✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Friday 26 March 2021

ತ್ರಿಕ್ (ಸೊಂಟ-ಬೆನ್ನು-ಕತ್ತು) ಶೂಲೆ ಮತ್ತು ಅದರ ಶಾಶ್ವತ ಪರಿಹಾರ.ಭಾಗ-4

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
27.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-43
••••••••••••••
✍️: ಇಂದಿನ ವಿಷಯ:
ತ್ರಿಕ್ (ಸೊಂಟ-ಬೆನ್ನು-ಕತ್ತು) ಶೂಲೆ ಮತ್ತು ಅದರ ಶಾಶ್ವತ ಪರಿಹಾರ.
ಭಾಗ-4
•••••••••••••••••••••••••••••••••••••••••

🌿 ತ್ರಿಕ್ ಶೂಲಕ್ಕೆ ಆಯುರ್ವೇದ ಚಿಕಿತ್ಸೆ ಅತ್ಯಂತ ಶ್ರೇಷ್ಠ.

📜 ವಾತಸ್ಯೋಪಕ್ರಮಃ *ಸ್ನೇ ಹ ಸ್ವೇದ..,ಸ್ನಿಗ್ಧೋಷ್ಣಾ ಬಸ್ತಯೋ………ಸ್ನೇಹಸ್ಯ ..... ತೈಲಾನುವಾಸನಮ್*||01-03||
- ಅಷ್ಟಾಂಗ ಹೃದಯ

🔅 ಬೆನ್ನಿನ ಸ್ನಾಯುಗಳು ಒಣಗಲು ಕಾರಣವೇನು?
ಒಣಗಿಸುವ ಗುಣವಿರುವ *ವಾತ* ಸ್ನಾಯುಗಳನ್ನು ಒಣಗಿಸುತ್ತದೆ.
(ಉದಾ:  ಚಳಿಗಾಲದಲ್ಲಿ ಬಟ್ಟೆಗಳೂ, ನಮ್ಮ ಚರ್ಮವೂ ಗಾಳಿಗೆ ಬಹು ಬೇಗ ಒಣಗಲು ಕಾರಣ *ಶೀತ* ಮತ್ತು *ರೂಕ್ಷ(ಒಣಗುವಿಕೆ)* ಗುಣ.

◾️ ಸ್ನೇಹ ಚಿಕಿತ್ಸೆ:
👉 ತ್ರಿಕಾದಿ ಸರ್ವ ಸಂಧಿಗಳನ್ನು ಒಣಗಿಸುವ ವಾತಕ್ಕೆ, ಹಸಿ ಮಾಡುವುದೇ ಚಿಕಿತ್ಸೆ. *ವಿಧಿಪೂರ್ವಕ ಸ್ನೇಹ ಪ್ರಯೋಗ ಮಾತ್ರ ಎಲ್ಲಾ ಸ್ನಾಯು, ಮಾಂಸಖಂಡ, ಸಂಧಿಗಳನ್ನು ಹಸಿ ಮತ್ತು ಮೃದುವಾಗಿಸುತ್ತದೆ.*

◾️ ಸ್ವೇದ ಚಿಕಿತ್ಸೆ:
👉 ಶೀತದಿಂದ ಸಂಕೋಚಗೊಂಡ ಸ್ನಾಯುಗಳು ಉಷ್ಣ ಚಿಕಿತ್ಸೆಯಿಂದ ವಿಕಾಸಗೊಳ್ಳುತ್ತವೆ.

ವಾತಜನ್ಯ ವ್ಯಾಧಿಗಳಿಗೆ ಪ್ರಮುಖ ಚಿಕಿತ್ಸೆಯಾದ *ಸ್ನೇಹನ-ಸ್ವೇದನ* ಗಳನ್ನು ವೈದ್ಯರು ಅನೇಕ ವಿಧಿವಿಧಾನಗಳಿಂದ ಮಾಡುತ್ತಾರೆ.

◾️ ಕಟಿಬಸ್ತಿ, ಪೃಷ್ಠಬಸ್ತಿ ಚಿಕಿತ್ಸೆ:
 (ಸ್ನೇಹ-ಸ್ವೇದಗಳ ಮಿಶ್ರಣ)
👉 ವಾತ ಶಾಮಕ ಔಷಧಿ ಸಿದ್ಧ ತಿಲತೈಲ ಬಳಸಿ ಸ್ನಿಗ್ಧಗೊಳಿಸುತ್ತಾರೆ. ಅದೇ ತೈಲವನ್ನು ಬಿಸಿಮಾಡಿ(This is not dry heat like hot water bag, IR heat etc.,) ಸ್ನಾಯು ಸಂಕೋಚಗಳನ್ನು ನಿವಾರಿಸುತ್ತಾರೆ. ಶೇ 90ರಷ್ಟು ಅವಸ್ಥೆಗಳಲ್ಲಿ ಇಷ್ಟು ಸಾಕು.

◾️ ಶಮನ ಚಿಕಿತ್ಸೆ:
👉 ವಾತ ಉತ್ಪತ್ತಿಯಾಗುವ ಮೂಲ ಸ್ಥಾನದಲ್ಲೇ ಶಮನಗೊಳಿಸುವ ಈ ಚಿಕಿತ್ಸೆ ಅತ್ಯಂತ ಮಹತ್ವದ್ದು. ಇದು ಮಲಪಾಚನ, ವಾತ ಶಮನ ಮತ್ತು ವಾತ ಹೊರಹಾಕುವ ಅನುಲೋಮನ ಮಾಡುತ್ತದೆ.

☑️ ಆಹಾರ-ವಿಹಾರದಲ್ಲಿ ಬದಲಾವಣೆ:
ಬಹಳ ಜನ ಆಯುರ್ವೇದ ಎಂದರೆ ಪಥ್ಯ ಎನ್ನುತ್ತಾರೆ. ಆದರೆ *ಪಥ್ಯಾಹಾರವು ವಿಕೃತಿಗೊಂಡ ನಿಮ್ಮ ಶರೀರಕ್ಕೇ ಹೊರತು ಆಯುರ್ವೇದ ಔಷಧಿಗಳಿಗಾಗಿ ಅಲ್ಲ.* 

*ಆಹಾರ-ವಿಹಾರಗಳನ್ನು ಸರಿಮಾಡದೇ ಯಾವ ಚಿಕಿತ್ಸೆಯೂ ಪೂರ್ಣವಲ್ಲ ಹಾಗೂ ಯಾವ ವ್ಯಾಧಿಯೂ ಶಾಶ್ವತ ಪರಿಹಾರವಾಗಲು ಸಾಧ್ಯವಿಲ್ಲ.* 
⤴️ ಇದೇ ಆಯುರ್ವೇದದ ಗುಟ್ಟು.

◾️ ದಾರುಣ ಮತ್ತು ದೀರ್ಘಕಾಲದ ತ್ರಿಕ್ ಶೂಲೆಗಳ ಚಿಕಿತ್ಸೆ:
👉 ತೀವ್ರ ಮತ್ತು ಬಹುಕಾಲದ ತ್ರಿಕ್ ಶೂಲೆಗೆ, ವಿರೇಚನ, ನಿರೂಹ, ಅನುವಾಸನ ಮುಂತಾದ ಸೂಕ್ಷ್ಮ ಮತ್ತು ಶಕ್ತಿಯುತ ಪಂಚವಿಧ ಶೋಧನ-ಶಮನ-ಪೋಷಣೆಗಳಂತಹ ಪರಿಪೂರ್ಣ ಚಿಕಿತ್ಸೆಗಳನ್ನು ತಜ್ಞ ವೈದ್ಯರು ಮಾಡುತ್ತಾರೆ.

👁 ಜನರ ಸಂದೇಹಗಳು:
ಅನೇಕರು ಆಯುರ್ವೇದದ ಬಗ್ಗೆ ಅತಿಯಾದ ಸಂದೇಹದಿಂದ ಚಿಕಿತ್ಸೆಗೆ ಬರುತ್ತಾರೆ. ಯಾವ ದುಷ್ಪರಿಣಾಮಗಳೂ ಇಲ್ಲದೇ ಅತ್ಯಂತ ಸಮರ್ಥವಾಗಿ ಚಿಕಿತ್ಸೆ ಮಾಡುವುದು ಎಲ್ಲಾ ಆಯುರ್ವೇದ ವೈದ್ಯರ ಉದ್ದೇಶ. ಇವರೂ ಸಹ ಪಂಚಕರ್ಮ ಚಿಕಿತ್ಸಾ ಮಹತ್ವವನ್ನರಿತು, ಆಯಾ ತಜ್ಞರ ಸಲಹೆ ಪಡೆಯುತ್ತಾರೆ. ಅಂತಹುದರಲ್ಲಿ *ಆಯುರ್ವೇದದ ಹೆಸರಿನಲ್ಲಿ ಕೇವಲ ಮಸಾಜ್ ಮಾಡುವವರೂ, ವೈದ್ಯರಲ್ಲದವರೂ, ಯೋಗ ತರಬೇತಿದಾರರೂ, ಗುರುಗಳ ಹೆಸರನ್ನಿಟ್ಟುಕೊಂಡವರೂ ತಮಗೆ ತಿಳಿದಂತೆ ಪಂಚಕರ್ಮ ಮಾಡುತ್ತಿದ್ದಾರೆ. ಇಂಥವರ ಬಳಿ ಚಿಕಿತ್ಸೆಗೆ ತೆರಳಿ ತೊಂದರೆಗೊಳಗಾಗುವ ಮೊದಲು ಎಚ್ಚರದಿಂದಿರಿ.*

ಆಯುರ್ವೇದದಲ್ಲಿ ಬೇಗ ಗುಣವಾಗುವುದಿಲ್ಲ ಎಂಬ ಸಾಮಾನ್ಯವಾಗಿ ಹರಿದಾಡುವ ಮಿಥ್ಯೆಯನ್ನು ನಂಬಿದ್ದರೆ ಗಮನಿಸಿ- ಕೇವಲ ಅರ್ಧ ಗಂಟೆಯ ಒಂದು ಚಿಕಿತ್ಸೆಯಿಂದ ಹೊತ್ತುಕೊಂಡು ಬಂದವರನ್ನು ನಡೆಸಿ ಕರೆದುಕೊಂಡು ಹೋದ ಅನೇಕ ಉದಾಹರಣೆಗಳು ನಮ್ಮ ಕೇಂದ್ರದಲ್ಲೇ ಇವೆ. 
ನಮ್ಮ ಶರೀರವೊಂದು ಜೀವಂತ ವ್ಯವಸ್ಥೆ, ಹಳೆಯ ತೊಂದರೆ ಸರಿಪಡಿಸಿಕೊಳ್ಳಲು ಮತ್ತು ನೈಸರ್ಗಿಕವಾಗಿ ಬೆಳೆಯಲು ತನ್ನದೇ ಆದ ಸಮಯ ಬೇಕು, ನಮ್ಮ ಆತುರಕ್ಕೆ ಮಗುವೊಂದು ಒಮ್ಮೆಗೇ ಯುವಕನಾಗಲಾರದು.

👉 ಆತುರತೆಯೇ?:
ಅಲೋಪಥಿ ಆಸ್ಪತ್ರೆಗಳಲ್ಲಿ ಬೇರೆ ಬೇರೆ ಡಿಪಾರ್ಟ್ ಮೆಂಟ್ ಗಳನ್ನು ತೋರಿಸಿ ನಮ್ಮ ವಿಭಾಗದ ಕೆಲಸ ಆಗಿದೆ, ಅವರ ವಿಭಾಗಕ್ಕೆ ಹೋಗಿ! ಎನ್ನುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಒಂದು ಚಿಕಿತ್ಸೆಗೆ ಇನ್ನೊಂದು ವ್ಯಾಧಿ ಬಳುವಳಿಯಾದರೆ ತೊಂದರೆ ಅನುಭವಿಸುವ ಶರೀರ ಯಾರದು? 
(ಉದಾ: ಅಲರ್ಜಿಕ್ ಕಾಯಿಲೆಗಳಿಗೆ ಕೊಡುವ ಸಣ್ಣ ಔಷಧಗಳೂ ಮೂಳೆ ಸವೆತ ಮಾಡಿ ಮೂಳೆ ತಜ್ಞರತ್ತ ಹೊರಳಿಸುತ್ತವೆ, ಮುಟ್ಟಿನ ತೊಂದರೆಯ ಹಾರ್ಮೋನ್ ಚಿಕಿತ್ಸೆ ಸ್ಥೌಲ್ಯ, ಮಧುಮೇಹ ತರುತ್ತವೆ. ಇದು ವೈದ್ಯರಿಗೆ ಸ್ಪಷ್ಟವಾಗಿ ಗೊತ್ತಿದೆ, ಆದರೆ ಆ ವಿಜ್ಞಾನದ ಸೀಮಿತತೆ ಅಷ್ಟೇ. ಆದರೂ ಅದು ಚಿಕಿತ್ಸೆಯ ಬಳುವಳಿ ಎಂದು ನಾವು ಒಪ್ಪದಂತೆ ಇರುವುದು ಆಶ್ಚರ್ಯ!!!

ಆಯುರ್ವೇದ ವೈದ್ಯ ರೋಗಿ ಹೇಳಿದ ತೊಂದರೆಯನ್ನಷ್ಟೇ ಅಲ್ಲದೇ ಎಲ್ಲಾ ಸಮಸ್ಯೆಗಳ ಇತಿಹಾಸ ಪಡೆದು, ಎಲ್ಲವನ್ನೂ ಗಮನಿಸಿ, ಒಂದೇ ಚಿಕಿತ್ಸೆಯಲ್ಲಿ ಹಲವಾರು ವ್ಯಾಧಿಗಳನ್ನು ಗುಣಪಡಿಸುತ್ತಾನೆ. ಇದಕ್ಕೆ ತನ್ನದೇ ಸಮಯ, ನಿಷ್ಠೆ ಬೇಕಾಗುತ್ತದೆ.

*ಆಯುರ್ವೇದದಿಂದ ಗುಣ ಪಡಿಸಿಕೊಂಡ ತ್ರಿಕ್ ಶೂಲಗಳು ಅಪಾಯರಹಿತ, ದೀರ್ಘಕಾಲಿಕ ಪರಿಹಾರ. ಶಸ್ತ್ರಚಿಕಿತ್ಸೆಗೆ ಹೋಗುವ ಬದಲು ಮನೆಯಲ್ಲೇ ವಿರಮಿಸಿ, ಆಯುರ್ವೇದದ ಉಪದೇಶ ಪಾಲಿಸಿ ಶೇ 90ರಷ್ಟು ವ್ಯಾಧಿಗಳು ವಾಸಿಯಾಗುತ್ತವೆ. ಆಗದಿದ್ದರೆ ಮಾತ್ರ ಔಷಧೋಪಚಾರಗಳು ಮತ್ತು ಪಂಚಕರ್ಮ ಮುಂತಾದ ಚಿಕಿತ್ಸೆಗಳು ಬೇಕು.*
🙏ಧನ್ಯವಾದಗಳು 🙏

Monday 22 March 2021

ಬಹುವಾಗಿ ಕಾಡುವ *ತ್ರಿಕ್ (ಸೊಂಟ-ಬೆನ್ನು-ಕತ್ತು) ನೋವು* ಮತ್ತು ಅದರ ಶಾಶ್ವತ ಪರಿಹಾರ. ಭಾಗ-3

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
22.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-42
••••••••••••••
✍️: ಇಂದಿನ ವಿಷಯ:
ಬಹುವಾಗಿ ಕಾಡುವ *ತ್ರಿಕ್ (ಸೊಂಟ-ಬೆನ್ನು-ಕತ್ತು) ನೋವು* ಮತ್ತು ಅದರ ಶಾಶ್ವತ ಪರಿಹಾರ.
 ಭಾಗ-3
•••••••••••••••••••••••••••••••••••••••••

🏷 ವಿಶೇಷಸ್ತು…………. ಕ್ಷಾರಂ ಪಿಬೇನ್ ನರಃ
||89|| 
ಪಾಚನೈಃ ದೀಪನೈಃ………. *ಪಾಚಯೇತ್ ಮಲಾನ್||90||*
- ಚರಕ ಸಂಹಿತಾ. ವಾತ ಚಿಕಿತ್ಸಾಧ್ಯಾಯ 28

🔹 ಆಚಾರ್ಯ ಚರಕರು, ತ್ರಿಕ್ ಶೂಲ ಚಿಕಿತ್ಸೆಯಾಗಿ-
• ಕ್ಷಾರ(ಪ್ರತ್ಯಾಮ್ಲ) ಯೋಜನೆ 
• ಹಸಿವು ವರ್ಧನೆ
• ಜೀರ್ಣಕ್ರಿಯೆ ವೃದ್ಧಿ
ಮತ್ತು 
ಮುಖ್ಯವಾಗಿ 
*• ಮಲಪಾಚನ*
ಹೇಳುತ್ತಾರೆ. 

ಒಟ್ಟಾರೆ,
*ಮಲೋತ್ಪತ್ತಿ ಸರಿಯಾಗಿ ಆಗದಿರುವುದೇ ಸೊಂಟ, ಬೆನ್ನು ಕತ್ತು ನೋವುಗಳಿಗೆ ಕಾರಣ ಎಂದು ಈ ಚಿಕಿತ್ಸಾ ಸೂತ್ರದಿಂದ ತಿಳಿದುಬರುತ್ತದೆ.*

***

📝 ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳನ್ನು ನೋಡೋಣ.

🔺 ವಿ.ಸೂಚನೆಗಳು:
1. ಇಲ್ಲಿ ವಿಶದಪಡಿಸುವ ಪರಿಹಾರಗಳು, ನಿರಂತರ, ತೀವ್ರ ಮತ್ತು ಬಹುಕಾಲದ ತ್ರಿಕ್ ಶೂಲಗಳನ್ನೂ ಸಹ ನಿವಾರಿಸಲು ಸಮರ್ಥವಾಗಿವೆ, ಅಳವಡಿಸಿಕೊಂಡರೆ ಪರಿಹಾರ ನಿಶ್ಚಿತ. ಆದರೆ ಅಪಘಾತಾದಿ ಅತ್ಯುಗ್ರ ಮತ್ತು ತೀಕ್ಷ್ಣ ಅವಸ್ಥೆಗಳಲ್ಲಿ ಮಾತ್ರ ಈ ಪರಿಹಾರಕ್ಕೆ ಮುಂದಾಗಬಾರದು.

2. ಈ ಪರಿಹಾರಗಳನ್ನು ನಿತ್ಯವೂ ಸ್ವಲ್ಪ ಸ್ವಲ್ಪವಾಗಿ ಅಳವಡಿಸಿಕೊಂಡು 16ನೇ ದಿನಕ್ಕೆ ಪರಿಪೂರ್ಣ ಪಾಲಿಸಬೇಕೇ ಹೊರತು, ಮೊದಲನೇ ದಿನವೇ ಹೇಳಿದುದಕ್ಕಿಂತ ಹೆಚ್ಚು ಮಾಡಿ ತೊಂದರೆಯನ್ನು ಹೆಚ್ಚು ಮಾಡಿಕೊಳ್ಳಬಾರದು.

👉 ಪರಿಹಾರಗಳು:

*⃣ ಆಹಾರ-ನಿದ್ರೆಗೆ ಸಂಬಂಧಿಸಿದ ವಿಷಯಗಳು:
ಎಲ್ಲಾ ತ್ರಿಕ್ ಶೂಲಗಳಿಗೂ ಮಲ ಉತ್ಪತ್ತಿಯನ್ನು ಸುಗಮಗೊಳಿಸುವುದೇ ಶಾಶ್ವತ ಪರಿಹಾರವಾಗಿದೆ. ಆದ್ದರಿಂದ-

1. ರಾತ್ರಿ ಆಹಾರವನ್ನು 7:30ರೊಳಗೆ ಮುಗಿಸಿಬಿಡಿ. ಯಾವ ಕಾರಣಕ್ಕೂ ರಾತ್ರಿ ಅತಿಪ್ರಮಾಣ ಅಥವಾ ಶಕ್ತಿಯುತ ಆಹಾರ ಸೇವನೆ ಮಾಡಬೇಡಿ.

2. ಸುಲಭವಾಗಿ ಜೀರ್ಣಿಸಿಕೊಳ್ಳುವಷ್ಟು ಮಾತ್ರ ಆಹಾರ ಸೇವಿಸಿ ಅಥವಾ ಸೇವಿಸಿದ ಪ್ರಮಾಣಕ್ಕೆ ಸಮಸಮವಾಗಿ ಬೆವರು ಬರುವ ಕೆಲಸ ಮಾಡಿ.

3. ಒಂದು ಊಟದ ನಂತರ ಮತ್ತೆ ಹಸಿವಾಗುವವರೆಗೆ ಏನನ್ನೂ ಸೇವಿಸಬೇಡಿ, ಸಮಯವಾಯಿತು, ಗ್ಯಾಸ್ ಆಗುತ್ತದೆ, ವಿಜ್ಞಾನ ಹೇಳಿದೆ, ವೈದ್ಯರು ಹೇಳಿದ್ದಾರೆ ಎಂದೆಲ್ಲಾ ಯೋಚಿಸಿ ಪದೇ ಪದೇ ತಿನ್ನುವ ಬದಲು ನಿಮ್ಮ ನಿಮ್ಮ ಹೊಟ್ಟೆಯ ಮಾತನ್ನು ಕೇಳಿರಿ. ಅದಕ್ಕಿಂತ ದೊಡ್ಡ personal ವೈದ್ಯ ಇಲ್ಲ.

4. ಅತ್ಯಂತ ಶಕ್ತಿಯಿಂದ ಕೂಡಿದ ಮೊಳಕೆಕಾಳುಗಳನ್ನು ಮತ್ತು ಯಾವುದೇ ಪ್ರೋಟೀನ್ ಆಹಾರವನ್ನು ಸೇವಿಸುವ ವಿಧಾನ ತಿಳಿದುಕೊಂಡು ಬಳಸಿ,‌ ಆಗದಿದ್ದಲ್ಲಿ ಸಂಪೂರ್ಣವಾಗಿ ನಿಲ್ಲಿಸಿ, ಇಲ್ಲದಿದ್ದರೆ ಗ್ಯಾಸ್ ಉಂಟಾಗಿ ಸ್ನಾಯುಗಳು ಒಣಗುತ್ತವೆ.

5. ಅತಿಯಾದ ಜಲಸೇವನೆ ನಂತರ ಮತ್ತು ಪಚನವಾಗದ ಆಹಾರ ಸೇವನೆ ನಂತರ ತೀವ್ರ ಶಾರೀರಿಕ ಕೆಲಸ ಮಾಡಿದರೆ ಅಗ್ನಿಯು ತೀವ್ರ ಮಂದವಾಗಿ, ಅಜೀರ್ಣ, ಮಲಬದ್ಧತೆಯನ್ನುಂಟುಮಾಡುತ್ತದೆ. ಇದು ಕೆಲವರಲ್ಲಿ ಆಮವಾತದಿಂದ ಆರಂಭಿಸಿ, ankylosing spondylitis ವರೆಗೆ ತೊಂದರೆ ತರುತ್ತವೆ, ಹಾಗಾಗಿ ಲೆಕ್ಕ ಮಾಡಿ ಹೆಚ್ಚು ಹೆಚ್ಚು ಜಲಸೇವನೆ, ಹೆಚ್ಚು ಆಹಾರ ಸೇವನೆ ಮಾಡುವ ಬಗ್ಗೆ ಎಚ್ಚರ ವಹಿಸಿ.

6. ಉದ್ದಿನಬೇಳೆ ಮಲವನ್ನು ಹೆಚ್ಚಿಸುವ ಕಾರಣ, ಸೊಂಟನೋವಿಗೆ ಕಾರಣವಾಗುತ್ತದೆ. ಅತಿ ದುರ್ಬಲತೆಯಿಂದ ಬಂದ ಸೊಂಟ ನೋವಿನಲ್ಲಿ, ಚಿಕಿತ್ಸಾ ದೃಷ್ಟಿಯಿಂದ ಸೇವಿಸಬಹುದು, ಆದರೆ ನಿತ್ಯ ಆಹಾರವಾಗಿ ಅಲ್ಲ.

7. ಕಾಫಿ, ಟೀ ಸೇವನೆಯಿಂದ ಸ್ನಾಯುಗಳು ಒಣಗುತ್ತವೆ, ಹಾಗಾಗಿ ಪೂರ್ಣ ನಿಲ್ಲಿಸುವುದೊಳಿತು. ಆಗದದಿದ್ದವರು ದಿನಕ್ಕೆ ಒಂದು-ಎರೆಡು ಬಾರಿ ಅತ್ಯಲ್ಪ ಪುಡಿ ಬಳಸಿ ತಯಾರಿಸಿ ಸೇವಿಸಬಹುದು.

8. ನಿದ್ದೆಗೆ ಈ ಜಗತ್ತಿನಲ್ಲಿ ಪರ್ಯಾಯವೇ ಇಲ್ಲ, ತಡರಾತ್ರಿ ನಿದ್ದೆ ಮಾಡುವುದರಿಂದ, ಶರೀರದ ಪ್ರಾಕೃತ ಸ್ನೇಹಾಂಶವೇ ಒಣಗಿ ಸ್ನಾಯುಗಳು ಒಣಗುತ್ತವೆ, ಇನ್ನೂ ಕೆಲವರಲ್ಲಿ ನಿದ್ರೆ ತೊಂದರೆಯಿಂದ ವಿಕೃತ ಸ್ನೇಹ(ಕ್ಲೇದ) ಸಂಚಯವಾಗಿ ಸ್ಥೂಲದೇಹಿಗಳಾಗಿರುತ್ತಾರೆ, ಆಗಲೂ ಸ್ನಾಯುಗಳು ಒಣಗುತ್ತವೆ. ಹಾಗಾಗಿ ರಾತ್ರಿ ಊಟದ ನಂತರ 90ನಿಮಿಷ ಆರಾಮವಾಗಿ ಕುಳಿತುಕೊಂಡಿದ್ದು ನಂತರ 100 ಹೆಜ್ಜೆ ನಡೆದು, ಮೂತ್ರ ವಿಸರ್ಜಿಸಿ ಮಲಗಿಬಿಡಿ.

ಇನ್ನು,
*⃣ ವ್ಯಾಯಾಮಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ನೋಡೋಣ:

1. ಬೆನ್ನಿನ ಸ್ನಾಯುಗಳಿಗೆ ಕೆಲಸ ಕೊಡುವುದೇ ಸರ್ವಶ್ರೇಷ್ಠ ಉಪಾಯ. ಶರೀರದ ಎಲ್ಲಾ ಸ್ನಾಯುಗಳಿಗೆ ಸಣ್ಣ ಕೆಲಸಗಳಿಂದಲೇ ವ್ಯಾಯಾಮವಾಗುತ್ತದೆ ಆದರೆ ಬೆನ್ನಿನ ಸ್ನಾಯುಗಳಿಗೆ ವಿಶೇಷ ರೀತಿಯ ಭಂಗಿಗಳು ಬೇಕಾಗುವುದರಿಂದ, ಎಲ್ಲಾ ವ್ಯಾಯಾಮಗಳಿಗಿಂತ ಅತೀ ಹೆಚ್ಚು ಫಲದಾಯಕ ವ್ಯಾಯಾಮ ಎಂದರೆ *ಈಜುವುದು*, ದಿನಕ್ಕೆ 48 ನಿಮಿಷ ಈಜುವುದನ್ನು ರೂಢಿಸಿಕೊಳ್ಳಿ ಎಲ್ಲಾ ತ್ರಿಕ್ ಶೂಲಗಳೂ ಶಾಶ್ವತವಾಗಿ ದೂರವಾಗುತ್ತವೆ. 

ಅಥವಾ

2. ವಿಶೇಷ ರೀತಿಯ ಭಂಗಿಗಳ ಇರುವ ಸೂರ್ಯನಮಸ್ಕಾರ ಮಾಡಬಹುದು(ಒಂದೇ ದಿನಕ್ಕೆ ಹೆಚ್ಚು ಬೇಡ).

3. ಪದೇ ಪದೇ ಮೆಟ್ಟಿಲು ಹತ್ತಿ ಇಳಿಯುವುದು ವ್ಯಾಯಾಮವಾಗುವ ಬದಲು, ನೇರವಾಗಿ lumbar discಗೆ ಒತ್ತಡಬೀಳುವುದರಿಂದ ಅತ್ಯಂತ ದಾರುಣ ನೋವನ್ನು ಅನುಭವಿಸುತ್ತೀರಿ, ಹಾಗಾಗಿ ಸಾಧ್ಯವಾದಷ್ಟು ಹತ್ತಿಳಿಯುವುದನ್ನು ನಿಲ್ಲಿಸಿ, ಅನಿವಾರ್ಯ ಪ್ರಸಂಗದಲ್ಲಿ ಹಗುರವಾಗಿ ಹತ್ತಿಳಿಯಿರಿ. ಆ ಕಾಲದಲ್ಲಿ ಮೇಲಿನ ಮನೆಯ ಕಲ್ಪನೆ ಅತ್ಯಂತ ಕಡಿಮೆ ಇತ್ತು, ಈಗ ಈ ತರಹದ ಮನೆ ಜೊತೆಗೆ ಸೊಂಟನೋವು ಬಳುವಳಿ.

4. ನಿತ್ಯವೂ ಶಾರೀರಿಕ ಶ್ರಮದ ವ್ಯಾಯಾಮ ಮಾಡಿದ ನಂತರ ಬೆನ್ನು ಮತ್ತು ಕಾಲುಗಳನ್ನು ಮೃದುವಾಗಿ ಒತ್ತಿಸಿಕೊಳ್ಳಿ.

5. ಕತ್ತು ಮತ್ತು ಬೆನ್ನು ನೋವಿಗೆ ತೈಲ ಹಚ್ಚುವ ಬದಲು, ಶುಷ್ಕಪೀಡನ(ಎಣ್ಣೆ ಹಚ್ಚದೇ ಹಿಚುಕುವುದು) ಮತ್ತು ಒಣ ಶಾಖ ತೆಗೆದುಕೊಳ್ಳುವುದು ಅತ್ಯಂತ ಸೂಕ್ತ.

6. ಆದರೆ ಸೊಂಟಕ್ಕೆ ಮಾತ್ರ ತೈಲ ಹಚ್ಚಿ ಬಿಸಿನೀರನ್ನು ಹಾಕಿಕೊಳ್ಳುವುದು ಸೂಕ್ತ.

7. ಮಕ್ಕಳಾದಿ ಎಲ್ಲರೂ ನಿತ್ಯವೂ ಎಣ್ಣೆ ಸವರಿಕೊಂಡು ಬಿಸಿನೀರ ಸ್ನಾನ ಮಾಡುವುದು ಸರಿಯಾದ ಪದ್ಧತಿ. ಆದರೆ ವಸಂತ ಋತುವಿನಲ್ಲಿ(ಮಾರ್ಚ್-ಏಪ್ರಿಲ್-ಮೇ) ಎಣ್ಣೆ, ಬಿಸಿ ನೀರು ಸೂಕ್ತವಲ್ಲ.

        🙏ಧನ್ಯವಾದಗಳು 🙏
••••••••••••••

Sunday 21 March 2021

ಬಹುವಾಗಿ ಕಾಡುವ *ಸೊಂಟ-ಬೆನ್ನು-ಕತ್ತು ನೋವು* ಮತ್ತು ಅದರ ಶಾಶ್ವತ ಪರಿಹಾರ. ಭಾಗ-2

🙏ಅಮೃತಾತ್ಮರೇ ನಮಸ್ಕಾರ 🙏
 ☀️ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ☀️
     🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🍀
••••••••••••••••••••••••••••••••••••••••••
21.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-41
••••••••••••••
✍️: ಇಂದಿನ ವಿಷಯ:
ಬಹುವಾಗಿ ಕಾಡುವ *ಸೊಂಟ-ಬೆನ್ನು-ಕತ್ತು ನೋವು* ಮತ್ತು ಅದರ ಶಾಶ್ವತ ಪರಿಹಾರ.
 ಭಾಗ-2
•••••••••••••••••••••••••••••••••••••••••

📖 ಗುರ್ವಂಗಂ ತುದ್ಯತೇ........|
ಭೇದೋ ಅಸ್ಥಿ ಪರ್ವಾಣಾಂ.....ಮಾಂಸ ಬಲ ಕ್ಷಯಃ ||
-ಚರಕ ಸಂಹಿತಾ

🖌 ಸೊಂಟ-ಬೆನ್ನು-ಕತ್ತು ನೋವುಗಳ ಉತ್ಪತ್ತಿ ಹೇಗೆ ಆಗುತ್ತದೆ?
• ದೊಡ್ಡ ಕರುಳಿನಲ್ಲಿ ಆಹಾರದ ಶೇಷ ದ್ರವ್ಯಗಳನ್ನು ದ್ರವರೂಪದಲ್ಲಿ ಹೀರಿಕೊಳ್ಳುವ ಮತ್ತು ಮಲವನ್ನು ಗಟ್ಟಿಗೊಳಿಸುವ ವ್ಯವಸ್ಥೆ ಇದೆ. ಈ ಕರುಳಿಗೆ ಊತ ಬಂದರೆ, ದ್ರವವನ್ನು ಹೀರಿಕೋಳ್ಳುವ ಸಾಮರ್ಥ್ಯ ಕ್ಷೀಣವಾಗಿ ಪ್ರಾಕೃತ ಮಲೋತ್ಪತ್ತಿಯಾಗುವುದಿಲ್ಲ. ಇಂತಹ ಅವಸ್ಥೆಯಲ್ಲಿ ಕರುಳು ಅಪಕ್ವ ಮಲವನ್ನು ಹಿಡಿದಿಟ್ಟು (“ಅಪಕ್ವಂ ಧಾರಯತಿ” ಗುಣದಿಂದ),  ಹೀರಿಕೊಳ್ಳುವ ಬದಲು ಜಲವನ್ನು ಶರೀರದೊಳಕ್ಕೆ ಒತ್ತಡಪೂರ್ವಕವಾಗಿ ತಳ್ಳಲು ಬಲವಾದ ಅಸಹಜ ವಾತವನ್ನು ಉತ್ಪತ್ತಿಮಾಡಿಬಿಡುತ್ತದೆ. ಹೀಗೆ ನಿರಂತರ 14 ದಿನಗಳವರೆಗೆ ಉಂಟಾದ ವಾಯುವು ತನ್ನ ಸ್ಥಾನವಾದ ಕಟಿ(ಸೊಂಟಕ್ಕೆ)ಗೆ ವರ್ಗಾವಣೆಯಾಗುತ್ತದೆ. ಆಗ ಅಲ್ಲಿರುವ ಮೆದುವಾದ ಮಾಂಸಖಂಡಗಳು ಮತ್ತು ಸ್ನಾಯುಗಳ ಸ್ನೇಹಾಂಶವನ್ನು ಹೀರಿಕೊಂಡು ವಾತವು ಶಾಂತವಾಗುತ್ತದೆ, ಆದರೆ ಸ್ನಾಯುಗಳು ಒಣಗಿ ಕುಗ್ಗುತ್ತವೆ. ಬಲ ಅಥವಾ ಎಡಕ್ಕೆ ಕುಗ್ಗಿದ ಸ್ನಾಯುವಿನ ಕಾರಣ discಗಳ ಮೇಲೆ ಸೂಕ್ಷ್ಮವಾಗಿ ಒತ್ತಡ ಆರಂಭವಾಗುತ್ತದೆ. ಇದೇ ನೋವಿನ ಆರಂಭ, ಇದು ಯಾವ ಸ್ನಾಯುವನ್ನು ಹಿಡಿದುಕೊಂಡಿದೆ ಎಂಬ ಆಧಾರದಲ್ಲಿ ನೋವು ಕತ್ತಿಗೋ, ಬೆನ್ನಿಗೋ ಅಥವಾ ಸೊಂಟಕ್ಕೋ ಬರುತ್ತದೆ.

🖌 ಸಾಮನ್ಯವಾಗಿ ಸೊಂಟ-ಬೆನ್ನು-ಕತ್ತು ನೋವುಗಳು ಯಾವಾಗಲೂ ಮೂಳೆ ತೊಂದರೆಗೇ ಸಂಬಂಧಿಸಿರುವುದಿಲ್ಲ:
● ಬೆನ್ನಿನಲ್ಲಿರುವ ಮಾಂಸಖಂಡಗಳ, ಸ್ನಾಯುಗಳು ನಮ್ಮ ಶಿರಸ್ಸಿನಿಂದ(skull) ಆರಂಭವಾಗಿ ಭುಜದ ಕೆಳಗೆ ಇರುವ ಅಂಶಾಸ್ಥಿ(Scapula) ಮತ್ತು ಕಟಿಯಲ್ಲಿರುವ ಅಗಲವಾದ ಭಗಾಸ್ಥಿ(Hip bone)ಗಳವರೆಗೆ ಹರಡಿಕೊಂಡಿವೆ ಮತ್ತು ಪ್ರತಿ ಕಶೇರುಕ ಮೂಳೆಗೂ ಬಲವಾಗಿ ಅಂಟಿರುವ ಶಕ್ತಿಯುತ ಸ್ನಾಯುಗಳು ಕತ್ತಿನ 7 + ಬೆನ್ನಿನ12 + ಕಟಿಯ5 + ತ್ರಿಕಾಸ್ಥಿಯ 1 (ಪರಸ್ಪರ ಅಂಟಿಕೊಂಡ 5) ಕಶೇರುಕ ಮಣಿಗಳನ್ನು ಒಂದು ನಿರ್ದಿಷ್ಟ ಅಂತರದಲ್ಲಿ ನೇರವಾಗಿ ಹಿಡಿದಿರಿಸಿರುತ್ತವೆ. *ಈ ಸ್ನಾಯುಗಳಲ್ಲಿ ಉಂಟಾಗುವ ಬಹುಕಾಲದ ಸಂಕೋಚವೇ ಕತ್ತು, ಬೆನ್ನು ಅಥವಾ ಸೊಂಟದ ನೋವುಗಳಿಗೆ ಕಾರಣವೇ ಹೊರತು, discಗಳು ಅಲ್ಲ, ನೇರವಾಗಿ ಮೂಳೆಗಳಂತೂ ಅಲ್ಲವೇ ಅಲ್ಲ!
  ದಾರುಣ ಹಂತದಲ್ಲಿ, ಅಪಘಾತಾದಿ ಕಾರಣಗಳಲ್ಲಿ ಮಾತ್ರ ಕಶೇರುಕ ಮೂಳೆಗಳ ನೇರ ಪಾತ್ರ ಇರುತ್ತದೆ.

ಇಲ್ಲಿ ಮೂಳೆ ತಜ್ಞರ, ಚಿಕಿತ್ಸಕರ ಪಾತ್ರ ಬಹಳ ಕಡಿಮೆ. ಏಕೆಂದರೆ ಸಾಮಾನ್ಯವಾಗಿ ಇದಕ್ಕೆ ಕೊಡುವ ಮಾತ್ರೆಗಳೆಂದರೆ ಸ್ನಾಯುಗಳ ಬಿಗಿತವನ್ನು ಬಿಡಿಸುವ Muscles relaxants, NSAID ಮಾತ್ರೆಗಳು. ಇವುಗಳ ಸೇವನೆಯಿಂದ ತತ್ಕ್ಷಣದ ಪರಿಣಾಮ ತೋರಿದರೂ, ಆ ನೋವು ನಿವಾರಕ ಮತ್ತು ಊತನಿವಾರಕ ಮಾತ್ರೆಗಳ ಕಾರಣದಿಂದಲೇ ಕರುಳಿನಲ್ಲಿ ಹೆಚ್ಚು ಊತ ಬಂದು ಮತ್ತೆ ಗ್ಯಾಸ್ ಉತ್ಪತ್ತಿ ಹೆಚ್ಚುವುದರಿಂದ ಬೆನ್ನುನೋವು ಮೊದಲಿಗಿಂತ ಹೆಚ್ಚಾಗುತ್ತದೆ!! ವಿಟಮಿನ್ ಮಾತ್ರೆಗಳು ಸ್ವಲ್ಪ ಬಲ ಕೊಟ್ಟಂತೆ ಕಂಡರೂ, ಇರುವ ಮೂಲ ಕಾರಣವನ್ನು ನಿವೃತ್ತಿ ಮಾಡಲಾರವು! ಕೆಲವೇ ದಿನಗಳಲ್ಲಿ ಮತ್ತೆ ನೋವು ಬಂದೇ ಬರುತ್ತದೆ. 
ವಾತ ಕಡಿಮೆಯಾಗಿ ನಮ್ಮ ಸ್ನಾಯುಗಳಲ್ಲಿ ಹಿಗ್ಗುವ ಶಕ್ತಿ ಮರಳಿದರೆ ಫಿಜಿಯೋಥೆರಪಿ ಬಹಳ ಉಪಕಾರ ಮಾಡುವುದಾದರೂ, ಒಣಗಿದ ಸ್ನಾಯುಗಳನ್ನಿಟ್ಟುಕೊಂಡು ಫಿಜಿಯೋಥೆರಪಿ ಮಾಡಿದರೆ ಅವು ಹರಿಯುವ(tear) ಸಾಧ್ಯತೆ ಹೆಚ್ಚು ಮತ್ತು ಸ್ನಾಯುಗಳನ್ನು ಒಣಗಿಸುವ ಮೂಲಕಾರಣ ನಿವಾರಣೆಯಾಗದೇ ಇರುವುದರಿಂದ ಸಮಸ್ಯೆ ಮತ್ತೆ ಮೊದಲಿಗಿಂತ ಜೋರಾಗಿ ಮರುಕಳಿಸುತ್ತದೆ!!

♨️ ದಾರುಣತೆಯ ಹಂತ: 
ಮೂಳೆಗಳ ನಡುವೆ ಇರುವ ಮೆತ್ತನೆಯ ಸ್ಪಂಜಿನಾಕಾರದ inter vertebral discಗಳಿಗೆ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ. ಹಾಗಾಗಿ, ಬೆನ್ನಿನ ಸ್ನಾಯುಗಳ ಸಂಕೋಚ discಗಳನ್ನೂ ಮತ್ತು discಗಳು ನರಗಳನ್ನು ಒತ್ತುತ್ತವೆ, ದೀರ್ಘ ಕಾಲ ಉಪಶಮನಗೊಳಿಸದಿದ್ದರೆ discಗಳು ಒಡೆದು ಕಶೇರುಕಗಳ ಅಂತರವನ್ನು ಕಡಿಮೆ ಮಾಡುವುದರಿಂದ ಗೃಧ್ರಸಿ(sciatica)ಯಂತಹ ತೀವ್ರ ತೊಂದರೆಗಳು ಬರುತ್ತವೆ. ಈ ಹಂತದಲ್ಲಿ ಕುಳಿತರೂ ನಿಂತರೂ ಕೆಲವೊಮ್ಮೆ ಮಲಗಿದರೂ ತಡೆಯಲಾರದ ದಾರುಣ ಸ್ಥಿತಿ ತಲುಪುತ್ತೇವೆ.

🖌 ಶಸ್ತ್ರಚಿಕಿತ್ಸೆ ಅನಗತ್ಯ:
ಸ್ನಾಯುಗಳ ಹಂತದಲ್ಲೇ ಇರಲಿ, ದಾರುಣ ಸ್ಥಿತಿ ಇರಲಿ, ನೇರವಾಗಿ ಶಸ್ತ್ರಚಿಕಿತ್ಸೆಗೆ ಹೋಗದೇ ತಾಳ್ಮೆಯಿಂದ ಆಯುರ್ವೇದ ಚಿಕಿತ್ಸೆ ಮಾಡಿಸಿಕೊಂಡರೆ ಶಾಶ್ವತ ಪರಿಹಾರವನ್ನು ಕಾಣಬಹುದು. ಶಸ್ತ್ರಚಿಕಿತ್ಸೆಯಿಂದ ಕೇವಲ ತೊಂದರೆ ಎಂದು ಕಂಡುಬರುವ 1-2 ಸ್ಥಾನಗಳನ್ನು ಮಾತ್ರ ಸರಿಗೊಳಿಸಲು ಯತ್ನಿಸುತ್ತಾರೆ, ಆದರೆ ಅನ್ಯ ಕಶೇರುಕಗಳ ಸ್ಥಾನಗಳು ಮತ್ತು ಉತ್ಪತ್ತಿಯ ಮೂಲ ಹಾಗೇ ಉಳಿದುಕೊಳ್ಳುವುದರಿಂದಲೂ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ತನ್ನದೇ ಆದ ಅನೇಕ ದುಷ್ಪರಿಣಾಮಗಳು ಇರುವುದರಿಂದಲೂ ಯೋಚಿಸಿ ನಿರ್ಧರಿಸುವುದೊಳಿತು.

🚫 ಮಸಾಜ್ ಬೇಡ ಎಚ್ಚರಿಕೆ!:
 ಕತ್ತು, ಬೆನ್ನು, ಸೊಂಟಕ್ಕೆ ಎಣ್ಣೆ ಮಸಾಜ್ ಮಾಡಿಸಿದರೆ ಸ್ನಾಯುಗಳು ಮತ್ತಷ್ಟೂ ಊದಿಕೊಂಡು ಸಮಸ್ಯೆ ಅತ್ಯಂತ ದಾರುಣಸ್ಥಿತಿಗೆ ತಲುಪುತ್ತದೆ!!

ಇಷ್ಟೊಂದು ಕಷ್ಟ ಕೊಡುವ ಈ ನೋವುಗಳನ್ನು ಆರಂಭಿಕ ಹಂತದಲ್ಲಿ ಅತ್ಯಂತ ಸರಳವಾಗಿ ಮನೆಯಲ್ಲಿಯೇ ವಾಸಿಮಾಡಿಕೊಳ್ಳಬಹುದು.

🔜 ನಾಳಿನ ಸಂಚಿಕೆಯಲ್ಲಿ ನೋಡೋಣ......

         🙏ಧನ್ಯವಾದಗಳು 🙏

•••••••••••••

Saturday 20 March 2021

ಮೆದುಳಿನ ಕಾರ್ಯ ವೈಖರಿಯು ಹಾಗೂ ಪರಿಣಾಮಗಳು...

ಎಂದೋ ನಡೆದುಹೋದ ಕಹಿ ಗಳಿಗೆಗಳನ್ನು ಪ್ರತೀ ಬಾರಿ ನೆನೆದಾಗಲೂ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಕ್ರೋಧ, ವ್ಯಥೆ, ನಿರಾಶೆ, ಹತಾಶೆ ಈ ರೀತಿಯ ನೆಗಟಿವ್ ಎಮೋಷನ್ ಗಳು ಮತ್ತೆ ಅದೇ ರೀತಿ ಮರುಕಳಿಸುತ್ತವೆ. ಪ್ರತಿ ಬಾರಿಯ ನೆನಪಿನಲ್ಲಿಯೂ ನಿಮ್ಮ ಶರೀರ ಮನಸ್ಸು ಮತ್ತೆ ಕೆಟ್ಟ ಸನ್ನಿವೇಶದ ಪ್ರಭಾವವನ್ನು ಮತ್ತೊಮ್ಮೆ ಅನುಭವಿಸುತ್ತಾ ಜರ್ಜರಿತವಾಗುತ್ತಾ ಹೋಗುತ್ತದೆ.

ಇದು ನಮ್ಮ ಮಿದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮ. ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ತಕ್ಕಂತೆ ಮಿದುಳಿಗೆ ಸೂಚನೆಗಳು ಹೋಗುತ್ತವೆ. ಮಿದುಳು ಅದಕ್ಕೆ ಅನುಗುಣವಾಗಿ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡಲು ನಿರ್ದೇಶನ ನೀಡುತ್ತದೆ. 
ಈ ಹಾರ್ಮೋನ್ ಗಳೇ ಶರೀರವನ್ನು ದುರ್ಬಲಗೊಳಿಸುತ್ತವೆ. ನಮ್ಮ ದೇಹದಲ್ಲಿ 60 ಟ್ರಿಲಿಯನ್ ಗೂ ಅಧಿಕ ಜೀವಕೋಶ ಗಳಿವೆ. ಈ ಜೀವ ಕೋಶಗಳು ಆರೋಗ್ಯಕರವಾಗಿ ಇರಬೇಕೆಂದರೆ ಅವುಗಳಿಗೆ ಆರೋಗ್ಯಕರ ವಾತಾವರಣವೂ ಇರಬೇಕು. ಜೀವಕೋಶಗಳಿಗೆ ಬೇಕಾದ ಪ್ರೊಟೀನ್, ವಿಟಮಿನ್, ಮಿನರಲ್ಸ್, ಅಮಿನೊ ಆಸಿಡ್ ಗಳ ಜೊತೆಗೆ ಉಲ್ಲಾಸದ ಮನಸ್ಸು ಅಷ್ಟೇ ಮುಖ್ಯ. ಸರಿಯಾದ ಆರೈಕೆ ಇಲ್ಲದೆ ಜೀವಕೋಶಗಳು ಹಾಳಾಗುವುದಕ್ಕಿಂತ, ಹತ್ತು ಪಟ್ಟು ಹೆಚ್ಚು ಕೆಟ್ಟ ಯೋಚನೆಗಳಿಂದ, ನೆಗಟಿವ್ ಎಮೋಷನ್ ಗಳಿಂದ ಹಾನಿಗೆ ಒಳಗಾಗುತ್ತವೆ. 
ಇದೇ ಮನಸ್ಥಿತಿಯಲ್ಲಿ ಶರೀರವಿದ್ದಲ್ಲಿ ಜೀವಕೋಶಗಳು ಕೆಡಲು ಶುರುವಾಗುತ್ತವೆ. ಹೀಗೆ ಹಾಳಾದ ಜೀವಕೋಶಗಳು ತಮ್ಮ ಸುತ್ತಮುತ್ತಲಿನ ಆರೋಗ್ಯವಂತ ಕೋಶಗಳನ್ನು ನಾಶ ಮಾಡಲು ತೊಡಗುತ್ತವೆ. ಶರೀರ ಬಹಳ ಸುಲಭವಾಗಿ ಕಾಯಿಲೆಗಳಿಗೆ ತುತ್ತಾಗುತ್ತದೆ. ಬೇಗ ಕೃಶವಾಗುತ್ತದೆ.

ಮನುಷ್ಯನೆಂದ ಮೇಲೆ "ಸಿಟ್ಟು ಕೋಪ ದುಃಖ" ಇತ್ಯಾದಿ ಭಾವನೆಗಳು ಇರುವುದು ಸಹಜ. ಅವೆಲ್ಲವೂ ಬರದಂತೆ ಸದಾ ನಗು ನಗುತ್ತಲೇ ಇರಬೇಕು ಅಂದರೆ ಕಷ್ಟವೇ ಹೌದು. ಎಲ್ಲರೂ ನಿತ್ಯ ಆನಂದವಾಗಿರಲು ಸಾಧ್ಯವಿಲ್ಲ....

ಸಂಸ್ಕೃತದಲ್ಲಿ ಒಂದು ಮಾತಿದೆ ”ಯದ್ಭಾವಮ್ ತದ್ಭವತಿ” ನಾವು ಏನು ಯೋಚನೆ ಮಾಡುತ್ತೇವೆಯೋ ನಾವು ಅದೇ ಆಗುತ್ತೇವೆ. "ಯಥಾ ಪಿಂಡೆ ತಥಾ ಬ್ರಹ್ಮಾಂಡೇ" ಎಂಬಂತೆ "ಅಣು ಹೇಗಿರುತ್ತದೆಯೋ ಆಗೆಯೇ ಈ ಬ್ರಹ್ಮಾಂಡವೂ"...

ಸನ್ನಿವೇಶಗಳಿಗೆ ತಕ್ಕ ಹಾಗೆ ನಾವು ಪ್ರತಿಕ್ರಿಯೆ ನೀಡಲೇ ಬೇಕು. ಅದು ಸಹಜ. ಹೆದರಿಕೆ ಭಯ ಇಲ್ಲದೆ ನಾವು ಬದುಕಲಾರೆವು. ಜೀವ ರಕ್ಷಣೆಗೆ ನಾವು ಹೆದರಲೇ ಬೇಕು. ಹಾಗೆ ಕೋಪಗೊಳ್ಳಲೂ ಬೇಕು. ಆಗ ಸ್ರವಿಸುವ ಹಾರ್ಮೋನ್ ಗಳು ದೇಹ ರಕ್ಷಣೆಗೆ ಬೇಕಾದ ಅಧಿಕ ಹಾರ್ಮೋನ್ ಗಳನ್ನು ಸ್ರವಿಸಿ ಆ ಕ್ಷಣದಿಂದ ನಮ್ಮನ್ನು ಪಾರು ಮಾಡುತ್ತದೆ. ಆದರೆ ಅದೇ ಎಮೋಷನ್ ಗಳನ್ನು ಸದಾ ಕಾಲ ನಾವು ಮನಸಿನಲ್ಲಿ ಪೋಷಿಸಬಾರದು ಅಷ್ಟೇ. ನಮ್ಮನ್ನು ದ್ವೇಷಿಸುವರನ್ನು ನಾವು ಕ್ಷಮಿಸಬೇಕು. ಅದು ದೊಡ್ಡ ಗುಣ ಅಂತ ಅಲ್ಲ "ನಮ್ಮ ಒಳಿತಿಗಾಗಿ. ನಮ್ಮ ಆರೋಗ್ಯಕ್ಕಾಗಿ" ಮಾತ್ರ.....

👉💥 *ನಮ್ಮ ದೇಹದಲ್ಲಿ ನಾಲ್ಕು ಹಾರ್ಮೋನ್ ಗಳು ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವಂತವು.*

👉1. ಎಂಡೋರ್ಫಿನ್.
👉2. ಡೋಪಮಿನ್.
👉3. ಸೇರೋಟಾನಿನ್.
👉4. ಆಕ್ಸಿಟೋಸಿನ್ ಇವೇ ನಾಲ್ಕು.

🌹 ನಾವು ವ್ಯಾಯಾಮ ಮಾಡಿದಾಗ ಶರೀರದಲ್ಲಿ *"ಎಂಡೋರ್ಫಿನ್"* ಉತ್ಪತ್ತಿಯಾಗುತ್ತದೆ. ವ್ಯಾಯಾಮದ ನೋವನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಕಸರತ್ತಿನ ನೋವೂ ಹಿತ ಎನಿಸುವುದು ಇದರಿಂದಲೇ. ಜೋರಾಗಿ ನಗುವುದರಿಂದಲೂ ಎಂಡೋರ್ಫಿನ್ ಬಿಡುಗಡೆ ಆಗುತ್ತದೆ. ನಿತ್ಯ 30 ನಿಮಿಷ ವ್ಯಾಯಾಮ ಮಾಡಿದರೆ , ಮತ್ತು ನಗು ಬರುವಂತಹ ಲಘು ಓದು, ಸಿನೆಮಾ, ಹರಟೆ ಇವುಗಳಿಂದ ಅಂದಿನ ಎಂಡೋರ್ಫಿನ್ ಕೋಟಾ ವನ್ನು ನಾವು ಪಡೆಯಬಹುದು.

🌹 ಯಾರಾದರೂ ನಮ್ಮನ್ನು ಹೊಗಳಿದಾಗ, ನಮ್ಮ ಕೆಲಸಗಳನ್ನು ಮೆಚ್ಚಿ ಮಾತಾನಾಡಿದಾಗ ನಮ್ಮ ಶರೀರದಲ್ಲಿ *"ಡೋಪಮಿನ್"* ಉತ್ಪತ್ತಿ ಆಗುತ್ತದೆ. ಅಡುಗೆ ಕೆಲಸ ಮಾಡುವ ಮನೆಯ ಹೆಣ್ಣು ಮಕ್ಕಳಿಗೆ ಈ ಡೋಪಮಿನ್ ಸಿಗುವುದು ಕಷ್ಟ ಮತ್ತು ಅದರ ಪ್ರಮಾಣವು ಕಡಿಮೆ ಇದಕ್ಕೆ ಕಾರಣ ಅವರು ಕಷ್ಟ ಪಟ್ಟು ಅಡುಗೆ ಮಾಡಿದರು ಅಥವಾ ಯಾವುದೆ ಸಾಧನೆ ಮಾಡಿದರೂ ಅದಕ್ಕೆ ತಪ್ಪು ಹಿಡಿಯುವರೆ ಜಾಸ್ತಿ. ದಯ ಮಾಡಿ ನಿಮ್ಮ ಮನೆಯವರ ಅಡುಗೆಯನ್ನು ನೀವು ಕಡ್ಡಾಯವಾಗಿ ಹೊಗಳಿರಿ ಮತ್ತು ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿ. ಏಕೆಂದರೆ ಇದರಿಂದ  ಡೋಪಮಿನ್ ಪ್ರಮಾಣ ಹೆಚ್ಚುತ್ತದೆ. ನಾವು ಏನಾದರೂ ಹೊಸ ವಸ್ತು ಖರೀದಿಸಿದಾಗ ಖುಷಿ ಆಗುವುದು ಈ ಡೋಪಮಿನ್ ನಿಂದಲೇ. ಹಾಗಾದರೇ ಶಾಪಿಂಗ್ ಮಾಡಿದಾಗ ಸಂತೋಷವಾಗುವುದು ಏಕೆ ಎಂದು ನಿಮಗೆ ಗೊತ್ತಾಗಿರಬೇಕು.

🌹 ನಾವು ಬೇರೆಯವರಿಗೆ ಸಹಾಯ ಮಾಡಿದಾಗ ನಮ್ಮಲ್ಲಿ ಉಂಟಾಗುವ ಧನ್ಯತಾ ಭಾವಕ್ಕೆ ಕಾರಣ *"ಸೇರೋಟಿನ್"* ಎನ್ನುವ ಹಾರ್ಮೋನ್. ಇದು ನಮ್ಮ ಮನಸ್ಸನ್ನು ಮುದಗೊಳಿಸುತ್ತೆ. ಅಷ್ಟೇ ಅಲ್ಲ ನಮ್ಮ ಜೀವ ಕೋಶಗಳನ್ನು ಉತ್ತೇಜಿಸುತ್ತದೆ. ಅಡ್ರೆಸ್ ಕೇಳುವ ದಾರಿಹೋಕರಿಗೆ ಮಾಹಿತಿ ನೀಡಿದರೆ, ಅಂಧರಿಗೆ ರಸ್ತೆ ದಾಟಲು ಸಹಾಯ ಮಾಡಿದರೆ ಇತ್ಯಾದಿ ಸಣ್ಣಪುಟ್ಟ ಸಹಾಯ ಹಸ್ತ ಚಾಚುವ ಕೆಲಸಗಳಿಂದ ಈ ಹಾರ್ಮೋನ್ ನಮ್ಮನ್ನು ಖುಷಿಯಾಗಿ ಇಡುತ್ತದೆ....

🌹 ನಾವು ಬೇರೆಯವರಿಗೆ ಆತ್ಮೀಯತೆ ತೋರಿದಾಗ *"ಆಕ್ಸಿಟೋಸಿನ್"* ಉತ್ಪತ್ತಿ ಆಗುತ್ತದೆ. ಅಳುವ ಮಗುವನು ರಮಿಸುವಾಗ ನಮ್ಮ ಸ್ಪರ್ಶ ಅಪ್ಪುಗೆ ನಮ್ಮಲ್ಲಿ ಮತ್ತು ಮಗುವಿನಲ್ಲೂ ಆಕ್ಸಿಟೋಸಿನ್ ನಿಂದಾಗಿ ಮನಸು ಸಮಾಧಾನ ಗೊಳ್ಳುತ್ತದೆ. ಕೈ ಕುಲುಕುವುದರಿಂದ (thanks) ಆತ್ಮೀಯ ಆಲಿಂಗನದಿಂದ ಮನಸ್ಸು ಪ್ರಫುಲ್ಲಿತ ವಾಗುತ್ತದೆ....

ಹೀಗಾಗಿ
           ನಮ್ಮ ಆರೋಗ್ಯದ ದೃಷ್ಟಿಯಿಂದ, ನಮ್ಮ ಜೀವನವನ್ನು ಸುಖಮಯವಾಗಿಸುವ ದೃಷ್ಟಿಯಿಂದ ದಯವಿಟ್ಟು ಪ್ರತಿದಿನ ವ್ಯಾಯಾಮ ಮಾಡಿ, ನಗುತ್ತ ಇರಿ, ಬೇರೆಯವರ ಪ್ರಯತ್ನಗಳನ್ನು ಹೊಗಳಿ, ಅಗತ್ಯ ಇರುವವರಿಗೆ ಕೈಲಾದಷ್ಟು ಸಣ್ಣ ಪುಟ್ಟ ಸಹಾಯ ಮಾಡಿ. ಸಹಾಯ ಮಾಡಲು ಸಾಧ್ಯವಾಗದಿದ್ದರೆ ಪರವಾಗಿಲ್ಲ ಮಾತಿನಲ್ಲಿ ಆತ್ಮೀಯತೆ ಇರಲಿ. ಆದಷ್ಟೂ ಎಲ್ಲರೊಂದಿಗೆ ಪ್ರೀತಿಯಿಂದ ಜೀವಿಸಿ. ಕೊನೆಯದಾಗಿ ಆದಷ್ಟು ಬೇರೆಯವರ ತಪ್ಪುಗಳನ್ನು ಕ್ಷಮಿಸಿಬಿಡಿ. ಇಲ್ಲದಿದ್ದರೆ, ಸಂಬಂಧದಿಂದಲೇ ದೂರವಿದ್ದುಬಿಡಿ....

ಇರುವುದೊಂದೇ ಜೀವನ
ಚಂದವಾಗಿ ಬಾಳೋಣ ಬದುಕೋಣ......

   ( ಮನೋ ವಿಜ್ಞಾನ 🌹 )

Thursday 18 March 2021

ಬಹುವಾಗಿ ಕಾಡುವ *ಸೊಂಟ-ಬೆನ್ನು-ಕತ್ತು ನೋವು* ಮತ್ತು ಅದರ ಶಾಶ್ವತ ಪರಿಹಾರ..

🙏ಅಮೃತಾತ್ಮರೇ ನಮಸ್ಕಾರ 🙏
     ❄️❄️🌷🌷🌷🌷❄️❄️
    ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
19.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-40
••••••••••••••
✍️: ಇಂದಿನ ವಿಷಯ:
ಬಹುವಾಗಿ ಕಾಡುವ *ಸೊಂಟ-ಬೆನ್ನು-ಕತ್ತು ನೋವು* ಮತ್ತು ಅದರ ಶಾಶ್ವತ ಪರಿಹಾರ
•••••••••••••••••••••••••••••••••••••••••

ತೀವ್ರ ತರನಾದ ವಿಕಾರ ಉಳ್ಳ, ಅಪಘಾತದಿಂದಾದ ಬೆನ್ನುಮೂಳೆ ನೋವನ್ನು ಬಿಟ್ಟು ಉಳಿದ ಎಲ್ಲಾ ಕಾರಣಗಳಲ್ಲಿ ಅತ್ಯಂತ ಸರಳೋಪಾಯಗಳನ್ನು ಬಳಸಿ ಕತ್ತು-ಬೆನ್ನು-ಸೊಂಟದ ನೋವುಗಳನ್ನು ಪರಿಹರಿಸಿಕೊಳ್ಳಬಹುದು.

👉 ಗ್ರೀವಾ ಎಂದರೆ ಕತ್ತು, ಪೃಷ್ಟ ಎಂದರೆ ಮಧ್ಯದ ಬೆನ್ನು ಮತ್ತು ಕಟಿ‌ ಎಂದರೆ ಸೊಂಟ ಎಂದರ್ಥ.
ಹಾಗೂ
ಶರೀರದಲ್ಲಿನ ಯಾವುದೇ ನೋವಿಗೆ ವಾತದೋಷವೇ ಕಾರಣ.

ಪಕ್ವಾಶಯ(ದೊಡ್ಡಕರುಳು)ವನ್ನು ಆಶ್ರಯಿಸಿದ ವಾತದಿಂದ ಬರುವುದೇ *ಗ್ರೀವಾ-ಪೃಷ್ಟ-ಕಟಿಶೂಲ*

👉 ಕಾರಣಗಳು: 
ಸಾಮನ್ಯವಾಗಿ ನಾವಂದುಕೊಂಡಂತೆ ಮತ್ತು ಆಧುನಿಕ ವೈದ್ಯಪದ್ಧತಿ ನಿರ್ದೇಶಿಸಿದಂತೆ ಕೇವಲ intra vertebral disc ತೊಂದರೆಗಳು ಅಲ್ಲವೇ ಅಲ್ಲ.!!
ಅಚ್ಚರಿಯೇ?

ಸೊಂಟ, ಬೆನ್ನು, ಕತ್ತು ನೋವುಗಳಿರುವವರು ತಮ್ಮ ಅನುಭವವನ್ನು ಕೆಳಗಿನ ವಿವರಣೆಗಳೊಂದಿಗೆ ಹೋಲಿಸಿ ನೋಡಿ ಸುಲಭವಾಗಿ ಅರ್ಥವಾಗುತ್ತದೆ, ಅದರ ಆಧಾರದಲ್ಲಿ ಸರಳ ಪರಿಹಾರಗಳನ್ನು ಕಂಡುಕೊಳ್ಳಿ, ಇವುಗಳಿಂದ ಶಾಶ್ವತ ಮುಕ್ತಿ ಪಡೆಯಿರಿ.

🔹 ಪಕ್ವಾಶಯಸ್ಥೋ............ತ್ರಿಕ್ ವೇದನಾಮ್||
-ಸುಶ್ರುತ ಸಂಹಿತಾ

ದೊಡ್ಡ ಕರುಳಿನಲ್ಲಿ ಶೇಖರಣೆಯಾಗುವ ವಾತದೋಷವೇ, ತ್ರಿಕ್ ಅಂದರೆ ಇಡೀ ಬೆನ್ನು ಮೂಳೆಯನ್ನಾಶ್ರಯಿಸಿ ಬರುವ ನೋವಿಗೆ ಕಾರಣ.

ಮೂಳೆಯ ವಿಕಾರವೇ ಪ್ರಧಾನವಾಗಿದ್ದಲ್ಲಿ ಬೆನ್ನು ಮೂಳೆಗಳಿಗಿಂತ ಮೊದಲು ಅನ್ಯ ಅಸ್ಥಿ ಸಂಧಿಗಳ ವಿಕಾರಗಳು ಕಾಣಬೇಕು, ಏಕೆಂದರೆ ಈ ಶರೀರದ ಆಂತರಿಕ ವ್ಯವಸ್ಥೆ ಹೇಗಿದೆ ಎಂದರೆ, ಆರಂಭಿಕ ಕಾರಣಗಳಿಗೆ  ಜೀವನಪ್ರದ ಪ್ರಧಾನ ಭಾಗಗಳಿಗೆ ಒಮ್ಮೆಗೇ ತೊಂದರೆ ತರುವುದಿಲ್ಲ.

👉 ಬೆನ್ನು - ಸೊಂಟ - ಕತ್ತು ನೋವಿರುವವರು ಗಮನಿಸಿ:
• ನಿಮ್ಮ ರಾತ್ರಿಯ ಊಟ ತಡವಾಗಿರುತ್ತದೆ ಅಥವಾ ಪ್ರಮಾಣ ಹೆಚ್ಚು ಇರುತ್ತದೆ.
• ನೀವು ವಾರಕ್ಕೆ ಮೂರುಬಾರಿ ಮೊಳಕೆ ಕಾಳುಗಳನ್ನು ಸೇವಿಸುತ್ತಿರುವಿರಿ.
• ನಿಮಗೆ ಊಟದ ತಕ್ಷಣ ಹೊಟ್ಟೆಯುಬ್ಬರ ಅಥವಾ ಹೊಟ್ಟೆಭಾರ ಇರುತ್ತದೆ.
• ಬೆಳಗಿನ ಊಟದ ನಂತರ ಮತ್ತೆ ಹಸಿಯುವುದಿಲ್ಲ, ಸಮಯವಾಯಿತೆಂದು ತಿಂದರೆ ಮೈಭಾರವಾಗುತ್ತದೆ.
• ಸಾಮಾನ್ಯವಾಗಿ ಮಲಬದ್ಧತೆ ಇರುತ್ತದೆ.
• ನೀವು ಅತಿಹೆಚ್ವು ಮಜ್ಜಿಗೆ ಅಥವಾ ಹುಳಿ ಮಜ್ಜಿಗೆ ಸೇವಿಸುತ್ತೀರಿ,
ನಿದ್ದೆ ಕೆಡುತ್ತೀರಿ ಅಥವಾ ತಡರಾತ್ರಿ ನಿದ್ದೆ ಮಾಡುತ್ತೀರಿ.
• ಅತಿಹೆಚ್ಚು ಅಧಃವಾಯುಗಳು(gas) ಹೋಗುತ್ತಿರುತ್ತವೆ, ಅಥವಾ ಹೋಗದೇ ಅಲ್ಲೇ ಕಾಡುತ್ತದೆ.
• ಮೂತ್ರ ಪದೇ ಪದೇ ಪ್ರವೃತ್ತಿಯಾಗುತ್ತದೆ.
• ನಿದ್ರೆ ಆಳವಾಗಿ ಇರುವುದಿಲ್ಲ.
•  ಮನೆ ಅಥವಾ ಕೆಲಸದ ಸ್ಥಳದಲ್ಲಿ ನೀವು ಪದೇ ಪದೇ ಮೇಲ್ಛಾವಣಿ ಹತ್ತಿಳಿಯಬೇಕಾಗಿರುತ್ತದೆ.
• ನಿದ್ದೆ ಬರುವುದಿಲ್ಲ ಆದರೆ ಏಕಾಗ್ರತೆಯಿಂದ ಕೆಲಸಕ್ಕೆ ಕುಳಿತರೆ ತೂಕಡಿಕೆ, ನಿದ್ದೆ ಜೋರಾಗಿ ಬರುತ್ತದೆ.
• ನಿಮ್ಮ ಕಾಲನ್ನು ಬೆನ್ನನ್ನು ಒತ್ತಿದರೆ  ಅತ್ಯಂತ ಹಿತ ಎನಿಸುತ್ತದೆ.

ಇವೆಲ್ಲವುಗಳ ಆಧಾರದಲ್ಲಿ ಹೇಳುವುದಾದರೆ, ನಿಮ್ಮ ಬೆನ್ನು ನೋವಿಗೆ ಕಾರಣ ಬೆನ್ನು ಮೂಳೆಗಳಲ್ಲ, disc ಅಲ್ಲ,,,,,‼️

ಸುಮ್ಮನೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬೆನ್ನಿನ ಶಕ್ತಿ ಕಳೆದುಕೊಳ್ಳುವ ಮುನ್ನ, ಒಮ್ಮೆ ಯೋಚಿಸಿ.

ದೇಹದ ಯಾವುದೇ ಅಂಗಗಳನ್ನು ನೇರವಾಗಿರುವಂತೆ ಇಟ್ಟಿರುವುದು ಮೂಳೆ. ಆದರೆ ಇಲ್ಲಿನ ಮೂಳೆಗಳು ಸ್ವತಃ ತಾವೇ ನೇರವಾಗಿ ನಿಂತಿಲ್ಲ, ಕತ್ತು ಬೆನ್ನಿನಲ್ಲಿರುವ ಮಾಂಸಖಂಡಗಳು ತಮ್ಮ ಬಲದಿಂದ ಮೂಳೆಗಳನ್ನು ನೇರ ಇಟ್ಟಿವೆ!! ಹಾಗಾಗಿ ಈ ಮಾಂಸಖಂಡಗಳ ವ್ಯತ್ಯಾಸಗಳೇ ಕತ್ತು-ಬೆನ್ನು-ಸೊಂಟನೋವಿಗೆ ಪ್ರಧಾನ‌ಕಾರಣ.

▶️ ಹೇಗೆ? 
ನಾಳೆ ಮುಂದುವರಿಯುತ್ತದೆ.....

🙏ಧನ್ಯವಾದಗಳು 🙏
••••••••••••••

ಸರಕಾರಿ ನೌಕರರಿಗೆ ಅತ್ಯವಶ್ಯಕವಾಗಿ ಬೇಕಾಗುವ ಅರ್ಜಿ ನಮೂನೆಗಳು

👉 ಸರ್ಕಾರಿ ನೌಕರರಿಗೆ ಮತ್ತು ಶಿಕ್ಷಕರಿಗೆ ಪದೇ ಪದೇ ಅಗತ್ಯವಾಗಿ ಬೇಕಾಗುವ ಅತ್ಯುಪಯುಕ್ತ ಅರ್ಜಿ ನಮೂನೆಗಳು.

Wednesday 17 March 2021

ವ್ಯಾಯಾಮ (ಶಾರೀರಿಕ ಶ್ರಮದ) ಲಾಭಗಳು ಭಾಗ-4

🙏ಅಮೃತಾತ್ಮರೇ ನಮಸ್ಕಾರ 🙏
       ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
          ಸ್ವಾಸ್ಥ್ಯ ಸರ್ವರದ್ದೂ ಆಗಲಿ
        🍁🍁🍁🍁🍁🍁🍁🍁
••••••••••••••••••••••••••••••••••••••••••
18.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-39
••••••••••••••
✍️: ಇಂದಿನ ವಿಷಯ:
ವ್ಯಾಯಾಮ (ಶಾರೀರಿಕ ಶ್ರಮದ) ಲಾಭಗಳು
 ಭಾಗ-4
•••••••••••••••••••••••••••••••••••••••••
(ವ್ಯಾಯಾಮದ ಸಂಕ್ಷಿಪ್ತ ಪರಿಚಯ ಇಲ್ಲಿಗೆ ಮುಗಿಯುತ್ತದೆ).

1⃣ ಎಷ್ಟು ಸಮಯ ವ್ಯಾಯಾಮ ಸೂಕ್ತ? :
ಲಲಾಟ (ಹಣೆ), ನಾಸಾ (ಮೂಗು), ಕಕ್ಷ (ಕಂಕಳು) ಗಳಲ್ಲಿ ಬೆವರು ಬಂದರೆ ನಮ್ಮ ಶರೀರದ 1/2 ಶಕ್ತಿ ವ್ಯಯವಾಗಿದೆ ಎಂದರ್ಥ. ಇದೇ ಆ ವ್ಯಕ್ತಿಯ "ವ್ಯಾಯಾಮ ಸಿದ್ಧಿಲಕ್ಷಣ".

ಯಾವುದೇ ವ್ಯಕ್ತಿಗೆ, ಯಾವುದೇ ದೇಶದಲ್ಲಿ, ಯಾವುದೇ ಕಾಲದಲ್ಲಿ  ವ್ಯಾಯಾಮದ ಪ್ರಮಾಣ ಅವರವರ ಬಲಕ್ಕೆ ಅನುಗುಣವಾಗಿ ಇರುತ್ತದೆ. 
ಎಲ್ಲರಿಗೂ ಒಂದೇ ತರಹದಲ್ಲಿ ಅಂದರೆ ಕಿಲೋ ಕ್ಯಾಲೊರಿಯಲ್ಲಿ ಶಕ್ತಿಯನ್ನು ವ್ಯಯಿಸಬೇಕೆನ್ನುವ ವಾದ ಸರಿಯಾದುದಲ್ಲ, ಪ್ರತಿ ದಿನ, ಕಾಲಾದಿಗಳ ಆಧಾರದಲ್ಲಿ ನಿತ್ಯವೂ ಭಿನ್ನ ಪ್ರಮಾಣದಲ್ಲಿ ನೆಲೆಸಿರುವ ನಮ್ಮ ಬಲವನ್ನು ನಮ್ಮ ಕೆಲಸ ಸಾಮರ್ಥ್ಯದಿಂದಲೇ ಅಳೆಯಬೇಕು.
  💥(ಬಲಂ ವ್ಯಾಯಾಮ ಶಕ್ತ್ಯಾತ್ ಪರಿಕ್ಷೆತ್......)

2⃣ ಹೆಚ್ಚು ಅಥವಾ ಅಕಾಲದಲ್ಲಿ ವ್ಯಾಯಾಮ ಮಾಡುವುದರಿಂದ ಹಾನಿ:
ತೂಕ ಇಳಿಸುವ, ದೇಹ ದೃಢ ಮಾಡುವ ಹೆಸರಿನಿಂದ ಅಥವಾ ಹುಮ್ಮಸಿನಲ್ಲಿ ಅತೀ ವ್ಯಾಯಾಮ ಮಾಡುವುದು ನಿಶಿದ್ಧ, ಮತ್ತು ಅಕಾಲದಲ್ಲಿ ಅಂದರೆ ಉಷ್ಣ ಋತುವಿನಲ್ಲಿ ಅತಿಯಾದ ವ್ಯಾಯಾಮದಿಂದ ಅವಯವಗಳು ದುರ್ಬಲಗೊಂಡರೆ, ಅವಯವಕ್ಕೆ ಸಂಬಂಧಿಸಿ ಅನೇಕ ರೋಗಗಳು ಬಾಧಿಸುತ್ತವೆ.
◆ ಉದಾ: ಕೀಲು ನೋವು, ಶಕ್ತಿಹ್ರಾಸ, ನರಗಳ ದೌರ್ಬಲ್ಯ, ರಕ್ತಪಿತ್ತ(ರಕ್ತ‌ ಮತ್ತು ರಕ್ತನಾಳಗಳ ವಿಕಾರ- BP, Varicose veins...), ಪುಪ್ಪುಸಗಳ ರೋಗಗಳಾದ ಅಸ್ತಮಾ, TB, ಜ್ವರಾದಿಗಳು ಬರುತ್ತವೆ.

3⃣ ಕಡಿಮೆ ವ್ಯಾಯಾಮದ ಹಾನಿ:
ಇಂದಿನ ಬಹು ದೊಡ್ಡ ಸಮಸ್ಯೆ ಇದು.
ಇದು ತಿಂದರೆ ಮೂಳೆಗೆ ಶಕ್ತಿ ಬರುತ್ತದೆ, ಅದು ತಿಂದರೆ ಕಣ್ಣಿಗೆ ಒಳ್ಳೆಯದು, ಹೀಗೆ ಏನೇನೋ ಹೇಳಿ ತಿನ್ನುತ್ತಾರೆ.
ಶಕ್ತಿಯನ್ನು ಸಂಗ್ರಹಿಸುತ್ತಾರೆ  ಆದರೆ ವ್ಯಯಿಸದೆ ಹೋದರೆ ಆ ಶಕ್ತಿ (Hot feeling) ಹೊರ ಹೋಗಲು ನರಗಳನ್ನು ಮಾಂಸಗಳನ್ನು ಆಶ್ರಯಿಸಿರುತ್ತದೆ. ಬಹಳ ಜನ Heat ಆಗಿದೆ ಎಂದು ಮೋಸರು, ಎಳನೀರು, ಸೇವಿಸುತ್ತಾರೆ ಅದರ ಬದಲು ವ್ಯಾಯಾಮ ಮಾಡಿದರೆ ಅತ್ಯಂತ ಸೂಕ್ತ.
ಯಾವುದೇ ಆಹಾರ ಪದಾರ್ಥ ತಾನಾಗಿಯೇ ಒಳ್ಳೆಯದನ್ನು ಮಾಡುವುದಿಲ್ಲ. ನಮ್ಮ ಅಗ್ನಿ ಅದನ್ನು ಒಪ್ಪಿಕೊಂಡು ಜೀರ್ಣಿಸಿ ಒಳಗೆ ಕಳಿಸಿದರೆ ಮಾತ್ರ ಒಳ್ಳೆಯದನ್ನು ಮಾಡುತ್ತದೆ.‌ ಹಾಗೆ ಜೀರ್ಣಿಸಲು ಬೇಕಾದ ಪ್ರಮುಖ ಅಂಶ ಎಂದರೆ ಶಾರೀರಿಕ ಶ್ರಮ, ಅದರ ಹೊರತು ಅಮೃತ ಸೇವಿಸಿದರೂ ರೋಗವೇ ಹೊರತು ಆರೋಗ್ಯವಲ್ಲ.

4⃣ ವ್ಯಾಯಾಮ ಯಾವಾಗ ಮಾಡಬಾರದು:
 
    💥(ಭುಕ್ತ ವಾನ್ ಕೃತ ಸಂಭೋಗ.....)

• ಭೋಜನದ ತಕ್ಷಣ ಶ್ರಮದ ಕೆಲಸ ಮಾಡಿದರೆ  ಆವರಣವಾತ(ಆಮವಾತ) ರೋಗಗಳು ಮತ್ತು ಉಪವಾಸದ ಅಥವಾ ಸಂಭೋಗದ ನಂತರ ವ್ಯಾಯಾಮ ಮಾಡಿದರೆ ಧಾತುಕ್ಷಯಜನ್ಯ ವಾತ (ಮೂಳೆ ಸವೆತ, ಹೃದಯ ಮಾಂಸ ದೌರ್ಬಲ್ಯ, ಪಕ್ಷಾಘಾತ, ನೆನಪಿನ ಶಕ್ತಿ ಹ್ರಾಸತೆ) ರೋಗಗಳು ಬರುತ್ತವೆ.
• ಪುಪ್ಪುಸಕ್ಕೆ ಸಂಬಂಧಿ ರೋಗಗಳಿದ್ದಾಗಲೂ ವ್ಯಾಯಾಮ ಮಾಡಲೇಬಾರದು, ಆಗ ಶರೀರಕ್ಕೆ ಗಾಳಿ (ಆಮ್ಲಜನಕ) ಕೊರತೆಯಾಗಿ ಎಲ್ಲಾ ಧಾತುಗಳು ದುರ್ಬಲಗೊಳುತ್ತವೆ ಅಥವಾ ತೀವ್ರತೆ ಹೆಚ್ಚಿದ್ದರೆ ಹೃದಯಾಘಾತದ ಸಾಧ್ಯತೆ ಹೆಚ್ಚು.
• ರಕ್ತಪಿತ್ತ ಇರುವಾಗಲೂ ವ್ಯಾಯಾಮ‌ ಅಲ್ಪ ಪ್ರಮಾಣದಲ್ಲಿರಲಿ.

🎗 ಸದೃಢ ಆರೋಗ್ಯ ಇದ್ದರೆ ಯಾವ ವಿಧಿ ನಿಷೇಧಗಳೂ ಇಲ್ಲದೇ ಜೀವನವನ್ನು ಸುಖಪ್ರದವಾಗಿಸಿಕೊಳ್ಳಬಹುದು. 🎗

👁‍🗨 ಆಸ್ಪತ್ರೆಗಳಿಂದ ಸಿಗುವ ಆರೋಗ್ಯ ಎಂದಿಗೂ ನೈಸರ್ಗಿಕ ಅಲ್ಲ 👁‍🗨

         🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

Sunday 14 March 2021

ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು ಭಾಗ-3

🙏ಅಮೃತಾತ್ಮರೇ ನಮಸ್ಕಾರ 🙏
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
      ಸ್ವಾಸ್ಥ್ಯ ಸರ್ವರದ್ದೂ ಆಗಲಿ
    🌿🌿🌿🌿🌷🌿🌿🌿🌿
••••••••••••••••••••••••••••••••••••••••••
15.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-38
••••••••••••••
✍️: ಇಂದಿನ ವಿಷಯ:
ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು
 ಭಾಗ-3

*ವ್ಯಾಯಾಮದ ವಿಧಿ-ನಿಷೇಧಗಳು*
•••••••••••••••••••••••••••••••••••••••••

🌟 ವಯೋ ಬಲ ಶರೀರಾಣೆ...ರೋಗಂ ಆಪ್ನಿಯಾತ್//
-ಸುಶ್ರುತ ಸಂಹಿತಾ

👉 ವ್ಯಾಯಾಮ ಪೂರ್ವ ಗಮನಿಸಬೇಕಾದ ವಿಷಯಗಳು.

ಶರೀರದ ವಯಸ್ಸು, ಬಲ, ವಾಸಿಸುವ ದೇಶ, ಕಾಲ ಇವುಗಳ ಆಧಾರದಲ್ಲಿ ವ್ಯಾಯಾಮ ಮಾಡಬೇಕು.
ಇಲ್ಲದಿದ್ದರೆ ಯಾವ ವ್ಯಾಯಾಮ ಅಮೃತವೋ, ಅದೇ ರೋಗಗಳನ್ನು ತರುತ್ತದೆ.
ಅಂದರೆ ಗಾಭರಿಯಾಗಬೇಕಿಲ್ಲ, ವ್ಯಾಯಾಮ ಎಂದರೆ walking ಅಲ್ಲ, ಯೋಗಾಸನಗಳೂ ಅಲ್ಲ, ನಿತ್ಯವೂ ಶಾರೀರಿಕ ಶ್ರಮದಿಂದ ಮಾಡುವ ನಮ್ಮ ನಮ್ಮ ಕೆಲಸಗಳನ್ನೇ ವ್ಯಾಯಾಮ ಎನ್ನುತ್ತೇವೆ. ಇದನ್ನು ವಯಸ್ಸು, ಬಲ, ದೇಶ, ಕಾಲಗಳ ಆಧಾರದಲ್ಲಿ ಮಾಡಬೇಕು.

⏳ ವಯಸ್ಸು: ಮಧ್ಯಮ ವಯಸ್ಸು ಶಾರೀರಿಕ ಶ್ರಮಗಳಿಗೆ ಸೂಕ್ತ. ಬಾಲ್ಯ ಮತ್ತು ವೃದ್ಧಾವಸ್ಥೆ ಶ್ರಮದ ಕೆಲಸಗಳಿಗೆ ಸೂಕ್ತವಲ್ಲ.
ಬಾಲ್ಯ(12 ವರ್ಷಗಳ ವರೆಗೆ)ದಲ್ಲಿ ಬಲ ಹೆಚ್ಚಿರುವವರಿಂದಲೂ ಸಹ ಅತೀ ಒತ್ತಡ ಹಾಕಿ ಶ್ರಮದ ಕೆಲಸ ಮಾಡಿಸಬಾರದು. ಆಗ ಶರೀರದ ಧಾತುಗಳು ವರ್ಧಮಾನ ಅವಸ್ಥೆ(increasing order)ಯಲ್ಲಿ ಇರುವ ಕಾರಣ, ವೃದ್ಧಿಯಾಗಬೇಕಾದ ಮೂಲ ಧಾತುಗಳೇ ಪಾಕ ವಾಗುತ್ತವೆ ಮತ್ತು ಮುಂದಿನ ಶಾರೀರಿಕ, ಬೌದ್ಧಿಕ ಬೆಳವಣಿಗೆಗೆ ತೀವ್ರ ಹಾನಿಯಾಗುತ್ತದೆ.(ಉದಾ: ಬಾಲ ಕಾರ್ಮಿಕ ಪದ್ಧತಿ, ಜೀತದಾಳುವಿನಂತೆ ದುಡಿವ ಮಕ್ಕಳ ಬೆಳವಣಿಗೆ ಗಮನಿಸಿ)
ಮತ್ತು
ಆ ವಯೋಮಾನದ ಮಕ್ಕಳು ನೈಸರ್ಗಿಕಕ್ಕೆ ಹತ್ತಿರ ಇದ್ದು ಚನ್ನಾಗಿ ಆಟವಾಡುತ್ತಾರೆ ಅದೇ ಅವರಿಗೆ ತಕ್ಕ ವ್ಯಾಯಾಮ, ಹಾಗೆಯೇ ಆಯಾಸವಾದರೆ ಯಾವ ಯೋಚನೆಯೂ ಇಲ್ಲದೇ ವಿಶ್ರಮಿಸುತ್ತಾರೆ(ಎಲ್ಲಿದ್ದರಲ್ಲಿ ನಿದ್ದೆ ಮಾಡುತ್ತಾರೆ) ಹಸಿದರೆ ತಡೆಯದೆ ತಿನ್ನುತ್ತಾರೆ.
ಹಾಗಾಗಿ ವಿಶೇಷವಾಗಿ ಚನ್ನಾಗಿ ಬಲ ಇದ್ದರೂ ಬೆಳವಣಿಗೆಯ ದೃಷ್ಟಿಯಿಂದ ಒತ್ತಡದ ಕಾರ್ಯಗಳನ್ನು ಮಾಡಿಸಲೇಬಾರದು.
 12-16 ( *ಕೌಮಾರ*) ವರ್ಷಗಳವರೆಗೆ ಅತ್ಯಲ್ಪ ಜವಾಬ್ದಾರಿಯ ಮತ್ತು ಮಧ್ಯಮ ಶ್ರಮದ ಕೆಲಸಗಳು ಸೂಕ್ತ.

🏋‍♂ ಬಲ: ಶರೀರದ ಬಲ ಮಧ್ಯಮ ಅಥವಾ ಉತ್ತಮ ವಾಗಿರಬೇಕು ಆಗ ವಯಸ್ಸು ಹೆಚ್ಚಾಗಿದ್ದರೂ ಶ್ರಮದ ಕೆಲಸಗಳನ್ನು ಮಾಡಬಹುದು. ವಯಸ್ಸು ಕಡಿಮೆ ಇದ್ದರೆ ಮಾತ್ರ ವ್ಯಾಯಾಮ ಸಲ್ಲದು.

🏔 ದೇಶ: ದೇಶ ಎಂದರೆ ರಾಷ್ಟ್ರ ಎಂದು ಅರ್ಥವಲ್ಲ, "ಜಾಂಗಲ ದೇಶ" ಅಂದರೆ ಬಿಸಿಲು ಹೆಚ್ಚಿರುವ ಉಷ್ಣ ಪ್ರಧಾನ ಸ್ಥಳ, "ಅನೂಪ ದೇಶ" ಅಂದರೆ ಸದಾ ನೀರು, ನೆರಳು, ಹಸಿರೇ ಇರುವ ಸ್ಥಳ, ಮತ್ತು "ಸಾಧಾರಣ ಸ್ಥಳ"ಗಳೆಂದು ವಿಭಾಗಿಸಿದ್ದಾರೆ. 
ಉಷ್ಣ ಸ್ಥಳಗಳಲ್ಲಿ ಆತ್ಯಂತ ಕಡಿಮೆ ವ್ಯಾಯಾಮದಿಂದಲೂ, ಶೀತ ಸ್ಥಳಗಳಲ್ಲಿ ಹೆಚ್ಚು ಮತ್ತು ಸಾಧಾರಣ ಸ್ಥಳಗಳಲ್ಲಿ ಮಧ್ಯಮ ಪ್ರಮಾಣದ ವ್ಯಾಯಾಮ ಮಾಡುವುದರಿಂದಲೇ ಪೂರ್ಣ ಅಥವಾ ಅತಿ ಹೆಚ್ಚು ಪ್ರಮಾಣದ ಲಾಭಗಳಿಸಬಹುದೇ ವಿನಃ ಎಲ್ಲಾ ಸ್ಥಳ, ಎಲ್ಲಾ ಕಾಲ, ಎಲ್ಲಾ ವಯಸ್ಸಿನಲ್ಲೂ ವ್ಯಾಯಾಮವು ಒಂದೇ ರೀತಿಯ ಫಲಿತಾಂಶವನ್ನು ಕೊಡದು.
★ ನೆನಪಿಡಿ:
ಕಿಲೋಮೀಟರ್ ಲೆಕ್ಕದಲ್ಲಿ ವ್ಯಾಯಾಮ ಮಾಡುವುದು ವ್ಯರ್ಥ ಅಥವಾ ಅಪಾಯಕರ.
★★ ವಿಶೇಷ ಗಮನಕ್ಕೆ:
ಇಂದಿನ ಕಾಲಕ್ಕೆ ವಾಯುಮಾಲಿನ್ಯ ನಗರಗಳಲ್ಲಿ ವಾಸಿಸುವವರು ಅದನ್ನು ಶೀತ, ಉಷ್ಣ ಸಾಧಾರಣ ಎಂದು ಗುರುತಿಸುವ ಬದಲು, ಹೀನ ಸ್ಥಳ/ವಾಸಕ್ಕೆ ಅಯೋಗ್ಯ ಸ್ಥಳ ಎಂದು ಪರಿಗಣಿಸಬೇಕು. *ಅಲ್ಲಿ ವ್ಯಾಯಾಮ ಮಾಡಿದರೂ ಪುಪ್ಪುಸಗಳಿಗೆ ಮಲಿನ ಗಾಳಿ ಪ್ರವೇಶಿಸಿ ಅನಾರೋಗ್ಯ ಬರುತ್ತದೆ* ಹಾಗೆಯೇ ವ್ಯಾಯಾಮ ಮಾಡದಿದ್ದರೂ *ಮೇದಸ್ಸು ಹೆಚ್ಚಾಗಿ ರೋಗತರುತ್ತದೆ.* ವಾಯು, ಜಲ ಮಾಲಿನ್ಯಗಳಿರುವ ಸ್ಥಳ ಆರೋಗ್ಯದ ದೃಷ್ಟಿಯಿಂದ ವಾಸಿಸಲು ಅಯೋಗ್ಯ.

💫 ಕಾಲ:
(ಇಲ್ಲಿ ಹೇಳುವ ಕಾಲಗಳು ಭೂಮಿಯ ಉತ್ತರಾರ್ಧದಲ್ಲಿ ವಾಸಿಸುವ ಜನರಿಗೆ ಮಾತ್ರ ಅನ್ವಯಿಸುತ್ತದೆ. ಉದಾ: ಭಾರತ, ಚೀನಾ, ಕೆನಡಾ, ಅಮೆರಿಕಾ.ಸಂ.ಸಂಸ್ಥಾನ. ದಕ್ಷಿಣಾರ್ಧ ಭಾಗದ  ಜನರಿಗೂ ಹಾಗೂ ಧೃವ ಪ್ರದೇಶದ ಜನರಿಗೂ  ಅನ್ವಯಿಸುವುದಿಲ್ಲ.
 ಉದಾ: ಆಸ್ಟ್ರೇಲಿಯಾ, ದಕ್ಷಿಣ ಅಮೇರಿಕಾ- ಬ್ರೆಜಿಲ್ ಮುಂತಾದವು)

● ಕಾಲ-
 🌥 ಹೇಮಂತ, ಶಿಶಿರ, ವಸಂತ ಋತು ಅಂದರೆ ಶೀತ ಕಾಲದಲ್ಲಿ (ಅಕ್ಟೊಬರ್ - ಮಾರ್ಚ್):
 ಭೂಮಿಯಲ್ಲೂ, ದೇಹದಲ್ಲೂ ಮತ್ತು ವಾತಾವರಣದಲ್ಲೂ ಅಧಿಕ ಶಕ್ತಿ ಇರುವ ಕಾರಣ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವುದರಿಂದ ಮಾತ್ರ ಗರಿಷ್ಠ ಲಾಭಗಳಿಸಬಹುದು. ನಾವು ಅದರ ವಿರುದ್ಧವಾಗಿ ಚಳಿಗೆ ಹೊದ್ದುಕೊಂಡು ಮಲಗುತ್ತೇವೆ! ತೀವ್ರ ಚಳಿ ಇರುವ ಪ್ರದೇಶಗಳಲ್ಲಿ ಮನೆಯೊಳಗೇ ಹೆಚ್ಚು ಹೆಚ್ಚು ಶ್ರಮದ ಕಾರ್ಯಗಳನ್ನು ಮಾಡಬೇಕು. 

🌤 ಉಷ್ಣ ಋತುಗಳಲ್ಲಿ (ಏಪ್ರಿಲ್-ಸೆಪ್ಟಂಬರ್):
 ಮಧ್ಯಮದಿಂದ ಕಡಿಮೆ ಪ್ರಮಾಣದ ವ್ಯಾಯಾಮ ಮಾಡುವುದರಿಂದ ಮಾತ್ರ ಗರಿಷ್ಠ ಲಾಭ ಪಡೆಯಬಹುದೇ ಹೊರತು ಬೇಗ ಸೂರ್ಯೋದಯ ಮತ್ತು ತಡವಾಗಿ ಸೂರ್ಯಾಸ್ತವಾಗುವ ಕಾರಣ ಬೇಗ ಎದ್ದು ಜಾಗಿಂಗ್ ಮುಂತಾದ ಕೆಲಸ ಮಾಡಿ, ದಿನದ ಕೆಲಸಗಳ ಜೊತೆ ರಾತ್ರಿ ತಂಪಿನ ವಾತಾವರಣಕ್ಕೆ ಹೊರಗಡೆ ವಾಕ್ ಮಾಡಿ ಬಂದು ತಡವಾಗಿ ಮಲಗಿದರೆ ಶರೀರ ಶಿಥಿಲವಾಗುತ್ತದೆ. ಅದರ ಬದಲು ಅಲ್ಪ ಮನೆಗೆಲಸಗಳನ್ನು ಮಾಡಿ, ಮಧ್ಯಾಹ್ನ ಊಟಕ್ಕೆ ಮುನ್ನ ಅರ್ಧಗಂಟೆ ನಿದ್ದೆ ಮಾಡಿ, ಮತ್ತೆ ಹಗುರ ಕೆಲಸ ಮಾಡಿಕೊಂಡು ಬೇಗ ವಿಶ್ರಮಿಸಬೇಕು. ಆಗ ಬಾಧೆ ತಟ್ಟದು,‌ ಶರೀರ ಮೆತ್ತಗಾಗದು.

ಉಷ್ಣ ಕಾಲದ ಅನೇಕ ವೈರಸ್ ರೋಗಗಳು ಆಪ್ ಧಾತುಕ್ಷಯದಿಂದಲೇ (ನಿರ್ಜಲೀಕರಣ/dehydration)  ಬರುತ್ತವೆ ಮತ್ತು ಅತ್ಯಂತ ಹಾನಿಮಾಡುತ್ತವೆ. ಶರೀರದ ಆಪ್ ಧಾತು(body fluid) ಚನ್ನಾಗಿಟ್ಟುಕೊಳ್ಳುವುದರ ಲಾಭದ ಮುಂದೆ ರೋಗ ಬಂದಾಗ ಹೆಚ್ಚು ಹೆಚ್ಚು ನೀರು ಕುಡಿಯುವುದು ಅತ್ಯಂತ ಕನಿಷ್ಟ ಫಲದಾಯಕ.
🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

MICROSOFT WORD SHORTCUT KEYS

ಕಂಪ್ಯೂಟರ್ ಶಿಕ್ಷಣ

Tuesday 9 March 2021

ವ್ಯಾಯಾಮದ (ಶಾರೀರಿಕ ಶ್ರಮದ) ಲಾಭಗಳು ಭಾಗ-2

🙏ಅಮೃತಾತ್ಮರೇ ನಮಸ್ಕಾರ 🙏
  🍃ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🍃
     🍃ಸ್ವಾಸ್ಥ್ಯ ಸರ್ವರದ್ದೂ ಆಗಲಿ🍃
••••••••••••••••••••••••••••••••••••••••••
10.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-37
••••••••••••••
✍️: ಇಂದಿನ ವಿಷಯ:
ವ್ಯಾಯಾಮದ (ಶಾರೀರಿಕ ಶ್ರಮದ) ಲಾಭಗಳು
 ಭಾಗ-2
•••••••••••••••••••••••••••••••••••••••••

(.....ಮುಂದುವರಿದ ಭಾಗ)
❄️ ವ್ಯಾಯಾಮದಿಂದ ಆಗುವ ಶರೀರದ ಆಂತರಿಕ ಬದಲಾವಣೆಗಳು:-

🚴‍♂ ಮುಪ್ಪು ಬೇಗಬಾರದು:
ಧಾತುಗಳ, ಅವಯವಗಳ ಹ್ರಾಸತೆಯ ಅವಸ್ಥೆಯೇ ಮುಪ್ಪು. 
ಇದು ಆರಂಭವಾಗುವುದು ರಸಧಾತುವಿನ ಶಕ್ತಿಗುಂದುವಿಕೆ ಮತ್ತು ಪಿತ್ತದೋಷದಿಂದ. ಧಾತು, ಅವಯವಗಳಲ್ಲಿನ ರಸಕ್ಕೆ ಪಿತ್ತದ ಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಇಲ್ಲವಾಗುತ್ತದೆ.(ರಸಧಾತುವಿನ ವಿಶೇಷ ಕಾರ್ಯ: *ಜಠರಾನಲ ಊಷ್ಮಜನ್ಯ ಸಂತಾಪ ನಿವಾರಣಕೃತ್* ಅಂದರೆ ರಸಧಾತುವು ಶರೀರದಲ್ಲಿರುವ ಎಲ್ಲಾ ಅಗ್ನಿಗಳಿಂದ ಉಂಟಾಗುವ ತಾಪದಿಂದ ಧಾತುಗಳನ್ನು ರಕ್ಷಿಸುತ್ತದೆ.) ಆಗ ಧಾತುಗಳು ಪಿತ್ತದಿಂದ ಮೆತ್ತಗಾದರೆ ಮಾತ್ರ ಕ್ಷೀಣತೆ ಆರಂಭವಾಗುತ್ತದೆ, ಇದೇ ಮುಪ್ಪು.
ನಿತ್ಯವೂ ತಪ್ಪದೇ ಮಾಡುವ ವ್ಯಾಯಾಮವು ಪಿತ್ತದ ಮೂಲವನ್ನೇ ಜೀರ್ಣಿಸುತ್ತದೆ. ಆಹಾರವೂ ಚನ್ನಾಗಿ ಜೀರ್ಣಗೊಂಡು ರಸ ಪೋಷಣೆ ಮಾಡುವ ಕಾರಣ ಧಾತುರಸ ಕಡಿಮೆಯಾಗದು, ಹಾಗಾಗಿ ಧಾತು ಮೃದು/ಶಿಥಿಲವಾಗದು.

ಚನ್ನಾಗಿ ಜೀರ್ಣಶಕ್ತಿ ಇರುವ ದೇಹದಲ್ಲಿ ಧಾತುಗತ ಅಜೀರ್ಣವು (free radical) ಅತ್ಯಂತ ಕಡಿಮೆ ಇರುವ ಕಾರಣ ಮುಪ್ಪಾಗುವಿಕೆಯನ್ನು ಮುಂದೂಡುತ್ತದೆ. 
 
🤽‍♀ ಮುಪ್ಪು ಬೇಗ ಏರದು:
ಒಂದುವೇಳೆ ಮುಪ್ಪು ಆರಂಭವಾದರೂ,
ಕಬ್ಬಿಣವು ತುಕ್ಕು ಹಿಡಿಯುವಂತೆ ವ್ಯಾಯಾಮ ಮಾಡದವರ ಧಾತು/ಅವಯವಗಳು ಬಹು ಬೇಗ oxidation ಗೆ ಒಳಪಟ್ಟು ಶೀಘ್ರವಾಗಿ 1-2 ವರ್ಷದಲ್ಲೇ ವಾರ್ದಖ್ಯ ನಿರಂತರ ಏರುತ್ತದೆ!!?

ಔಷಧಿ, ಪೌಷ್ಟಿಕಾಂಶಗಳನ್ನು ಕೊಟ್ಟು ಎಷ್ಟೇ ಸಂರಕ್ಷಿಸಿದರೂ, ಪಿತ್ತದ ಪ್ರಾಬಲ್ಯ ನಿಲ್ಲಿಸುವುದು ಅತ್ಯಂತ ಕಷ್ಟ.  ಬೆಂಕಿ ಬಿದ್ದ ಮನೆಗಳನ್ನು ರಕ್ಷಿಸುವುದು ಎಷ್ಟು ಕಷ್ಟವೋ ಅಷ್ಟೇ ದಾರುಣವಾದ ಕೆಲಸ ಇದು.
ಬೆಂಕಿ ಉರಿಯಲು ಬೇಕಾಗುವ ಇಂದನವನ್ನೇ ಉರಿಸಿ ಅದರಿಂದ ಆಹಾರವನ್ನು ಜೀರ್ಣಿಸುವಂತೆ ಮಾಡುವ ವ್ಯಾಯಾಮದಿಂದ ಧಾತುಗಳ ಮೆತ್ತಗಾಗುವ ಬದಲು ಇನ್ಮಷ್ಟು ಗಟ್ಟಿಗೊಳ್ಳುತ್ತವೆ.

🧗‍♂ ವ್ಯಾಯಾಮವು ಸರ್ವದಾ ಬಲಕಾರಕ:

• "ಬಲಂ ವ್ಯಾಯಾಮ ಶಕ್ತ್ಯಾತ್ ಪರೀಕ್ಷೇತ್...|"
ಮನುಷ್ಯನ ಬಲವನ್ನು ಅವನ ಕರ್ಮ ಸಾಮರ್ಥ್ಯದಿಂದ ಅಳೆಯಬೇಕು. ಅಂದರೆ ವ್ಯಾಯಾಮಕ್ಕೂ ಬಲಕ್ಕೂ ಉತ್ತಮ ಸಂಭಂದ ಇದೆ.
"ಬಲ ಹೆಚ್ಚಾದರೆ ವ್ಯಾಯಾಮ ಸಾಮರ್ಥ್ಯ ಹೆಚ್ಚು. ಹಾಗೆಯೇ, ವ್ಯಾಯಾಮದಿಂದ ಮತ್ತೆ ಬಲ ಹೆಚ್ಚುತ್ತದೆ. ಆದರೆ ಇದೆಲ್ಲ ಆಗುವುದು 16 ರಿಂದ 25 ರ ವಯಸ್ಸಿನ ಮದ್ಯದಲ್ಲಿ 
ಆರಂಭಿಸುವ ವ್ಯಾಯಾಮದಿಂದಲೇ ಹೊರತು 40-50 ವರ್ಷಗಳವರಗೆ ಶ್ರಮದ ಕೆಲಸ ಮಾಡದೆ ಕೊನೆಗೆ ಮುಪ್ಪಿಗೆ ಹೆದರಿ ವ್ಯಾಯಾಮ ಆರಂಭಿಸಿದರೆ ಸ್ವಲ್ಪ ಜೀರ್ಣಶಕ್ತಿ ವೃದ್ಧಿಯಾಗಬಹುದೇ ಹೊರತು ಜೀವಕೋಶಗಳ ಒಳಗೆ ಆಹಾರ ಸಂಪೂರ್ಣ ಹೋಗಿ ಹೊಸಚಿಗುರೊಡೆಯಲು ಸಾದ್ಯವಿಲ್ಲ.

ಯಾವುದನ್ನೇ ಆದರೂ ಸೂಕ್ತ ಸಮಯ ಮತ್ತು ವಿಧಿ ಪೂರ್ವಕ ಅನುಸರಿಸುವುದರಿಂದ ಮಾತ್ರ ಗುಣವರ್ಧಕವಾಗುತ್ತದೆ. 
ಹಾಗಾಗಿ ವ್ಯಾಯಾಮದ ವಿಧಿಯನ್ನ ನಾಳಿನ ಸಂಚಿಕೆ ಯಲ್ಲಿ ನೋಡೋಣ.

               🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

NTSE EXAM RESULTS ANNOUNCED**🌍 ದಿನಾಂಕ: 25-01-2021 ರಂದು ಜರುಗಿದ NTSE ಪರೀಕ್ಷೆಯ ಫಲಿತಾಂಶ ಪ್ರಕಟ.@@ ವೈಯಕ್ತಿಕ ಹಾಗೂ ಜಿಲ್ಲಾವಾರು ಫಲಿತಾಂಶ ವೀಕ್ಷಿಸಲು*💫

GHS GOJANUR NTSE RESULT

Saturday 6 March 2021

ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು ಭಾಗ-1

🙏ಅಮೃತಾತ್ಮರೇ ನಮಸ್ಕಾರ 🙏
              🧘‍♀🧘🧘‍♀🧘‍♂
 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
07.03.2021
*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ*
ಸಂಚಿಕೆ-36
••••••••••••••
✍️: ಇಂದಿನ ವಿಷಯ:
ವ್ಯಾಯಾಮದ(ಶಾರೀರಿಕ ಶ್ರಮದ) ಲಾಭಗಳು ಭಾಗ-1
••••••••••••••••••••••••••••••••••••••••

🌿 ಶರೀರಾಯಾಸ ಜನನಂ ಕರ್ಮ ವ್ಯಾಯಾಮಸಂಜ್ಞಿತಂ ||
-ಸುಶ್ರುತ ಸಂಹಿತ

🌿 ಲಾಘವಂ......ವ್ಯಾಧಿಃ ನಾಶ.........ತು ತದಾದಿಶೇತ್ ||
-ಭಾವಪ್ರಕಾಶ

❄️ ನಿತ್ಯ ವ್ಯಾಯಾಮದಿಂದಾಗುವ ಆಂತರಿಕ ಬದಲಾವಣೆಗಳು.
 
🏃‍♂ ಅಜೀರ್ಣವೂ ಶೀಘ್ರ ಪಚನವಾಗುವುದು:
ಇದನ್ನು ಸರಳವಾಗಿ ಅರ್ಥಮಾಡಿಕೊಳ್ಳಬಹುದು. 
ಅಜೀರ್ಣ, ಆಮ್ಲಪಿತ್ತ, ಹುಳಿತೇಗು, ಎದೆಉರಿ, ಹೊಟ್ಟೆಉಬ್ಬರತರಿಸುವ ಪದಾರ್ಥಗಳನ್ನು ಸೇವಿಸಿದರೂ ವ್ಯಾಯಾಮ ಶಕ್ತಿ ಅದನ್ನು ಕರಗಿಸಿ ಬಿಡುತ್ತದೆ.
 ಜೀರ್ಣಶಕ್ತಿ-ಪಿತ್ತದ ಸಂಕಟ ಎರಡೂ ಉಷ್ಣವೇ ಆದರೂ ಮತ್ತು ವ್ಯಾಯಾಮ ಉಷ್ಣ ವರ್ಧಕವಾದರೂ ಅದು ಪಿತ್ತವನ್ನುಂಟುಮಾಡುವ ದ್ರವ್ಯಗಳನ್ನೇ ಕರಗಿಸುವ ಕಾರಣ ಆಮ್ಲಪಿತ್ತಾದಿ ರೋಗಗಳು ಹೆಚ್ಚುವ ಬದಲು ಕಡಿಮೆ ಆಗುವವು, ಆದ್ದರಿಂದ 
 *Acidityಗೆ ಶ್ರೇಷ್ಠ ಔಷಧ ವ್ಯಾಯಾಮವೇ ಆಗಿದೆ.*


⛹‍♂ ಸ್ಥೌಲ್ಯಾಪಕರ್ಷಕ:
ಎಲ್ಲರಿಗೂ ಗೊತ್ತಿರುವಂತೆ ದೇಹದ ತೂಕವನ್ನು ಕರಗಿಸಲು ವ್ಯಾಯಾಮ ಸೂಕ್ತ ಆದರೆ ಗಮನಿಸಿ 
• ಗಟ್ಟಿ ಮೂಳೆಗಳಿಂದ ಜಾಸ್ತಿ ಇರುವ(BMI ಲೆಕ್ಕದಲ್ಲಿ ಹೆಚ್ಚು) ತೂಕವನ್ನು ಇಳಿಸುವ ಅಗತ್ಯ ಇಲ್ಲ, ಆ ಶಕ್ತಿಯನ್ನು ಬಳಸಿ ಬೆಳೆಯಬೇಕು.
• ಕೊಬ್ಬಿನಅಂಶದಿಂದ ಆದ ತೂಕ ಕರಗಿಸಲು ವ್ಯಾಯಾಮ ಸೂಕ್ತ. ಆದರೆ ಅತೀ ಸ್ಥೂಲರು ತಕ್ಷಣವೇ ಗಂಭೀರ ವ್ಯಾಯಾಮ ಮಾಡಬಾರದು ಅದು ಅಪಾಯಕರ, ಆದರೆ "ಈಜುವುದು ಎಲ್ಲರಿಗೂ ಅತ್ಯಂತ ಶ್ರೇಷ್ಠ ವ್ಯಾಯಾಮವಾಗಿದೆ."
• Hypothyroidism ನಿಂದ ಹೆಚ್ಚಾದ ತೂಕವನ್ನೂ ವ್ಯಾಯಾಮದಿಂದ ಕರಗಿಸಲು ಯತ್ನಿಸಬಾರದು, ಅದಕ್ಕೆ ಸೂಕ್ತ ಆಯುರ್ವೇದ ಚಿಕಿತ್ಸೆ ಬೇಕು, ಇಲ್ಲವಾದರೆ ಮೂಳೆಸವೆತ, ಹೃದಯ ತೊಂದರೆ ಸಾಧ್ಯತೆ ಹೆಚ್ಚು. 
• 12 ವರ್ಷದ ಒಳಗಿನ ಮಕ್ಕಳ ತೂಕ ಇಳಿಸುವ ಸಾಹಸಕ್ಕೆ ಇಳಿಯಬಾರದು. ಅದರ ಬದಲು ಆಹಾರದಲ್ಲಿ "ಪಚನಕ್ಕೆ ಸುಲಭವಲ್ಲದ ಆದರೆ ಅಧಿಕ ಶಕ್ತಿ ಬಿಡುಗಡೆಮಾಡದ ಜೋಳ ಕೊಡಬೇಕು"

🏊‍♂ ವ್ಯಾಯಾಮ ಮಾಡಿದ ದೇಹ ಬೇಗ ಮೆತ್ತಗಾಗುವುದಿಲ್ಲ.
ವಯಸ್ಸು ಕಳೆದಂತೆ ಶರೀರ ಮೆತ್ತಗಾಗುವುದು ಸಹಜ. ಪಿತ್ತದ ಉಷ್ಣವೇ ಶರೀರವನ್ನು ಮೆತ್ತಗೆ  ಮಾಡುತ್ತದೆ. ಪಿತ್ತವನ್ನು ವರ್ಧಿಸುವ ಮಲರೂಪಿ ಅಂಶಗಳು ವ್ಯಾಯಾಮದಿಂದ ಸಂಪೂರ್ಣ ಕರಗಿ ಶಕ್ತಿಯನ್ನು ವರ್ಧಿಸುವ ಕಾರಣ ಧಾತುಗಳು ಸದೃಢ ಗೊಳ್ಳುತ್ತವೆ.

ಮುಂದುವರಿಯುವುದು........

🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

Thursday 4 March 2021

ತಾಂಬೂಲ ಅಮೃತವೇ ವಿಷವೇ?

🙏ಅಮೃತಾತ್ಮರೇ ನಮಸ್ಕಾರ 🙏
 🍀🍀🍀🍀🍁🍁🍀🍀🍀🍀
  ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
     ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••••
05.03.2021
*ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ*
ಸಂಚಿಕೆ-35
••••••••••••••
✍️: ಇಂದಿನ ವಿಷಯ:
ತಾಂಬೂಲ ಅಮೃತವೇ ವಿಷವೇ?
•••••••••••••••••••••••••••••••••••••••••

🛡 ಸರಿಯಾದ ವಿಧಾನದಲ್ಲಿ ತಾಂಬೂಲ ಸೇವನೆ ಅಮೃತ ಸಮಾನ.
ಆದರೆ,
🛡 ಇಂದಿನ ಕಾಲದಲ್ಲಿ ಬಹುತೇಕರಿಗೆ ತಾಂಬೂಲ ಸೇವನೆ‌ ನಿಶಿದ್ಧ.

☸ ಎಲೆ ಅಡಿಕೆ ಆಯ್ಕೆ ಹೇಗೆ?
★ ತಾಂಬೂಲ(ಎಲೆ): 
📖 ತಾಂಬೂಲ ಪತ್ರಂ.........................ಪರ್ಣಮೂಲಂ..... ವಹ್ನಿನಾಶಿನೀ||
- ರಾಜ ನಿಘಂಟು

★ ಅಡಿಕೆ:
📖 ಶುಷ್ಕಂ ಅಗ್ನಿಕರಂ...........ವಹ್ನಿ ನಾಶನಮ್||
-ರಾಜನಿಘಂಟು

💠 ಎಲೆ:
ಪರ್ಣ ಮೂಲ (ಎಲೆಯ ತುಂಬು) ಮತ್ತು ಪರ್ಣಾಗ್ರ(ಎಲೆಯ ತುದಿ) ತೆಗೆಯಬೇಕು ಇದು ದೋಷ ಕಾರಕ .
ಪರ್ಣ ಸಿರಾ ಅಂದರೆ ಎಲೆಯಲ್ಲಿರುವ ಗೆರೆಗಳನ್ನು ತೆಗೆಯಬೇಕು ಇವು ಅಗ್ನಿ ನಾಶ, ಬುದ್ಧಿಶಕ್ತಿ ಕ್ಷೀಣಿಸುತ್ತದೆ. 
ಒಣಗಿದ ಎಲೆ/ಹಣ್ಣಾದ ಎಲೆ ಆಯಷ್ಯವನ್ನು ಕಡಿಮೆ‌ಮಾಡುತ್ತದೆ.

💠 ಅಡಿಕೆ:
ಒಣ ಅಡಿಕೆ ಜೀರ್ಣಶಕ್ತಿ ವರ್ಧಿಸುತ್ತದೆ.
ಹಳೆಯದಾದ ಅಡಿಕೆ ದೋಷಕರವಾಗಿದೆ.

ಅಡಿಕೆ ಕಷಾಯ ರಸ ಇರುವ ಕಾರಣ ಬೆಲ್ಲದಲ್ಲಿ ಬೇಯಿಸಿ, ತುಪ್ಪದಲ್ಲಿ ಹುರಿದ ಅಡಿಕೆ ಆರೋಗ್ಯಕರ.

➡️ ಸೇರಿಸುವ ಪದಾರ್ಥಗಳು:

📝 ಕರ್ಪೂರ, ಜಾತಿ, ಕಕ್ಕೋಲ, ಲವಂಗ....... ಪತ್ರಂ ತಾಂಬೂಲಜಂ ಶುಭಂ//.....

ಸುಣ್ಣ, ಲವಂಗ, ಕಾಳು ಮೆಣಸು, ಗಂಧ ಮೆಣಸು, ಜಾಜಿಕಾಯಿ, ಪಚ್ಚ ಕರ್ಪೂರ, ಏಲಕ್ಕಿ, ಕಾಚು, ತಕ್ಕಷ್ಟು ಪ್ರಮಾಣದಲ್ಲಿ ಬಳಸಿ.

ತಾಂಬೂಲ ಅಮೃತವೂ ಹೌದು ಮತ್ತು ವಿಷವೂ ಹೌದು❗️

📖 ಆದ್ಯಂ, ವಿಷೋಪಮಂ........... ಸುಧಾತುಲ್ಯಂ ರಸಾಯನಮ್||
-ಭಾವಪ್ರಕಾಶ‌ ನಿಘಂಟು

ಬಾಯಿ ತುಂಬಾ ರಸ ಬರುವವರೆಗೆ ತಾಂಬೂಲವನ್ನು ಅಗೆದು ಉಗಿಯಬೇಕು. ಮೊದಲು ಬಂದ ರಸವನ್ನು ನುಂಗಿದರೆ ದೂಷಿ ವಿಷದಂತೆ ತೊಂದರೆಯನ್ನೂ ಮತ್ತು ಎರಡನೇ ಬಾರಿ ತುಂಬಿದ ರಸವನ್ನು ನುಂಗಿದರೆ ಜೀರ್ಣಕ್ಕೆ ಹಾನಿಯನ್ನು ತರುತ್ತದೆ. ತದನಂತರ ಬರುವ ಅಲ್ಪಲ್ಪ ರಸ ಸೇವಿಸಿದರೆ ಅಮೃತದಂತೆ ಜೀರ್ಣಶಕ್ತಿ ಕೊಡುತ್ತದೆ, ರಸಾಯನದಂತೆ ಕೆಲಸ ಮಾಡುತ್ತದೆ.

🔆 ರಸಾಯನವಾಗಿ ಹೇಗೆ ಕೆಲಸ ಮಾಡುತ್ತದೆ?
ಹಿಂದಿನ ಕಾಲದಂತೆ ಶಾಸ್ತ್ರೋಕ್ತವಾಗಿ ಸ್ನಿಗ್ಧ, ಉಷ್ಣ ಆಹಾರ ಸೇವಿಸುವವರಿಗೆ ಆಹಾರವನ್ನು ಜೀರ್ಣಿಸಲು ಮತ್ತು ಅದರ ಅಂಶಗಳು ಸೂಕ್ಷ್ಮಾತಿಸೂಕ್ಷ್ಮ ಸ್ಥಳಗಳಿಗೆ ಹೋಗಲು ರಕ್ತನಾಳಗಳನ್ನು (ರಸಾಯನಿಗಳ) ಶುದ್ಧ ಮಾಡುತ್ತದೆ. ಅಡಿಕೆಗೆ ವಿಕಾಶಿ (ಧಾತುಗಳನ್ನು ಮೃದುಗೊಳಿಸುವ) ಶಕ್ತಿ ಇರುವುದರಿಂದ ಆಹಾರವನ್ನು ಚನ್ನಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

🚫 ತಾಂಬೂಲ ಯಾರಿಗೆ ವ್ಯರ್ಜ್ಯ?

📖 ರಕ್ತಂ ಪಿತ್ತ, ಕ್ಷತ ಕ್ಷೀಣ........
ನ ಹಿತಂ...|| 
-ಸುಶ್ರುತ ಸಂಹಿತಾ

📖 ತಾಂಬೂಲಂ ನಾತಿ ಸೇವೇತ............ಸ್ಯಾದ್.....ಅತಿ ತಾಂಬೂಲ ಭಕ್ಷಾಣತ್|| 
-ಭಾವಪ್ರಕಾಶ ನಿಘಂಟು

◆ ಜೀವಕೋಶಗಳಲ್ಲಿ ಜಲೀಯ ಅಂಶ ಕಡಿಮೆ ಇರುವವರು
 ◆ ರಕ್ತ ಪಿತ್ತ (BP, Varicose veins)  
◆ ಬಹುಕಾಲದ ಆಮ್ಲಪಿತ್ತ ಇರುವವರು(Severe chronic gastritis)
◆ ಪ್ರಮೋಹ(Anxiety) 
◆ ಧಾತು ಕ್ಷಯ ಉಳ್ಳವರು
◆ ಮಕ್ಕಳು
◆ ವೃದ್ಧರು
 ◆ ಉಪವಾಸ ಇರುವವರು
◆ ಒಣ ಆಹಾರ (ಕಾಫಿ-ಟೀ ,ಬೀಡಿ-ಸಿಗರೇಟು) ಸೇವಿಸುವ ಅಭ್ಯಾಸ ಇರುವವರು
 ತಾಂಬೂಲ ಸೇವಿಸಬಾರದು. 
ಹಾಗೆಯೇ, ಅತಿಯಾಗಿ ಯಾರೂ ತಾಂಬೂಲ ಸೇವನೆ ಮಾಡಬಾರದು.

💠 ಏಕೆ?
ಅನ್ನನಾಳದಲ್ಲಿ ಜೀವಕೋಶಗಳು ಈಗಾಗಲೇ ಒಣಗಿದ ಅವಸ್ಥೆಯಲ್ಲಿರುತ್ತವೆ. ಅಡಿಕೆ ಅವುಗಳನ್ನು ಮೆತ್ತಗೆ ಮಾಡುತ್ತದೆ ಮತ್ತು ತಾಂಬೂಲಪತ್ರ ತನ್ನ ತೀಕ್ಷ್ಣತೆಯಿಂದ  ಭೇದಿಸುತ್ತದೆ. 
ಪ್ರಸ್ತುತ ಬಹುತೇಕರ ಆಹಾರ ಶುಷ್ಕವಾಗಿದೆ,‌ ತಾಂಬೂಲ ಸೇವನೆಯಿಂದ
ಇನ್ನಷ್ಟು ಶುಷ್ಕವಾಗಿ ಧಾತುಬಲನಾಶ, ಆಯುಷ್ಯ ಕ್ಷೀಣತೆಗೆ ಕಾರಣವಾಗುತ್ತದೆ.

🔴 ಅಡಿಕೆ ಅಪಾಯಕರ!!!
ಇತ್ತೀಚೆಗೆ ತಂಬಾಕು ಸೇರಿಸಿದ ಅಡಿಕೆ(ಗುಟ್ಕಾ) ವ್ಯಾಪಾರ ಜೋರಾಗಿದೆ. ಇದು ಸಮಾಜವನ್ನು ಹೀರಿ ತಿನ್ನುತ್ತಿರುವುದು. ಇದು ಪ್ರತ್ಯಕ್ಷ ದ್ರೋಹ.  ಹರೆಯದ ಮಕ್ಕಳಿಗೆ ಅವರ ಧಾತು ಬೆಳವಣಿಗೆಯ ಹಂತದಲ್ಲಿ ಅಡಿಕೆ ತಂಬಾಕು ತಿನ್ನಿಸಿದರೆ ಇಡೀ ಜೀವನ ಶಕ್ತಿಹಿನವಾಗಿ ಬಾಳಬೇಕಾಗುತ್ತದೆ.

🔄 ಅಡಿಕೆ ಸಂಸ್ಕಾರ ಅತ್ಯಾವಶ್ಯಕ:
ಒಗರುರಸ ಇರುವ ಅಡಕೆಯನ್ನು ನೇರ ಸೇವಿಸಬಾರದು. ಅದನ್ನು ಸಿಹಿ ಪದಾರ್ಥದೊಂದಿಗೆ ಸೇರಿಸಿ 
ತುಪ್ಪದಂತಹ ಸ್ನಿಗ್ಧ ದ್ರವ್ಯದಲ್ಲಿ ಸಂಸ್ಕರಿಸಿ ಸೇವಿಸಬಹುದು.

🔺ಹಸಿ ಅಡಿಕೆ ಸರ್ವದಾ ನಿಶಿದ್ಧ🔺

🙏ಧನ್ಯವಾದಗಳು 🙏
•••••••••••
By
ಹೆಚ್.ಬಿ.ಮೇಟಿ

Tuesday 2 March 2021

ಬೆಳಗಿನ ಊಟದ ವಿಧಾನ ಭಾಗ-1.

🙏ಅಮೃತಾತ್ಮರೇ ನಮಸ್ಕಾರ 🙏
  🌸 ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ 🌸
     🌞ಸ್ವಾಸ್ಥ್ಯ ಸರ್ವರದ್ದೂ ಆಗಲಿ🌞
••••••••••••••••••••••••••••••••••••••••••
03.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-35
••••••••••••••
✍️: ಇಂದಿನ ವಿಷಯ:
ಬೆಳಗಿನ ಊಟದ ವಿಧಾನ ಭಾಗ-1.

🎗 ಶಕ್ತಿವಂತರಾಗಬೇಕೆ? 
ಬೆಳಿಗ್ಗೆ ಟೀ-ಕಾಫಿ, ಉಪಹಾರ ಬಿಡಿ, ಚನ್ನಾಗಿ ಊಟ ಮಾಡಿ.
•••••••••••••••••••••••••••••••••••••••••

📖 ಯಾಮ ಆದ್ಯೇ ಭೋಕ್ತವ್ಯಂ....... *ಯಾಮ ಮಧ್ಯೇ* ರಸೋತ್ಪತ್ತಿಃ ಯಾಮಯುಗ್ಮಾತ್ ಬಲಕ್ಷಯಮ್ ||
ಪ್ರಾಗ್ ಭುಕ್ತೇ ತು........|
ಪ್ರತರಾಶತೇ...............||
ಪೂರ್ವ ಭುಕ್ತೇ......ಪಾವಕಮ್| 
ಸಾಯಂ ಅಶೇತ್ ತು......ವಿಷೋಪಮಮ್ || 
-ನಿಘಂಟು ರತ್ನಾಕರ.

✅ ಬೆಳಿಗ್ಗೆ ಊಟ ಮಾಡಲು ಇರಬೇಕಾದ ಅರ್ಹತೆ:
★ ರಾತ್ರಿ ಆಹಾರ ಜೀರ್ಣವಾಗಿರಬೇಕು.
★ ಮಲಮೂತ್ರ ಪ್ರವೃತ್ತಿಯಾಗಿರಬೇಕು.
★ ನಿದ್ದೆಯಾಗಿ ಶರೀರ ಹಗುರವಾಗಿ ಇರಬೇಕು.
★ ಹಸಿವು ಉಂಟಾಗಿರಬೇಕು.

✅ ಬೆಳಗಿನ ಊಟದ ಕಾಲ:
ಸೂರ್ಯೋದಯದ ನಂತರ ಒಂದುಯಾಮ(3 hours) ದ ಮಧ್ಯದಲ್ಲಿ  ಊಟ ಮಾಡಬೇಕು.
(ಉದಾ: ಬೆಳಿಗ್ಗೆ 6 ಗೆ ಸೂರ್ಯೋದಯ ಎಂದರೆ 7-8ಗಂಟೆ ನಡುವೆ ಊಟ ಮಾಡಬೇಕು.

👉 ಬೆಳಗಿನ ಆಹಾರ ಹೇಗಿರಬೇಕು?

🌿 ಉಷ್ಣಂ ಅಶ್ನಿಯಾತ್ 🌿
ತಾಜಾ ಮತ್ತು ಬಿಸಿಯಾಗಿರಬೇಕು- ಇದರಿಂದ ಜೀರ್ಣಶಕ್ತಿ ವರ್ಧಿಸುತ್ತದೆ, ಮಲಕಫ ಉಂಟಾಗದು. ಇಡ್ಲಿ, ದೋಸೆ, ರಾತ್ರಿ ಉಳಿದ ಅನ್ನ ತಾಜಾ ಅಲ್ಲ. ಗಮನಿಸಿ ಇವನ್ನು ಬಿಸಿ ಮಾಡಿದರೆ ಬೇಗ ಆರುತ್ತವೆ ಮತ್ತು ಒಣಗುತ್ತವೆ. ದೋಸೆ ಅರ್ಧ ತಿನ್ನುವುದರೊಳಗೆ,‌ ಒಂದು ಇಡ್ಲಿ ತಿನ್ನುವುದರೊಳಗೆ, ರಾತ್ರಿ ಉಳಿದ ಅನ್ನ ಕೈ ಇಡುವುದರೊಳಗೆ ಬಿಸಿಹೋಗಿ ತಣ್ಣಗಾಗುತ್ತವೆ ಮತ್ತು ಒಣಗುತ್ತವೆ ಕೂಡಾ!
ಅದೇ ತಾಜಾ ಅನ್ನ ಸಂಬಾರು ಒಂದೆರೆಡು ತಾಸು ಬಿಸಿ ಇರುತ್ತದೆ.

🌿 ಸ್ನಿಗ್ಧಂ ಅಶ್ನಿಯಾತ್🌿
ಆಹಾರದಲ್ಲಿ ಪ್ರಧಾನ ಭಾಗ ಸ್ನಿಗ್ಧ(ಎಣ್ಣೆ ಪದಾರ್ಥ ಅಲ್ಲ, ಕೈ, ಬಾಯಿ, ಹೊಟ್ಟೆಗೂ ಮೃದು ಅನಿಸಬೇಕು, ಉದಾ: ಅಕ್ಕಿ, ಗೋಧಿ, ರಾಗಿ...)ವಾಗಿರಬೇಕು. ನವಣೆ ಮುಂತಾದ ನಾರುಳ್ಳ, ಅಸ್ನಿಗ್ಧ(ಒಣಧಾನ್ಯ) ಗುಣ ಇರುವ ಧಾನ್ಯ ಸೇವಿಸಬಾರದು.

🔆 ಪ್ರಸನ್ನಚಿತ್ತರಾಗಿ ಭೋಜನ ಮಾಡಬೇಕು.

🔺 ನಾವು ನಿತ್ಯ ಮಾಡುವ ತಪ್ಪುಗಳು:

❄️ ರಾತ್ರಿ ಆಹಾರ ಜೀರ್ಣವಾದ ಲಕ್ಷಣಗಳು ಇಲ್ಲದಿದ್ದರೆ, ರಸ(ರಕ್ತ)ದಲ್ಲಿ ಇನ್ನೂ ಆಮ್ಲಭಾವ ಪೂರ್ಣ ಮರೆಯಾಗಿರುವುದಿಲ್ಲ, ಈ ಸಂದರ್ಭದಲ್ಲಿ ಮತ್ತೆ ಬೆಳಿಗ್ಗೆ ಊಟ ಮಾಡಿದರೆ ರಕ್ತಕ್ಕೆ ಸೇರಿದ ಹೊಸ ಅನ್ನ ಮತ್ತು ಅಜೀರ್ಣ ರಸ ಸೇರಿ "ಗರವಿಷ"(ನಿಧಾನ ಗತಿಯ ವಿಷ) ಉತ್ಪತ್ತಿ ಮಾಡುತ್ತವೆ. ಇದೇ ಅನೇಕ ರೋಗಗಳನ್ನು ಬೆಳೆಸುತ್ತದೆ.

❄️ ಆಹಾರ ಜೀರ್ಣವಾಗದೇ ಇದ್ದರೂ ಸಮಯವಾಯಿತೆಂದು ಮಧ್ಯಾಹ್ನ ಊಟ ಮಾಡಿದರೆ, ಜೀವಕೋಶಗಳು ಬೇಗ ಸವೆಯುತ್ತವೆ. ಬೇಗ ಮುಪ್ಪು-ಮರಣ ಬರುತ್ತದೆ.
ದೀರ್ಘಾಯು ಮನುಷ್ಯರನ್ನು ಗಮನಿಸಿ ಅವರ ಆಹಾರ ಪ್ರಮಾಣ ಮತ್ತು ಸಂಖ್ಯೆ ಎರಡೂ ಮಿತವಾಗಿರುತ್ತದೆ.

👉 ಸೂಚನೆ: ಬೆಳಗಿನ ಆಹಾರ ಜೀರ್ಣವಾದ ಲಕ್ಷಣ ಇಲ್ಲದಿದ್ದರೂ, ರಾತ್ರಿ ಅಲ್ಪ ಭೋಜನ ಮಾಡಬಹುದು, ಇದು ದೋಷಕರವಲ್ಲ.‌‌ ಏಕೆಂದರೆ, ರಾತ್ರಿ ಚಟುವಟಿಕೆಗಳಿಂದ ದೂರ ಇರುತ್ತೇವೆ ಆದ್ದರಿಂದ ಆಹಾರ, ರಸ, ರಕ್ತದ ಚಲನೆ ನಿಧಾನವಾಗಿರುತ್ತದೆ.

ಸೂರ್ಯೋದಯವಾಗಿ 2 ಯಾಮ(6hours) ಕಳೆದು ಊಟ ಮಾಡಿದರೆ ತೀವ್ರ ಸ್ವರೂಪದ ಬಲಹಾನಿಯಾಗುತ್ತದೆ. ಬಹಳ ಹೆಂಗಸರು ಆಹಾರಕ್ಕೆ ಪರ್ಯಾಯವೇ ಅಲ್ಲದ ಕಾಫಿ-ಚಹಾ ಕುಡಿದೋ, ಬಿಸ್ಕೆಟ್ ತಿಂದೋ ಮಧ್ಯಾಹ್ನ 12ರ ನಂತರ ಆಹಾರ ಸೇವಿಸುತ್ತಾರೆ, ಇದು ಸರ್ವಾದಾ ನಿಷಿದ್ಧ ಕರ್ಮ, ಹೀಗೆ ಮಾಡುವುದರಿಂದ ಬಲಹಾನಿಯಾಗಿ ಹೈಪೋಥೈರಾಯ್ಡಿಸಮ್ ನಂತಹ ರೋಗಗಳು ಬಾಧಿಸುತ್ತವೆ.

▪️ ಆಹಾರದಲ್ಲಿ ಮೊದಲು ಯಾವ ರಸ ಸೇವಿಸಬೇಕು?
ನಾಳೆ ನೋಡೋಣ

🙏ಧನ್ಯವಾದಗಳು 🙏
••••••••••••••
By
ಹೆಚ್.ಬಿ.ಮೇಟಿ

MATHS TIME LINE

MATHS TIME LINE https://mathigon.org/timeline