವೆಂಗುರ್ವಾಕ್ಕೆ ಹೋಗುವ ಘಟ್ಟ ಮಾರ್ಗವು ದೊಡ್ಡ ಮಾರ್ಗ ಎನ್ನುವ ಹೆಸರಿತ್ತು. ಅದೀಗ ದೊಡಾ ಮಾರ್ಗ ಎಂದಾಗಿದೆ ಅಷ್ಟೇ..
ಪುಣೆ ಬಳಿಯ ಕೆಂದೂರು ಇದೆ. ಭೂಕಂಪಕ್ಕೆ ಗುರಿಯಾದ ಲಾತೂರು ಇದೆ. ಅದು ರಟ್ಟರ ರಾಜಧಾನಿ. ಪುಣೆಯಿಂದ ರೈಲಿನಲ್ಲಿ ಹೋದ್ರೆ ಪಿಂಪರಿ ದಾಟಿದ ಮೇಲೆ ಮೆಲುವಳಿ ಬರುತ್ತದೆ. ಮಂದೆ ಲೋಣಾವಳಾ ಇದೆ. ಅದು ಪ್ರಾಚೀನ ಲೋಣವಳ್ಳಿ. ಅಲ್ಲಿ ಒಂದು ಕನ್ನಡ ಶಿಲಾಶಾಸನ ಸಿಕ್ಕಿದೆ.
ಕಲ್ಯಾಣದಿಂದ ಮುಂಬಯಿಗೆ ಹೊರಟವರಿಗೆ ದೊಂಬಿವಲಿ ಎದುರಾಗುತ್ತೆ. ಅದು ಕನ್ನಡದ ಡೊಂಬವಳ್ಳಿ. ಅಲ್ಲಿ ಬೋರಿವಲಿ ಇದೆ ಅದು ಬೋರವಳ್ಳಿ. ಕಾಂದಿವಿಲಿ ಇದೆ ಅದು ಕಂಷವಳ್ಳಿ, ಮಲಾಡ್ ಇದೆ ಅದು ಮಲ್ಲಾಡ. ಮಹಾರಾಷ್ಟ್ರದ ರತ್ನಗಿರಿ,ಕುಲಾಬಾ, ಸಿಂಧುದುರ್ಗ ಜಿಲ್ಲೆಯೊಳಗಿನ ಕನ್ನಡ ಹಳ್ಳಿಗಳ ಹೆಸರು ಹೇಳಿದ್ರೆ ಕೌತುಕ ಎನಿಸದೆ ಇರಲ್ಲ. ಸಾಮಾನ್ಯವಾಗಿ ಊರು ಅಂತಾ ಇದ್ರೇ ಅದು ಕನ್ನಡ ಪದವೇ..
ಪೊಯ್ನಾಡು, ಕಲ್ಮಠ,ಅಕ್ಕಲಕೊಪ್ಪ, ದೇವಿಕೊಪ್ಪ, ಉಳವಿ, ಬೇವೂರು, ದೋಣಿ, ನಿಧಿರ್ಗುಡಿ, ಕಣಕವಲ್ಲಿ,ಬ್ರಹ್ಮನಾಳ,ಕಳಸ,ಕುರುಡೀವಾಡಿ, ಇತ್ಯಾದಿ. ಮಹಾರಾಷ್ಟ್ರದೊಳಗಿನ ಇಂಥ ಸಾವಿರಾರು ಹೆಸರು ಹೇಳಬಹುದು.
ಪುರಂದರದಾಸರು ಪುರಂದರ ಗಡದವರು. ಅವರು ಬಹು ಅರ್ಥಪೂರ್ಣ ತಿಳುಗನ್ನಡಕ್ಕೆ ಹೆಸರಾಗಿದ್ದಾರೆ. ಅವರು ಬರೆದ 'ಜ್ಞಾನೇಶ್ವರಿ'ಯಲ್ಲಿ ಶೇ. 40ರಷ್ಟು ಕನ್ನಡ ಪದಗಳಿವೆ.
ಭಾರತದ ಗೌರವ ಪ್ರತಿಷ್ಠೆ ಮೆರೆಸಿದ ಶಿವಾಜಿ ಮಹಾರಾಜನ ಜನ್ಮಸ್ಥಳ ಶಿವನೇರಿ. ಅಚ್ಚಗನ್ನಡ ಹಳ್ಳಿ ಅದು. ಈಗ ನಾಂದೇಡ ಜಿಲ್ಲೆಯಲ್ಲಿದೆ. ಇದೇ ನಾಂದೇಡ ಮೊದಲು ಕನ್ನಡದ ನಂದಿವಾಡ ಆಗಿತ್ತು. ಅದರ ಮೇಲೆ ದೇಗಲೂರು ಇದೆ. ಈಗಲೂ ಕೂಡ ನಾಂದೇಡ ಸಂತೆಗೆ ಬರುವ ಹಳ್ಳಿ ಜನ ಆಡುವ ಮಾತಿನ ಕಡೆಗೆ ಕಿವಿಗೊಟ್ಟರೆ, ಹರಕು ಮುರಕು ಕನ್ನಡ ಪದ ಕಿವಿಗೆ ಬೀಳ್ತವೆ.
ಮಹಾರಾಷ್ಟ್ರದ ಜನಪದ ಕರ್ನಾಟಕದಿಂದಲೇ ಬಹಳಷ್ಟು ಪ್ರಭಾವಿತವಾಗಿದೆ. ಮನುಷ್ಯನ ಕರುಳಿಗೆ ಹತ್ತಿದ, ಹೃದಯಕ್ಕೆ ಸಂಬಂಧಿಸಿದ ಕಕ್ಕುಲಾತಿಯ ಶಬ್ಧಗಳನ್ನೆಲ್ಲ ಅದು ಕನ್ನಡದಿಂದಲೇ ಪಡೆದಿದೆ. ಅಪ್ಪ-ಅವ್ವ, ತಾಯಿ, ಅಣ್ಣ, ಅಕ್ಕ, ಕಾಕಾ ಇವೆಲ್ಲ ಪದಗಳು ಈಗಲೂ ಅಲ್ಲಿ ಸಾರ್ವತ್ರಿಕವಾಗಿ ಬಳಕೆಯಲ್ಲಿವೆ.
ಮರಾಠಿ ಶಬ್ಧಕೋಶದಲ್ಲೂ ಅಡಕವಾಗಿವೆ. ಕನ್ನಡದ ಅಪ್ಪ-ಅಣ್ಣ, ಕಾಕಾ ಇವೆಲ್ಲ ಮರಾಠಿಯಲ್ಲಿ ಅಪ್ಪಾಸಾಹೇಬ, ಅಣ್ಣಾಸಾಹೇಬ, ಕಾಕಾಸಾಹೇಬ ಎಂದಾಗಿವೆ. ಅವ್ವ,ತಾಯಿ ಅಕ್ಕ ಮಾತ್ರ ಅತ್ಯಲ್ಪ ಬದಲಾವಣೆಯೊಂದಿಗೆ ಹಾಗೆಯೇ ಉಳಿದಿವೆ. ಶಾಲಿನಿತಾಯಿ,ಉಷಾತಾಯಿ, ಲತಾತಾಯಿ ಎಂಬ ಹೆಸರುಗಳನ್ನ ಕಾಣಬಹುದು.
ಧಾರವಾಡದ ಕಂದೀರರು ಕನ್ನಡ ನಾಟಕ ಪರಂಪರೆಯನ್ನ ಮಹಾರಾಷ್ಟ್ರಕ್ಕೆ ಕೊಂಡೊಯ್ದರು. ಮರಾಠಿ ನಾಟಕ ಹಾಡುಗಳಿಗೆಲ್ಲ ಕನ್ನಡದ ನಾಟಕದ ಹಾಡುಗಳೇ ಧಾಟಿ ಒದಗಿಸಿದವು. ಮಹಾಲಿಂಗಪುರದ ಲಿಂಗಾಸಾನಿಯ ಹಾಡಿನ ಚಾಲಿನಂತೆ ಎಂದು ತಮ್ಮ ನಾಟಕದ ಹಾಡಿನ ಚಾಲು ಇರಬೇಕೆಂದು ಮರಾಠಿ ನಾಟಕಕಾರರು, ಆ ಹಾಡಿನ ಹೆಸರಿನ ಕೆಳಗೆ ಸೂಚನೆ ಕೊಟ್ಟಿರುತ್ತಿದ್ದರು.
ಮಹಾರಾಷ್ಟ್ರದಲ್ಲಿ ಉದ್ದಿಮೆಯುಗ ಸ್ಥಾಪಿಸಿದ ಲಕ್ಷ್ಮಣರಾವ್ ಕಿರ್ಲೋಸ್ಕರರು ಸವದತ್ತಿ ತಾಲೂಕಿನ ಗುರ್ಲಹೊಸೂರಿನ ಗ್ರಾಮದವರು. ಅದು ಕನ್ನಡದ ಸಂಶೋಧಕ, ವೈಚಾರಿಕ ಡಾ. ಶಂ.ಬಾ ಜೋಶಿ ಹುಟ್ಟೂರು. ಮಹಾರಾಷ್ಟ್ರ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ಒದಗಿಸಿದ 'ಸಕಾಳ' ಪರುಳೀಕರರು ಕೂಡ ಅದೇ ಗುರ್ಲಹೊಸೂರಿನಿಂದ ಬಂದವರು. ಕನ್ನಡಿಗನೊಬ್ಬ ಮರಾಠಿ ಮುದ್ರಣದ ಮೊಳೆಗಳನ್ನ ಸಿದ್ಧಪಡಿಸಿಕೊಟ್ಟ.
ಅವು, ಅವನ ಹೆಸರಿನಿಂದ ಬಿಜಾಪುರ ಟೈಪ್ ಎದು ಹೆಸರಾಗಿವೆ. ಈಗಲೂ ಮುಂಬೈನಲ್ಲಿ ಕನ್ನಡ ಕರಾವಳಿ ಜನ ಹೋಟೆಲ್ ಉದ್ಯಮ ಕಟ್ಟಿ ಬೆಳೆಸಿದ್ದಾರೆ.
ಈಗಲೂ ಬೆಂಗಳೂರಿಗಿಂತಲೂ ಹೆಚ್ಚು ಕನ್ನಡಿಗರು ಮುಂಬೈನಲ್ಲಿ ವಾಸವಿದ್ದಾರೆ ಅದುವೇ ಕನ್ನಡಿಗರ ಶಕ್ತಿ.
ಮಹಾರಾಷ್ಟ್ರದ ಮೂಲ ಪುರುಷ ಶಹಾಜಿ. ಆತ ಬಿಜಾಪುರದ ಆದಿಲಶಾಹಿಗಳ ಸೇವೆಯಲ್ಲಿದ್ದ. ಆ ಆದಿಲ್‌ಶಾಹಿಗಳ ಪ್ರತಿನಿಧಿಯಾಗಿ ಬೆಂಗಳೂರಿನ ಗವರ್ನರ್ ಕೂಡ ಆಗಿದ್ದ. ತಂದೆ ಶಹಾಜಿ ಬಿಜಾಪುರ ಮತ್ತು ಬೆಂಗಳೂರಿನಲ್ಲಿದ್ದಾಗ, ಬಾಲಕ ಶಿವಾಜಿ ಕೂಡ ಬಾಲ್ಯದಲ್ಲಿ ತಾಯಿಯೊಂದಿಗೆ ಬೆಂಗಳೂರು ಮತ್ತು ಬಿಜಾಪುರದಲ್ಲಿ ಕಳೆದಿರಲಕ್ಕೂ ಸಾಕು.
ಅಷ್ಟೇ ಅಲ್ಲ, ಶಿವಾಜಿಯ ಮದುವೆ ಆಗಿದ್ದು ಬೆಂಗಳೂರಿನಲ್ಲಿ ಅನ್ನೋದು ಎಷ್ಟು ಜನಕ್ಕೆ ಗೊತ್ತು. ಶಹಾಜಿ ತನ್ನ ಕೊನೆಯ ದಿನಗಳಲ್ಲಿ ಕರ್ನಾಟಕದಲ್ಲಿಯೇ ಕಳೆದ. ಅವನ ಸಮಾಧಿ ಶಿವಮೊಗ್ಗ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗ್ಗೆರೆ ಗ್ರಾಮದಲ್ಲಿದೆ.
1857ರ ಪ್ರಥಮ ಸ್ವಾತಂತ್ಯ್ರ ಯುದ್ಧದ ಹೋರಾಟದ ಪ್ರಮುಖರಲ್ಲಿ ಒಬ್ಬನಾದ ಧೊಂಡೀಬಾ ವಾಢ ಶಿವಮೊಗ್ಗ ಜಿಲ್ಲೆ ಚೆನ್ನಗಿರಿಯವನು. ಕರ್ನಾಟಕ-ಮಹಾರಾಷ್ಟ್ರದ ಸಂಬಂಧ ಬೇರುಗಳು ಬಹು ನಿಬಿಡವಾಗಿ ಬಿಡಿಸಲು ಬಾರದಂತೆ ಗಾಢವಾಗಿವೆ ಹೆಣೆದುಕೊಂಡಿವೆ.
ಕರ್ನಾಟಕ ಎಲ್ಲಿ ಕೊನೆಗೊಂಡಿದೆಯೋ ಅಲ್ಲಿ ಮಹಾರಾಷ್ಟ್ರ ಆರಂಭಗೊಂಡಿದೆ. ಈಗ ಮಹಾರಾಷ್ಟ್ರದವರು ಬೆಳಗಾವಿ ನಗರ ಹಾಗೂ ಆ ಜಿಲ್ಲೆಯ ಕೆಲ ಪ್ರದೇಶಗಳ ತಮ್ಮ ಹಕ್ಕು ದಾರಿಕೆ ಇದೆಯೆಂದು ಹೇಳುತ್ತಿರುವರೋ, ಅವುಗಳನ್ನೆಲ್ಲ ಬಾಲಗಂಗಾಧರ ತಿಲಕರ ಬಲಗೈ ಬಂಟ ಕೇಳಕರ್‌ರೇ ಕರ್ನಾಟಕದಲ್ಲಿರಿಸಿದ್ದರು.
1924ರಲ್ಲಿ ಬೆಳಗಾವಿ ನಗರದಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮ್ಮೇಳನ ಸೇರಿದ್ದಿತು. ಆಗ ಅಲ್ಲಿಯೇ ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ಸೇರಿತ್ತು. ಅದಕ್ಕೆ ಸಿದ್ದಪ್ಪ ಕಂಬಳಿ ಅವರೇ ಅಧ್ಯಕ್ಷರಾಗಿದ್ದರು. ಮುಂದೆ ಅದೇ ಕಂಬಳಿ ಅವರು (ಸರ್ ಆದರು)
ಜಗತ್ತಿನಲ್ಲಿ 3500ಕ್ಕೂ ಹೆಚ್ಚು ಭಾಷೆಗಳಿವೆ. ಅದರಲ್ಲಿ 30 ಅತ್ಯುನ್ನತ ಭಾಷೆಗಳಲ್ಲಿ ಕನ್ನಡ ಸ್ಥಾನ 27. ಇದು ಕನ್ನಡಿಗರ ಹೆಮ್ಮೆ ಅಲ್ವೇ.. ಮಹಾರಾಷ್ಟ್ರದಲ್ಲಿ ಈವರೆಗೂ ಸಿಕ್ಕ ಶೇ.85ರಷ್ಟು ಶಿಲಾಶಾಸನಗಳು ಕನ್ನಡದಲ್ಲಿಯೇ ಇವೆ. ಮಿಕ್ಕುಳಿದ 10 ಮರಾಠಿಯಲ್ಲಿದ್ರೇ, ಉಳಿದ 5 ಬ್ರಾಹ್ಮಿ ಭಾಷೆಯಲ್ಲಿವೆ.
ಇದನ್ನ ಪ್ರಾಚ್ಯವಸ್ತು ಪಂಡಿತರಾಜ ಡಾ. ಶ್ರೀನಿವಾಸ್ ರಿತ್ತಿಯವರು ಉಲ್ಲೇಖಿಸಿದ್ದಾರೆ. ರತ್ನಗಿರಿಯಲ್ಲೂ ಸಹ ಕನ್ನಡ ಶಿಲಾಶಾಸನ ಸಿಕ್ಕಿದೆ. 1956ರಲ್ಲಿ ಭಾಷಾವಾರು ಪ್ರಾಂತಗಳ ಪುನರ್ವಿಂಗಡನೆಯಾದಾಗ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಪ್ರದೇಶಗಳು ಹುಟ್ಟಿಕೊಂಡು ತಮ್ಮ ಪ್ರದೇಶಗಳನ್ನ ಹೆಚ್ಚಿಸಿಕೊಂಡವು. ಸೊರಗಿ ಕುಬ್ಜವಾದದ್ದು ಮಾತ್ರ ಕರ್ನಾಟಕವೊಂದೇ.
ಔರಂಗಾಬಾದಿನ ಪೈಠಣವು ಹಿಂದೆ ಪ್ರತಿಷ್ಠಾನವೆನಿಸಿತ್ತು. 9 ಹಾಗೂ 10 ನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಕೇಂದ್ರವಾಗಿತ್ತೆಂದು ಪ್ರದ್ಯೋತನ ಸೂರಿ ಎಂಬ ಸಂಸ್ಕೃತ ಪಂಡಿತ ತನ್ನ ಕುವಲಯಮಾಲಾ ಎಂಬ ಗ್ರಂಥದಲ್ಲಿ ಬರೆದಿದ್ದಾನೆ.
ಔರಂಗಾಬಾದ್ ಜಿಲ್ಲೆಯಲ್ಲಿ ಕನ್ನಡ ಎಂಬ ಹೆಸರಿನ ತಾಲೂಕು ಇದೆ. ಈ ಪ್ರದೇಶವೆಲ್ಲ ಈ ಹಿಂದೆ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಪ್ರಭುತ್ವಗಳಿಗೆ ಸೇರಿತ್ತು. ಇಲ್ಲಿನ ವೆರೂಳು ಗ್ರಾಮದಲ್ಲಿ ವಿಶ್ವವಿಖ್ಯಾತ ಏಕಶಿಲೆಯಲ್ಲಿ ನಿರ್ಮಿತ ಕೈಲಾಸ ದೇವಾಲಯವಿದೆ. ಅದನ್ನ ಕಟ್ಟಿಸಿದ್ದು ರಾಷ್ಟ್ರಕೂಟ ಚಕ್ರವರ್ತಿ ಮೊದಲನೆಯ ಕೃಷ್ಣ ಎಂಬುದರ ಬಗ್ಗೆ ಶಿಲಾಲಿಪಿ ಇದೆ. ಇದ್ದಾಗಲೇ ಸತ್ತಂತಿದ್ದವರನ್ನ ಸತ್ತ ಮೇಲೆ ಮೆರೆಸ್ತಾರೆ.. ಇದ್ದಾಗಲೂ ಅಳಿದ ಮೇಲೂ ಉಳಿದ ಕನ್ನಡಿಗರನ್ನ ಈಗ ಮರೆತಿದ್ದಾರೆ.
ಪ್ರಾಚ್ಯವಸ್ತು ಪಂಡಿತರಾಗಿದ್ದ ಸರ್ ಮಾರ್ಟಿಮರ್ ವ್ಹಿಲರ್ ಹೀಗೆ ಹೇಳ್ತಾರೆ- 'ಪಾಕಿಸ್ತಾನ ಅದು ಹೆಚ್ಚು ಆಳಕ್ಕಿಳಿದು ನೋಡಲು ಬಯಸುವುದಿಲ್ಲ. ಯಾಕಂದ್ರೆ, ಅದಕ್ಕೆ ಆಳಕ್ಕಿಳಿದಂತೆಲ್ಲ ಭಾರತೀಯ ಬೇರು, ಕುರುಹುಗಳೇ ಕಾಣಸಿಗುತ್ತವೆ. ಹಾಗೇ ಮರಾಠಿಗರೂ ಸಹ ಹೆಚ್ಚು ಇತಿಹಾಸದ ಆಳಕ್ಕಿಳಿದು ನೋಡಲ್ಲ. ಯಾಕಂದ್ರೆ, ಮರಾಠಿಗರಿಗೆ ಆಳಕ್ಕಿಳಿದಂತೆ ಕನ್ನಡದ ಬೇರು, ಕುರುಹುಗಳೇ ಕಾಣಸಿಗುತ್ತವೆ.
ಇಷ್ಟೆಲ್ಲ ಕನ್ನಡದ ಪರಂಪರೆ ಇರಿಸಿಕೊಂಡ ನಾವು ಅಭಿಮಾನ ಶೂನ್ಯರಾದ್ರೇ ಹೇಗೆ? ನಮ್ಮ ತನವನ್ನೇ ಮರೆತರೇ ಹೇಗೆ?. ಪೂರ್ಣಚಂದ್ರ ತೇಜಸ್ವಿ ಅವರು ಒಂದು ಮಾತು ಹೇಳಿದ್ರು. ಸಂಸ್ಕೃತ ಭಾಷೆ ಯಾಕೆ ಅಳಿಯಿತು ಅಂದ್ರೇ ಅದು ಹೆಚ್ಚು ಜನ ಬಳಕೆಯಾಗಲಿಲ್ಲ.
ಹಾಗೇ ನಮ್ಮ ಕನ್ನಡದ ಇತಿಹಾಸ, ಪರಂಪರೆ, ಸಂಸ್ಕೃತಿ, ಜನಪದ ಹೆಚ್ಚು ಹೆಚ್ಚು ಕನ್ನಡಿಗರ ನಾಲಿಗೆಯಲ್ಲಿ ನಲಿಯಬೇಕು ಅಂದಾಗ ಮಾತ್ರವೇ ಕನ್ನಡ ಉಳಿದೀತು. ಉದ್ಧವ್ ಠಾಕ್ರೆಯಂತ ಲಕ್ಷ ಜನ ಬಂದರೂ ಕನ್ನಡ ಇತಿಹಾ ಸ ಅಳಿಸಲಾಗದು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ..
ಇಂದ *_ಹೆಚ್.ಬಿ.ಮೇಟಿ_*
No comments:
Post a Comment