*ತುಟ್ಟಿ ಭತ್ಯೆ(DA)ಯ ಇತಿಹಾಸ ಮತ್ತು ಪ್ರಸಕ್ತ ಪರಿಸ್ಥಿತಿ ಒಂದು ಸಿಂಹಾವಲೋಕನ*
====================
*ದೇಶದಲ್ಲಿ ಕೇಂದ್ರ ಸರ್ಕಾರದ ನೌಕರರು ಹಾಗೂ ಕೇಂದ್ರ ಸರಕಾರಿ ನೌಕರರಾಗಿ ನಿವೃತ್ತರಾದವರಿಗೆ ಕೇಂದ್ರ ಸರಕಾರವೂ, ಅದೇರೀತಿ ರಾಜ್ಯ ಸರಕಾರಿ ನೌಕರರು ಹಾಗೂ ರಾಜ್ಯ ಸರಕಾರಿ ನೌಕರರಾಗಿ ನಿವೃತ್ತಿ ಆದವರಿಗೆ ಆಯಾಯಾ ರಾಜ್ಯ ಸರಕಾರಗಳು ತುಟ್ಟಿ ಭತ್ಯೆ ಪ್ರಕಟಿಸುವುದು ಒಂದು ನಿಯಮಿತ ಪದ್ಧತಿ. ಸೇವೆಯಲ್ಲಿ ಇರುವ ನೌಕರರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು DA ಅಂತಲೂ, ಸೇವೆಯಿಂದ ನಿವೃತ್ತಿ ಹೊಂದಿದವರಿಗೆ ಪ್ರಕಟಿಸುವ ತುಟ್ಟಿ ಭತ್ಯೆಯನ್ನು DR ಎಂದೂ ಕರೆಯಲಾಗುತ್ತದೆ. DA ಅಂದರೆ Dearness Allowance ಎಂದೂ, DR ಅಂದರೆ Dearness Relief ಎಂದೂ ಕರೆಯಲಾಗುತ್ತದೆ*.
1) *ತುಟ್ಟಿ ಭತ್ಯೆ(DA) ಎಂದರೇನು* ?
ಪ್ರಶ್ನೆಯಲ್ಲಿಯೇ ಉತ್ತರವೂ ಇದೆ. ತುಟ್ಟಿ ಎಂದರೆ ಸಾಮಾನ್ಯ ಅರ್ಥದಲ್ಲಿ ಹೆಚ್ಚಾಗು, ಅಧಿಕವಾಗು, ಬೆಲೆ ಏರಿಕೆಯಾಗು ಎಂದಾಗುತ್ತದೆ. ಅಂದರೆ, ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರು ಹಾಗೂ ನಿವೃತ್ತ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ತೊಂದರೆಗೆ ಒಳಗಾಗದೇ ನೆಮ್ಮದಿಯ ಬದುಕು ಸಾಗಿಸುವುದರ ಜೊತೆಗೆ ಸಾರ್ವಜನಿಕರ ಕೆಲಸಗಳನ್ನು ಖುಷಿಯಿಂದ ಮಾಡಲಿ ಎನ್ನುವ ಉದ್ದೇಶದಿಂದ ಸರಕಾರಗಳು ಒದಗಿಸುವ ಆರ್ಥಿಕ ಸೌಲಭ್ಯ ಎಂದು ಸರಳವಾಗಿ ಹೇಳಬಹುದು.
2) *ಸಾಮಾನ್ಯವಾಗಿ ತುಟ್ಟಿ ಭತ್ಯೆಯನ್ನು ಯಾವಾಗ ಪ್ರಕಟಿಸಲಾಗುತ್ತದೆ* ?
ಸಾಮಾನ್ಯವಾಗಿ ತುಟ್ಟಿ ಭತ್ಯೆಯನ್ನು ಕ್ಯಾಲೆಂಡರ್ ವರ್ಷದ ಜನವರಿ ಹಾಗೂ ಜುಲೈ ತಿಂಗಳುಗಳಲ್ಲಿ ಪ್ರಕಟಿಸಲಾಗುತ್ತದೆ. ಒಂದುವೇಳೆ ಬೇರೆ ತಿಂಗಳುಗಳಲ್ಲಿ ಪ್ರಕಟಿಸಿಸಿದರೂ, ಜನವರಿ ಅಥವಾ ಜುಲೈ ತಿಂಗಳುಗಳಿಂದಲೇ ಅನ್ವಯ ಆಗುವಂತೆ ಲೆಕ್ಕಾಚಾರ ಮಾಡಲಾಗುತ್ತದೆ. ಹಾಗಾದಾಗ ಬಾಕಿ ಪಾವತಿ ಮಾಡಿರುವುದೂ ಇದೆ.
3) *ತುಟ್ಟಿ ಭತ್ಯೆ ಬಾಕಿಯನ್ನು ನಗದು ರೂಪದಲ್ಲಿ ಕೊಡಲಾಗುತ್ತದೆಯೆ* ?
ಪ್ರಾರಂಭದಲ್ಲಿ ತುಟ್ಟಿ ಭತ್ಯೆ ಯ ಬಾಕಿಯನ್ನು ನಗದು ರೂಪದಲ್ಲಿ ಕೊಡಲಾಗುತ್ತಿತ್ತು. ನಂತರದ ದಿನಗಳಲ್ಲಿ ರಾಷ್ಟ್ರೀಯ ಉಳಿತಾಯ ಪತ್ರಗಳ(NSC) ರೂಪದಲ್ಲಿ ಕೊಡಲಾಯಿತು. ಹಾಗೆ ಕೊಟ್ಟಾಗ ನೌಕರರಿಗೆ ಪೇಪರ್ ಬೆನಿಫಿಟ್ ಸಿಗುತ್ತಿತ್ತು. ಸರಕಾರಕ್ಕೆ ಹಣ ಸಿಗುತ್ತಿತ್ತು. ಆ ಹಣವನ್ನು ಸರಕಾರಗಳು ತಮ್ಮ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ತುಟ್ಟಿ ಭತ್ಯೆ ಬಾಕಿಯನ್ನು ಪುನಃ ನಗದು ರೂಪದಲ್ಲಿ ಕೊಡಲಾಗುತ್ತಿದೆ.
4) *ತುಟ್ಟಿ ಭತ್ಯೆ (DA/DR) ಯನ್ನು ಯಾವ ಲೆಕ್ಕಾಚಾರದಲ್ಲಿ ಪ್ರಕಟಿಸಲಾಗುತ್ತದೆ* ?
ಕರ್ನಾಟಕ ರಾಜ್ಯ ಸರಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ (DA/DR) ಯನ್ನು 1-1-1987ಕ್ಕೂ ಮೊದಲು ನೌಕರನ ಅಥವಾ ನಿವೃತ್ತ ನೌಕರನ ಮೂಲ ವೇತನಕ್ಕೆ ಅನುಗುಣವಾಗಿ ರೂಪಾಯಿಗಳ ಲೆಕ್ಕಾಚಾರದಲ್ಲಿ ಅಂದರೆ, 2ರೂ, 5ರೂ, 8ರೂ, 10 ರೂ, 15ರೂ........... ಹೀಗೆ ಪ್ರಕಟ ಮಾಡುತ್ತಿತ್ತು. ಅಷ್ಟೇ ಅಲ್ಲ ಹಾಗೆ ಪ್ರಕಟ ಮಾಡುವಾಗ ಅದಕ್ಕೆ ಕಾಲಮಿತಿ ಏನೂ ಇರಲಿಲ್ಲ. ವರ್ಷಕ್ಕೆ ಹಲವಾರು ಬಾರಿ, ಕೆಲವೊಮ್ಮೆ ಒಂದೇ ತಿಂಗಳಲ್ಲಿ ಎರಡು ಮೂರು ಬಾರಿಯೂ DA / DR ಪ್ರಕಟಿಸಿರುವ ಉದಾಹರಣೆಗಳೂ ಇವೆ.
ರಾಜ್ಯದ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಕಾಲಕಾಲಕ್ಕೆ ಪ್ರಕಟಿಸಿ , ಅದಕ್ಕೆ ಅಗತ್ಯವಾದ ಹಣಕಾಸು ಬಿಡುಗಡೆ ಮಾಡುವುದು ರಾಜ್ಯ ಸರಕಾರದ ಜವಾಬ್ದಾರಿ. ಅದಕ್ಕಾಗಿ ಯಾವಕಾಣಕ್ಕೂ ಕೇಂದ್ರ ಸರಕಾರದ ನಿಲುವು ನಿರೀಕ್ಷಿಸ ಬೇಕಾದ ಅಗತ್ಯ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಗುಂಡೂರಾಯರು ವಿಧಾನಸಭೆಯಲ್ಲಿ ಪ್ರಕಟಿಸಿದ್ದರು ಎಂಬುದು ಸದನದ ದಾಖಲೆಗಳಲ್ಲಿ ದಾಖಲಾಗಿದೆ .
1-1-1987 ರ ನಂತರ ಕರ್ನಾಟಕ ರಾಜ್ಯ ಸರ್ಕಾರ ತನ್ನ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ತುಟ್ಟಿ ಭತ್ಯೆಯನ್ನು ನೌಕರನ ಮೂಲ ವೇತನಕ್ಕೆ (%) ಶೇಕಡಾವಾರು ಪ್ರಮಾಣದಲ್ಲಿ ಪ್ರಕಟಿಸಲು ಆರಂಭಿಸಿತು. ನಂತರ ಅದೇ ಒಂದು ಸಹಜ ಕ್ರಿಯೆಯೇ ಆಗಿ ನಡೆದು ಬಂದಿದೆ.
1-1-1987 ರಲ್ಲಿ ರಾಜ್ಯ ಸರ್ಕಾರ ತನ್ನ ನೌಕರನ ಮೂಲ ವೇತನಕ್ಕೆ 4% DA ಪ್ರಕಟಿಸಿತು. ಹಾಗೆ ಕಾಲಾನುಕಾಲಕ್ಕೆ ಪ್ರಕಟಿಸಿದ DA 1998 ರ ವೇಳೆಗೆ 178% ಆಗಿತ್ತು. ಅಂದರೆ, ಆಗ ನೌಕರನ ಸಂಬಳ 1000 ರೂಪಾಯಿಗಳು ಇತ್ತು ಎಂದರೆ, ಅವನು/ಳು ಪಡೆಯುತ್ತಿದ್ದ DA 1780 ರೂಪಾಯಿಗಳಾಗುತ್ತಿತ್ತು. ಅಂದರೆ ಅವನ/ಳ ಮೂಲ ವೇತನ 1000 + 1780(DA) = 2780 ರೂಪಾಯಿಗಳಾಗುತ್ತಿತ್ತು.
5) *ಕರ್ನಾಟಕ ರಾಜ್ಯದಲ್ಲಿ ತುಟ್ಟಿ ಭತ್ಯೆಯ ಬೆಳವಣಿಗೆ ಹೇಗೆ ಬೆಳೆದು ಬಂದಿದೆ* ?
ಕರ್ನಾಟಕ ರಾಜ್ಯದಲ್ಲಿ 1-4-1998ರಲ್ಲಿ ನೌಕರನ ಮೂಲ ವೇತನ ಹಾಗೂ ಅದಕ್ಕೆ ಪಡೆಯುತ್ತಿದ್ದ 178% ತುಟ್ಟಿ ಭತ್ಯೆಯನ್ನು ವಿಲೀನ ಮಾಡಿ ಅದನ್ನು ನೌಕರನ ಮೂಲ ವೇತನವನ್ನಾಗಿ ಮಾಡಲಾಯಿತು. ಆಗ ಆದ ಮೂಲ ವೇತನಕ್ಕೆ 16% ತುಟ್ಟಿ ಭತ್ಯೆ ಪ್ರಕಟಿಸಲಾಯಿತು. ಹಾಗೆಯೇ ಕಾಲಾನಂತರದಲ್ಲಿ ಸರಕಾರ ಪ್ರಕಟಿಸಿದ ತುಟ್ಟಿ ಭತ್ಯೆಯು 2006ರ ಜುಲೈ ವೇಳೆಗೆ 79% ತಲುಪಿತ್ತು.
2006ರ ಜುಲೈ ತಿಂಗಳಲ್ಲಿ 70% ತುಟ್ಟಿ ಭತ್ಯೆಯನ್ನು ನೌಕರನ ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. ಹಾಗೆ ವಿಲೀನ ಮಾಡಿದ ನಂತರ ಆದ ಮೂಲ ವೇತನಕ್ಕೆ 2.625% ತುಟಿ ಭತ್ಯೆ ಪ್ರಕಟಿಸಲಾಯಿತು.
ಅನಂತರದ ದಿನಗಳಲ್ಲಿ ಪ್ರಕಟಿಸಿದ ತುಟ್ಟಿ ಭತ್ಯೆ 2012ರ ವೇಳೆಗೆ 76.75% ತಲುಪಿತು.
ಆಗ ಆ 76.75% ತುಟ್ಟಿ ಭತ್ಯೆಯನ್ನು ನೌಕರನ/ಳ ಮೂಲ ವೇತನಕ್ಕೆ ವಿಲೀನ ಮಾಡಲಾಯಿತು. ಹಾಗೆ ವಿಲೀನದ ನಂರತ ಆದ ಮೂಲ ವೇತನಕ್ಕೆ 4% ತುಟ್ಟಿ ಭತ್ಯೆಯನ್ನು ಪ್ರಕಟಿಸಲಾಯಿತು. ಅನಂತರ ಕಾಲಕಾಲಕ್ಕೆ ಪ್ರಕಟಿಸಿದ ತುಟ್ಟಿ ಭತ್ಯೆ 2017ರ ಜುಲೈ ವೇಳೆಗೆ 45.25% ಆಯಿತು. 2017ರಲ್ಲಿ ಆ 47.25% ತುಟ್ಟಿ ಭತ್ಯೆಯನ್ನು ಮೂಲ ವೇತನಕ್ಕೆ ವಿಲೀನ ಮಾಡಲಾಯಿತು.
ಆಗ ಆದ ಮೂಲ ವೇತನಕ್ಕೆ 2018ರ ಜನವರಿ ತಿಂಗಳಿನಿಂದ 1.75% ತುಟ್ಟಿ ಭತ್ಯೆಯನ್ನು ಪ್ರಕಟಿಸಲಾಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಪ್ರಕಟವಾದ ತುಟ್ಟಿ ಭತ್ಯೆ 2019ರ ಜುಲೈ ವೇಳೆಗೆ 11.25% ಆಯಿತು.
ಅಲ್ಲಿಂದ ಕರೋನ ಕಾರಣಕ್ಕಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ ಎನ್ನುವ ಕಾರಣ ಮುಂದಿಟ್ಟು ಸರಕಾರ 3 DAಗಳನ್ನು ಪ್ರಕಟಿಸುವುದೇ ಇಲ್ಲ ಎನ್ನುವ ಕೇಂದ್ರ ಸರಕಾರದ ಆದೇಶವನ್ನು ರಾಜ್ಯ ಸರಕಾರವೂ ಹೊರಡಿಸಿದೆ.
ಕಳೆದ ಒಂದೂವರೆ ವರ್ಷದಲ್ಲಿ ಅಗತ್ಯ ಸಾಮಾಗ್ರಿಗಳ ಬೆಲೆ ಗಗನಕ್ಕೆ ಏರುತ್ತಲೇ ಇವೆ. ಆದರೂ ಸರಕಾವೂ DA ಪ್ರಕಟಿಸಿಲ್ಲ. ಇದರಿಂದಾಗಿ ರಾಜ್ಯದ ಪ್ರತಿ ನೌಕರರಿಗೆ ಸದ್ಯಕ್ಕೆ ಸಾವಿರಾರು ರೂಪಾಯಿಗಳ ನಷ್ಟ. ಸೇವಾವಧಿ ಪೂರ್ತಿ ಹಾಗೂ ನಿವೃತ್ತಿ ಜೀವನ ಮತ್ತು ಜೀವನ ಪೂರ್ತಿ ಲೆಕ್ಕ ಮಾಡಿದರೆ ಲಕ್ಷಾಂತರ ರೂಪಾಯಿಗಳ ನಷ್ಟ ಆಗತ್ತದೆ.
6) *ತುಟ್ಟಿ ಭತ್ಯೆಯನ್ನು ಯಾವ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ* ?
ತುಟ್ಟಿ ಭತ್ಯೆಯನ್ನು AICPI ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ.
7) *AICPI ಎಂದರೇನು* ?
AICPI ಎಂದರೆ All India Consumer Price Index ಎಂದರ್ಥ. ಕನ್ನಡದಲ್ಲಿ ಅದನ್ನು ಅಖಿಲ ಭಾರತ ಬಳಕೆದಾರರ ಬೆಲೆ ಸೂಚ್ಯಂಕ ಎನ್ನುತ್ತಾರೆ.
8) *AICPIಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ* ?
AICPIಯನ್ನು ಜೀವನ ಅವಶ್ಯಕ ವಸ್ತುಗಳ ಬೆಲೆಗಳ ಏರಿಕೆಯನ್ನು ಒಂದು ವರ್ಷದಲ್ಲಿ ಲೆಕ್ಕಾಚಾರ ಮಾಡಿ ಅದರ ಸರಾಸರಿಯನ್ನು ಗುರುತಿಸುವ ಮೂಲಕ ಮಾಡಲಾಗುತ್ತದೆ.
ಉದಾಹರಣೆಗೆ 2015ರ ಜನವರಿಯಿಂದ - ಡಿಸೆಂಬರ್ ವರೆಗಿನ ಒಂದು ವರ್ಷದ ಅವಧಿಯಲ್ಲಿ ಜೀವನ ಅವಶ್ಯಕ ಸಾಮಾಗ್ರಿಗಳ ಬೆಲೆ ಏರಿಕೆಯ ಒಟ್ಟು ಮೊತ್ತ 3137.12 ರೂಪಾಯಿಗಳಾಗಿತ್ತು.
ಆ 3137.12 ÷12 = 261.41 ಆಗಿತ್ತು. ಅದರ ಆಧಾರದಲ್ಲಿ 2016ರ ಜನವರಿ ತಿಂಗಳಲ್ಲಿ DA ಪ್ರಕಟಿಸಲಾಯಿತು. ಅಂತೆಯೇ 2016ರ DA ಪ್ರಕಟಿಸುವಾಗ ಜೂನ್ 2015 ರಿಂದ ಮೇ 2016 ರ ವರೆಗಿನ ಒಂದು ವರ್ಷದ ಅವಧಿಯಲ್ಲಿನ ಅಖಿಲ ಭಾರತ ಬಳಕೆದಾರರ ಬೆಲೆ ಸೂಚ್ಯಂಕದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಯಿತು. ಪ್ರತಿ ಬಾರಿ DA ಪ್ರಕಟ ಮಾಡುವಾಗಲೂ ಇದೇ ಪ್ರಕ್ರಿಯೆ ಮಾಡಲಾಗುತ್ತದೆ.
9) *DA ಪ್ರಕಟಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದೇ ಅಥವಾ ರಾಜ್ಯ ಸರಕಾರದ್ದೇ* ?
ಕೇಂದ್ರ ಸರಕಾರಿ ನೌಕರರಿಗೆ ಕೇಂದ್ರ ಸರಕಾರವೂ, ರಾಜ್ಯ ಸರಕಾರಿ ನೌಕರರಿಗೆ ರಾಜ್ಯ ಸರಕಾರವೂ ಪ್ರತ್ಯೇಕವಾಗಿ DA ಪ್ರಕಟಿಸುತ್ತವೆ. ರಾಜ್ಯ ಸರಕಾರಿ ನೌಕರರಿಗೆ DA ಪ್ರಕಟಿಸುವುದಕ್ಕಾಗಿ ಕೇಂದ್ರ ಸರಕಾರ ಯಾವುದೇ ರೀತಿಯ ಹಣಕಾಸು ನೆರವು ನೀಡುವ ಪದ್ಧತಿ ಇಲ್ಲವೇ ಇಲ್ಲ. ..
10) *ಕೇಂದ್ರ ಸರಕಾರಿ ನೌಕರರಿಗೆ ಹಾಗೂ ರಾಜ್ಯ ಸರಕಾರಿ ನೌಕರರಿಗೆ DA ಒಂದೇ ರೀತಿಯಲ್ಲಿ ಇರುವುದೇ* ?
ಇಲ್ಲ. ಕೇಂದ್ರ ಸರಕಾರಿ ನೌಕರರಿಗೆ ಹಾಗೂ ರಾಜ್ಯ ಸರಕಾರಿ ನೌಕರರಿಗೆ DA ಒಂದೇ ರೀತಿಯಲ್ಲಿ ಇರುವುದಿಲ್ಲ. AICPI ಒಂದೇ ಆದರೂ, DA ಪ್ರಕಟಿಸುವಲ್ಲಿ ತಾರತಮ್ಯ ಇದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಮೂಲ ವೇತನಕ್ಕೆ ಹೋಲಿಸಿದರೆ ಕೇಂದ್ರ ಸರಕಾರಿ ನೌಕರರ ಮೂಲ ವೇತನ ಬಹಳ ಹೆಚ್ಚು. ಹಾಗಾಗಿ ಕೇಂದ್ರ ಸರಕಾರವು ಸ್ವಲ್ಪವೇ DA ಪ್ರಕಟಿಸಿದರೂ ಆ ನೌಕರರಿಗೆ ಹೆಚ್ಚು ಹಣ ದೊರೆಯುತ್ತದೆ. ರಾಜ್ಯ ಸರಕಾರಿ ನೌಕರರಿಗೆ ಮೂಲ ವೇತನ ಕಡಿಮೆ ಇರುವುದರಿಂದ ಕೇಂದ್ರದ 1% DA = ರಾಜ್ಯದ 0.944% ನಿಯಮವನ್ನು ಕರ್ನಾಟಕ ರಾಜ್ಯ ಸರಕಾರ ಅನುಸರಿಸುತ್ತಿರುವುದರಿಂದ ರಾಜ್ಯದ ನೌಕರರಿಗೆ "ಕೈ ಹೊಡೆತ ಕಂಬದ ಬಡಿತ" ಎನ್ನುವ ಗಾದೆ ಮಾತಿನಂತೆ ಎರಡೆರಡು ರೀತಿಯಲ್ಲಿ ಅನ್ಯಾಯಗಳು ಆಗುತ್ತಿವೆ.
11) *ಕೋವಿಡ್-19ರ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನ್ನ ನೌಕರರಿಗೆ 3 DAಗಳನ್ನು ಕೊಡದೇ ಇರಲು ಆದೇಶ ಮಾಡಿರುವುದರಿಂದ ನೌಕರರಿಗೆ ಯಾವ ರೀತಿಯ ಪರಿಣಾಮ ಆಗಿದೆ* ?
ಖಂಡಿತ ಭಾರೀ ಪ್ರಮಾಣದ ನಷ್ಟ ಆಗಿದೆ. ಅದು ಏಕ ಮುಖ ನಷ್ಟವಲ್ಲ. ಅನೇಕ ಮುಖ ನಷ್ಟಗಳಾಗಿವೆ. ಅವುಗಳನ್ನು ಉದಾಹರಣೆಗಳ ಸಮೇತವೇ ವಿವರಿಸುವ ಅಗತ್ಯವಿದೆ. ಅಗತ್ಯ ಸಾಮಾಗ್ರಿಗಳ ವಿಪರೀತ ಬೆಲೆ ಬೆಲೆ ಏರಿಕೆ ಆಗುತ್ತಿದ್ದರೂ,
ಜುಲೈ 2019 ರಿಂದಲೂ ರಾಜ್ಯದ ಸರಕಾರಿ ನೌಕರರು 11.25% DA ಪಡೆಯುತ್ತಿದ್ದೇವೆ.
ಜನವರಿ 2020,
ಜುಲೈ 2020 ಹಾಗೂ
ಜನವರಿ 2021 ಈ ಮೂರೂ ಅವಧಿಗಳಲ್ಲಿ ರಾಜ್ಯ ಸರಕಾರ ಕ್ರಮವಾಗಿ ಕೇವಲ 2% + 2% + 2% DA ಪ್ರಕಟಿಸಿದ್ದರೂ ನೌಕರರಿಗೆ ಎಷ್ಟೋ ಅನುಕೂಲ ಆಗುತ್ತಿತ್ತು. ಸರಕಾರ ಹಾಗೆ ಮಾಡದೇ ಇರುವುದರಿಂದ ನೌಕರರಿಗೆ ಭಾರೀ ಪ್ರಮಾಣದ ನಷ್ಡ ಆಗಿದೆ. ಅಷ್ಟೇ ಅಲ್ಲ ಅವರ ವೃತ್ತಿ ಜೀವನ ಅವಧಿಯಲ್ಲಿ ಮಾತ್ರವಲ್ಲ, ನಿವೃತ್ತಿ ಜೀವನದ ಮೇಲೂ ಭಾರೀ ಕೆಟ್ಟ ಪರಿಣಾಮ ಬೀರುತ್ತದೆ.
ನಷ್ಟದ ಲೆಕ್ಕಾಚಾರ ಹೀಗೂ ಮಾಡಬಹುದು.
1)ಮೂಲವೇತನ × ಪಡೆಯುತ್ತಿರುವ DA 11.25%
2)ಮೂಲವೇತನ× 13.25% DA -11.25%= ವ್ಯತ್ಯಾಸ × 6= ಮೊತ್ತ
3) ಮೂಲವೇತನ
ಉದಾಹರಣೆಗೆ ಒಬ್ಬ ದ್ವಿದಸ ಅವರ ಮೂಲ ವೇತನ 21400 ಇದೆ.
21400×11.25%=2408
21400×13.25%=2836
21400×15.25%=3263
21400×17.25%=3691
2836-2408=428×6 =2568
3263-2408=855×6=5130
3691-2408=1283×6=7698
-------------------------------------------
ಒಟ್ಟು 15396 ರೂಪಾಯಿಗಳ ನಷ್ಟ . ಅದೂ ಕೇವಲ ಒಂದೂವರೆ ವರ್ಷದಲ್ಲಿ.
ಸರಕಾರ ಪ್ರತಿ ಆರು ತಿಂಗಳಿಗೊಮ್ಮೆ ಕೇವಲ 2% DA ಪ್ರಕಟಿಸಿದ್ದರೂ ಕೂಡಾ ಕಡಿಮೆ ಸೇವಾ ಅವಧಿ ಇರುವ ನೌಕರರಿಗೆ ಗರಿಷ್ಠ ಪ್ರಮಾಣದ ಆರ್ಥಿಕ ಸೌಲಭ್ಯ ಸಿಗುತ್ತಿತ್ತು. ದೀರ್ಘ ಸೇವಾವಧಿ ಇರುವ ನೌಕರರಿಗೆ ದೀರ್ಘಾವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ಸೌಲಭ್ಯ ಸಿಗುತ್ತಿತ್ತು. DA ಪ್ರಕಟಿಸಿದ್ದರೆ ಮುಂದಿನ ವೇತನ ಆಯೋಗದ ಸಂದರ್ಭದಲ್ಲಿ ಅದು ಮೂಲ ವೇತನಕ್ಕೆ ವಿಲೀನವಾಗಿ ಅದಕ್ಕೆ DA ದೊರಕುತ್ತಿತ್ತು. ನಂತರ ನಿವೃತ್ತಿ ಸಂದರ್ಭದಲ್ಲಿ ನಿವೃತ್ತಿ ವೇತನ ಹೆಚ್ಚಿಗೆ ನಿಗದಿಯಾಗುತ್ತಿತ್ತು. ಒಂದುವೇಳೆ ಕುಟುಂಬ ಪಿಂಚಣಿ ಸೌಲಭ್ಯ ಪಡೆಯಬೇಕಾದ ಸಂದರ್ಭ ಬಂದಲ್ಲಿ ಕುಟುಂಬ ಪಿಂಚಣಿ ಕೂಡಾ ಕನಿಷ್ಠ 3% ಹೆಚ್ಚಿಗೆ ನಿಗದಿ ಆಗುತ್ತಿತ್ತು. ಸರಕಾರ DA ಪ್ರಕಟ ಮಾಡದೇ ತಡೆಹಿಡಿದಿರುವ ಕಾರಣ ಸರ್ವ ನೌಕರರಿಗೂ, ಸರ್ವ ಪಿಂಚಣಿದಾರರಿಗೂ ಜೀವನ ಪರ್ಯಂತ ಆರ್ಥಿಕ ಹೊಡೆತ ಆಗಿದೆ.
ಕರ್ನಾಟಕ ರಾಜ್ಯ ಸರಕಾರವು 3 DA ಪ್ರಕಟ ಪಡಿಸದ ಕಾರಣ ಯಾವಯಾವ ಮೂಲವೇತನದವರಿಗೆ ಕನಿಷ್ಠ ಎಷ್ಟು ಆರ್ಥಿಕ ನಷ್ಟ ಆಗುತ್ತಿದೆ ಎಂಬುದರ ಕೆಲವು ಉದಾಹರಣೆಗಳು ಈ ಕೆಳಗಿನಂತೆ ಇವೆ.
ಮೂಲ ವೇತನ ನಷ್ಟ( ರೂಗಳಲ್ಲಿ)
25800 18033
34300 24693
42000 30240
45300 32616
61150 43428
ಹೀಗೆ ನಿಮ್ಮ ವೇತನ ನಷ್ಟ ಲೆಕ್ಕ ಮಾಡಿಕೊಳ್ಳಿ.
*ತುಟ್ಟಿಭತ್ಯೆ ಬಗ್ಗೆ ಕರ್ನಾಟಕ ರಾಜ್ಯ 6ನೇ ವೇತನ ಆಯೋಗದ ಆದೇಶಗಳು*
ಹೊಸ ವೇತನ ಶ್ರೇಣಿಗಳನ್ನು ರಚಿಸುವಲ್ಲಿ ಅಖಿಲಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 276.9 ಅಂಶಗಳ ವರೆಗಿನ (ಆಧಾರ ವರ್ಷ 2001=100) ತುಟ್ಟಿಭತ್ತೆಯನ್ನು ದಿನಾಂಕ1.7.2017 ರಂದು ಲಭ್ಯವಿದ್ದ ಸರಕಾರಿ ನೌಕರನ ಮೂಲವೇತನದೊಂದಿಗೆ ವಿಲೀನಗೊಳಿಸಲಾಗಿರುತ್ತದೆ. ಆದುದರಿಂದ ಪರಿಷ್ಕೃತವೇತನ ಶ್ರೇಣಿಗಳಲ್ಲಿ ಮೊದಲ ಕಂತಿನ ವೇತನ ತುಟ್ಟಿ ಭತ್ಯೆಯು ದಿನಾಂಕ1.1.2018 ರಂದು ಪ್ರಾಪ್ತವಾಗುತ್ತದೆ.
ಸರಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಭಾರತ ಸರ್ಕಾರ ರೂಪಿಸಿರುವ ತುಟ್ಟಿಭತ್ತೆ ಸೂತ್ರಕ್ಕೆ ಅನುಸಾರವಾಗಿ ಪಾವತಿಸತಕ್ಕದ್ದು.
ಪರಿಷ್ಕೃತವೇತನ ಶ್ರೇಣಿಗಳಲ್ಲಿ ಸರಕಾರಿ ನೌಕರರಿಗೆ ಸಂದಾಯ ಮಾಡಬೇಕಾದ ತುಟ್ಟಿಭತ್ಯೆಯನ್ನು ಕೇಂದ್ರ ಸರಕಾರವು ಮಂಜೂರು ಮಾಡುವ ತುಟ್ಟಿಭತ್ಯೆಯ ಪ್ರತಿ ಶೇಕಡಾ 1ಕ್ಕೆ 0.944 ದರದಲ್ಲಿ (multiflication factor) ಲೆಕ್ಕಾಚಾರ ಮಾಡತಕ್ಕದ್ದು.
ಇದನ್ನು ಒಂದನೇ ಜನವರಿ ಮತ್ತು ಒಂದನೆ ಜುಲೈ ರಿಂದ ಜಾರಿಗೆ ಬರುವಂತೆ ವರ್ಷಕ್ಕೆರಡು ಬಾರಿ ಪಾವತಿಸತಕ್ಕದ್ದು.
ಹಣದುಬ್ಬರದ ತಟಸ್ಥೀಕರಣ ವು ಎಲ್ಲ ಹಂತಗಳಲ್ಲಿ ಶೇಕಡಾ ನೂರರಷ್ಟು ಏಕರೂಪವಾಗಿ ರತಕ್ಕದ್ದು.
ತುಟ್ಟಿಭತ್ತೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದನ್ನು ಮುಂದುವರಿಸಲಾಗುವುದು
*ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಆದೇಶಗಳು ದಿನಾಂಕ : 01-01-1987 ರಿಂದ 01-07-2021 ರ ವರೆಗೆ ನಮ್ಮ ಎಲ್ಲಾ ನೌಕರರಿಗೆ ಶೇರ್ ಮಾಡಿ ಮಾಹಿತಿ ಹಂಚಿಕೊಳ್ಳಿ*
*ದಿನಾಂಕ ಹೆಚ್ಚಳ -ಶೇಕಡ*
01-01-1987- 4%
01-07-1987- 8%
01-01-1988- 13%
01-07-1988- 19%
01-01-1989- 24%
01-07-1989- 29%
01-01-1990- 33%
01-07-1990- 37%
01-01-1991- 45%
01-07-1991 54%
01-01-1992- 65%
01-07-1992- 76%
01-01-1993- 85%
01-07-1993- 90%
01-01-1994- 96%
01-07-1994- 106%
01-01-1995- 116%
01-07-1995- 127%
01-01-1996- 138%
01-07-1996- 149%
01-01-1997- 160%
01-07-1997- 171%
01-01-1998- 178%
01-07-1998 - 192%
01-04-1998- 16%
01-07-1998- 22%
01-01-1999 - 32%
01-07-1999 - 37%
01-01-2000 - 38%
01-07-2000- 41%
01-01-2001- 43%
01-07-2001- 45%
01-01-2002- 49%
01-07-2002- 52%
01-01-2003- 55%
01-07-2003 59%
01-01-2004- 61%
01-07-2004- 64%
01-01-2005- 67%
01-07-2005- 71%
01-01-2006- 74%
01-07-2006- 79%
01-04-2006- 2.625%
01-07-2006- 7%
01-01-2007- 12.25%
01-07-2007- 17.50%
01-01-2008- 22.75%
01-07-2008- 26.75%
01-01-2009- 32.75%
01-07-2009- 38%
01-01-2010- 46%
01-07-2010- 56.25%
01-01-2011- 62.50%
01-07-2011- 69.50%
01-01-2012- 76.75%
01-07-2012- 4%
01-01-2013- 9%
01-07-2013- 15%
01-01-2014- 21%
01-07-2014- 25.25%
01-01-2015- 28.75%
01-07-2015- 32.50%
01-01-2016- 36%
01-07-2016- 40.25%
01-01-2017- 43.25%
01-07-2017- 45.25%
01-01-2018-1.75% 01-07-2018- 3.75%
01-01-2019- 6.50%
01-07-2019- 11.25%
01-07-2021-22.25%.
No comments:
Post a Comment