✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Tuesday, 22 March 2022

SSLCಪರೀಕ್ಷೆ ತಯಾರಿ ಹೀಗಿದ್ದರೆ ಉತ್ತಮ....

*ಪರೀಕ್ಷೆ ತಯಾರಿ ಹೀಗಿರಲಿ*
  
ಪರೀಕ್ಷೆ ಅಂದ ತಕ್ಷಣ ಭಯವಾಗುತ್ತದೆ, ರಾತ್ರಿ ಕನಸ್ಸಿನಲ್ಲೂ ಅದೇ ವಿಷಯ, ಪರೀಕ್ಷೆ ಹತ್ತಿರ ಬಂದಾಗ ಏನು ಓದುವುದೆಂದೇ ತಿಳಿಯುವುದಿಲ್ಲ, ಓದಿದ್ದು ತಲೆಗೆ ಹೋಗುವುದಿಲ್ಲ, ಓದುತ್ತಾ ಕುಳಿತರೆ ನಿದ್ದೆ ಬಂದು ಬಿಡುತ್ತದೆ. ಈ ರೀತಿಯ ಮಾತುಗಳನ್ನು ವಿದ್ಯಾರ್ಥಿಗಳು ಹೇಳುವುದುಂಟು. ಒಂದರ ಹಿಂದೆ ಮತ್ತೊಂದು ಎನ್ನುವಂತೆ ಭಯದಿಂದ ಒತ್ತಡ, ಖಿನ್ನತೆ, ಪೂರ್ಣವಾಗಿ ಆರೋಗ್ಯವೂ ಕೆಟ್ಟು ಹೋಗುತ್ತದೆ. ಪರೀಕ್ಷಾ ಜ್ವರ ಯಾರನ್ನೂ ಬಿಟ್ಟಿದ್ದಿಲ್ಲ.

ಆದರೆ ಇದರ ಹಿಂದಿನ ಕಾರಣವೂ ಮುಖ್ಯವಲ್ಲವೇ? ಮೊದಲೇ ಇದು ಸ್ಪರ್ಧಾ ಯುಗ, ಹೆಚ್ಚು ಅಂಕ ಗಳಿಸಬೇಕು, ಕಡಿಮೆ ಅಂಕ ಗಳಿಸಿದರೆ ಬೇರೆಯವರೊಂದಿಗೆ ಹೋಲಿಸುತ್ತಾರೆ. ಅಲ್ಲಿ ನಿರಾಕರಣೆಯ ಭಯದ ಜೊತೆಗೆ ಅನಾಥ ಭಾವ ಮೂಡಿ ಬಿಡುತ್ತದೆ. ಫಲಿತಾಂಶ ಚೆನ್ನಾಗಿ ಬಾರದಿದ್ದರೆ ಎಲ್ಲರಿಗೂ ಮುಖ ತೋರಿಸುವುದು ಹೇಗೆ ಎನ್ನುವ ಅಂಜಿಕೆ ಮೂಡುತ್ತದೆ.

ಎಲ್ಲ ವಿದ್ಯಾರ್ಥಿಗಳ ಸಮಸ್ಯೆಯೂ ಒಂದೇ ಅದೇನೆಂದರೆ ಓದಿದ್ದು ನೆನಪಿನಲ್ಲಿಯೇ ಉಳಿಯುವುದಿಲ್ಲ ಎಂಬುದು. ಕಾರಣ ಓದುವ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳುವುದಿಲ್ಲ. ಓದಿದ ನಂತರ ಮತ್ತೆ ಪುನಾರಾವರ್ತನೆ ಮಾಡುವ ಬಗ್ಗೆಯೂ ಯೋಚಿಸಿರುವುದಿಲ್ಲ. ಒಂದೇ ಸಮನೆ ಓದಿ ಬಿಟ್ಟರಾಯಿತೇ, ಸರಿಯಾದ ವಿಶ್ರಾಂತಿಯೂ ಅಗತ್ಯ. ಪರೀಕ್ಷೆಗಾಗಿ ಓದುವ ಬಗ್ಗೆ ಸಮರ್ಪಕವಾದ ಯೋಜನೆಯನ್ನು ರೂಪಿಸಿಕೊಳ್ಳಿ.

ಓದಲು ಸಮರ್ಪಕ ಯೋಜನೆ-ಟೈಮ್ ಟೇಬಲ್
ಪರೀಕ್ಷೆಗೆ ಇನ್ನೆಷ್ಟು ದಿನಗಳಿವೆ ಎಂದು ಯೋಚಿಸಿ, ದಿನದ 24ಗಂಟೆಗಳನ್ನೂ ಸರಿಯಾದ ರೀತಿಯಲ್ಲಿ ವಿಭಾಗಿಸಿಕೊಳ್ಳಿ. 12 ಗಂಟೆ ಓದು, ಏಳುಗಂಟೆ ನಿದ್ದೆ, ಊಟಕ್ಕೆ ಒಂದು ಗಂಟೆ, ಮನರಂಜನೆಗೆ ಒಂದು ಗಂಟೆ, ದಿನ ನಿತ್ಯದ ಕೆಲಸಗಳಿಗೆ ಒಂದು ಗಂಟೆ, ಹಾಗೂ ಇನ್ನೂ ಎರಡು ಗಂಟೆ ಉಳಿಯುತ್ತದೆ.

ಓದಿನ ಹನ್ನೆರಡು ಗಂಟೆಗಳನ್ನು ಸಮವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂದು ನಾಲ್ಕು ಭಾಗಗಳಲ್ಲಿ ವಿಭಾಗಿಸಿಕೊಳ್ಳಿ. ಅದರಲ್ಲೇ ಓದು, ಬರವಣಿಗೆ ಮತ್ತು ಪುನಾರಾವರ್ತನೆಗೂ ಸಮಯ ಮೀಸಲಿಡಿ. ನೀವು ಹಾಕಿಕೊಂಡ ಟೈಮ್ ಟೇಬಲ್ ಪ್ರಾಮಾಣಿಕವಾಗಿ ಪಾಲಿಸಿ. ಪ್ರಗತಿಯನ್ನು ಗಮನಿಸಿ, ಸಮಾಧಾನಕರವಾಗಿಲ್ಲವೆನಿಸಿದರೆ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರೆಂದೇ ಅರ್ಥ.

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬಹುದು?
*ದಿನವೂ ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಕುಳಿತುಕೊಳ್ಳಿ. ಆ ವಾತಾವರಣಕ್ಕೆ ನಿಮ್ಮ ಮನಸ್ಸು ಹೊಂದಿಕೊಳ್ಳುತ್ತದೆ.
*ಮೊಬೈಲ್, ಟಿ.ವಿ. ಟ್ಯಾಬ್, ಕಂಪ್ಯೂಟರ್. ಎಲ್ಲವನ್ನೂ ಆರಿಸಿಬಿಡಿ.
*ಓದುವಾಗ ಯಾವ ರೀತಿಯಲ್ಲೂ ನಿಮಗೆ ತೊಂದರೆ ಕೊಡಬಾರದೆಂದು ಮನೆಯವರಿಗೆ ಹೇಳಿ.
*ಆ ಸಮಯದಲ್ಲಿ ಯಾವುದೇ ಫೋನ್, ಮೊಬೈಲ್ ಕರೆಗಳನ್ನು ಸ್ವೀಕರಿಸಬೇಡಿ.
*ಆದಷ್ಟು ಇತರ ಕಾರ್ಯಕ್ರಮಗಳಿಗೆ ಹೋಗದಿರಿ.
*ಕ್ರಿಕೆಟ್ ಪಂದ್ಯ ಮತ್ತು ಗೆಳೆಯ ಮತ್ತು ಗೆಳತಿಯರಿಂದ ಆದಷ್ಟು ದೂರವಿರಿ.

ಇಷ್ಟಾಗಿಯೂ ನಿಮಗೆ ಓದಲು ಏಕಾಗ್ರತೆ ಬರುತ್ತಿಲ್ಲವೇ ಹಾಗಾದರೆ ಕೆಲವು ವಿಧಾನಗಳನ್ನು ಪ್ರಯತ್ನಿಸಿ.
*ದೀರ್ಘವಾಗಿ ಶ್ವಾಸವನ್ನು ತೆಗೆದುಕೊಳ್ಳಿ
*ನಿಮ್ಮ ಅಂಗೈಗಳನ್ನು ಚೆನ್ನಾಗಿ ಉಜ್ಜಿಕೊಂಡು ಕಣ್ಣುಗಳ ಮೇಲಿಟ್ಟುಕೊಳ್ಳಿ
*ಬಗ್ಗುವ, ಕೈ ಕಾಲುಗಳನ್ನು ಚಾಚುವಂತಹ ವ್ಯಾಯಾಮವನ್ನು ಮಾಡಿ.
*ಮೆಲುವಾದ ಸಂಗೀತವನ್ನು ಕೇಳಿಸಿಕೊಳ್ಳಿ.
*ಪುನಾರವರ್ತನೆ ಮಾಡುವಾಗ ವೇಗವಾಗಿ ಓದಿ.

*ಫಾರ್ಮುಲಾಗಳು, ಚಿತ್ರಗಳು, ನಕ್ಷೆಗಳನ್ನು ದೊಡ್ಡದಾಗಿ ಬರೆದು ಓಡಾಡುವಾಗ ನಿಮ್ಮ ಕಣ್ಣಿಗೆ ಕಾಣುವಂತೆ ಇಟ್ಟುಕೊಳ್ಳಿ.
*ನಿಮ್ಮ ಪಾಠಗಳನ್ನು ಮನಸ್ಸಿನಲ್ಲೇ ಊಹಿಸಿಕೊಳ್ಳಿ.
*ಗೆಲುವು ನಿಮ್ಮದೆನ್ನುವ ಭಾವ ಬೆಳೆಸಿಕೊಳ್ಳಿ.
ಓದುವಾಗ ಗಮನಿಸಬೇಕಾದ ಅಂಶಗಳು
*ಕಷ್ಟವಾಗಿರುವುದನ್ನು ಮೊದಲು ಓದಿ

*ಕಷ್ಟದ ವಿಷಯವೆಂದು ಇಂದು, ನಾಳೆ ಎಂದು ಮುಂದೂಡಬೇಡಿ. ಅಗತ್ಯವೆನಿಸಿದರೆ ನಿಮ್ಮ ಗೆಳೆಯ/ತಿ, ಶಿಕ್ಷಕರ ಸಲಹೆ ತೆಗೆದುಕೊಳ್ಳಿ.
*ನೀವು ಬರೆದುಕೊಂಡ ನೋಟ್ಸ್ ಅಲ್ಲದೆ ಮಿಕ್ಕ ಪುಸ್ತಕಗಳನ್ನೂ ಓದಿ.

*ಪರೀಕ್ಷೆಯ ಭಯದಲ್ಲಿ ಓದುತ್ತೇನೆಂದು ಗಂಟೆಗಟ್ಟಲೇ ಓದುವ ಅಗತ್ಯವಿಲ್ಲ. *5 ನಿಮಿಷಕ್ಕಿಂತ ಹೆಚ್ಚಾಗಿ ಒಂದೇ ಸಮನೆ ಓದಲಾಗದು ಅಥವಾ ಓದಿದರೂ ಅದು ತಲೆಯಲ್ಲಿ ಉಳಿಯಲಾರದು. ಆದ್ದರಿಂದ ಓದಿನ ಮಧ್ಯೆ ವಿರಾಮ ತೆಗೆದುಕೊಳ್ಳಿ ಮತ್ತು ಏಕಾಗ್ರತೆ ಹೆಚ್ಚಿಸುವ ವ್ಯಾಯಾಮ ಮಾಡಿ. ಮಧ್ಯೆ ವಿರಾಮದಲ್ಲಿ ಯಾರನ್ನಾದರೂ ಮಾತನಾಡಿಸಿ, ನಗಿಸಿ, ವಿರಮಿಸಿ, ಸ್ವಲ್ಪ ಹೊತ್ತು ಹೊರಗೆ ಹೋಗಿ, ಒಟ್ಟಿನಲ್ಲಿ ನಿಮಗಿಷ್ಟವಾದುದನ್ನು ಮಾಡಿ, ನಿಮ್ಮಲ್ಲಿ ಆಸಕ್ತಿ ಮೂಡುವಂತೆ ಮಾಡಿಕೊಳ್ಳಿ.

*ಸರಿಯಾಗಿ ನಿದ್ದೆ ಮಾಡಿ, ನಿದ್ದೆ ಮಾಡದಿದ್ದರೆ ಒಂದು ರೀತಿಯ ಮಂಕು ಆವರಿಸುತ್ತದೆ. ಓದಲು ಆಸಕ್ತಿಯೇ ಹೊರಟು ಹೋಗುತ್ತದೆ.
ನಿಮ್ಮ ಬಗೆಗಿನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ

ನಿಮ್ಮ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ, ಈಗ ಪ್ರಾರಂಭಿಸಿದರೂ ತಡವಾಗಿಲ್ಲ ಎನ್ನುವ ಭಾವ ಬೆಳೆಸಿಕೊಳ್ಳಿ, ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ನನ್ನಿಂದ ಮಾಡಲು ಸಾಧ್ಯವಿದೆ, ನಾನು ಮಾಡಬಲ್ಲೆ, ನನ್ನಲ್ಲಿ ನಾನು ನಂಬಿಕೆ ಇಡುತ್ತೇನೆ, ನಾನಿರುವಂತೆ ಅಭಿಮಾನ ಪಡುತ್ತೇನೆ, ಐ ಆಮ್ ದ ಬೆಸ್ಟ್ ಎನ್ನುವ ಭಾವ ನಿಮ್ಮದಾಗಲಿ.

ಅಬ್ಬಬ್ಬಾ ಎಂದರೆ ಏನಾಗಲು ಸಾಧ್ಯ? ಈ ಪರೀಕ್ಷೆಗಳೇನೂ ಅಂತಿಮವಲ್ಲ, ಸೋಲಾದರೂ ಎದುರಿಸುತ್ತೇನೆ, ಮುಂದೆ ನನ್ನ ಸೋಲನ್ನು ಗೆಲುವಾಗುವಂತೆ ಮಾಡುತ್ತೇನೆ ಎನ್ನುವ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಿ. ಪರೀಕ್ಷೆಯ ಬಗೆಗಿನ ನಿಮ್ಮ ಭಯದ ಬಗ್ಗೆ, ನಿಮ್ಮ ಗುರಿಯ ಬಗ್ಗೆ, ನಿಮ್ಮ ಪೋಷಕರೊಡನೆ ಮುಕ್ತವಾಗಿ ಮಾತನಾಡಿ. ಅವರು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಾರೆ? ಅವರಿಂದ ನೀವು ಯಾವ ರೀತಿಯ ಸಹಕಾರ ಬಯಸುತ್ತೀರೆಂದು ಸ್ಪಷ್ಟವಾಗಿ ತಿಳಿಸಿ. ನಿಮ್ಮ ಓದಿನ, ಪರೀಕ್ಷೆಯ, ಮುಂದೆ ಆರಿಸುವ ವೃತ್ತಿಯ, ನಿಮ್ಮ ಜೀವನದ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ.

 ನನ್ನಿಂದಾಗದು ಎನ್ನುವ ಮಂತ್ರ ಬಿಟ್ಟು ನಿಮ್ಮಲ್ಲಿ ನಂಬಿಕೆ ಇಡಿ, ನೀವಿರುವಂತೆ ನಿಮ್ಮನ್ನು ಸ್ವೀಕರಿಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಹಿಂದಿನ ನೆನಪು ಬೇಡ. ಈಗೇನು ಮಾಡಬಹುದೆನ್ನುವ ಬಗ್ಗೆ ಯೋಚಿಸಿ. ನೀವು ಮಾಡುವುದನ್ನು ಪ್ರೀತಿಸಿ ಅಥವಾ ನಿಮಗೆ ಪ್ರೀತಿ ಇರುವುದನ್ನು ಮಾಡಿ. ನೀವು ಅಂದು ಕೊಂಡಿರುವುದಕ್ಕಿಂತಾ ನಿಮ್ಮಲ್ಲಿ ಹೆಚ್ಚಿನ ಶಕ್ತಿ ಇದೆ. ಸಕಾರಾತ್ಮಕ ಭಾವನೆಗಳನ್ನು ಬೆಳೆಸಿ. ನಿಮ್ಮಲ್ಲಿರುವ ಅಂತಃ ಶಕ್ತಿಯನ್ನು ಒಟ್ಟುಗೂಡಿಸಿಕೊಳ್ಳಿ.

ಪರೀಕ್ಷೆಗೇನೋ ಸಿದ್ಧವಾದಿರಿ. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಕೈಗೆ ಬಂದಾಗ ನಿಮಗೆ ಗೊತ್ತಿಲ್ಲದಿರುವುದನ್ನು ಹುಡುಕಬೇಡಿ. *ಮೊದಲು ಗೊತ್ತಿರುವುದರ ಬಗ್ಗೆ ಗಮನ ಕೊಡಿ.* ನಂತರ ಕಷ್ಟದ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. *ಸಮಯದ ಬಗ್ಗೆ ಗಮನ ಕೊಡಿ.* ಒಂದೇ ಪ್ರಶ್ನೆಗೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳ ಬೇಡಿ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿ. *ಪರೀಕ್ಷೆ ಮುಗಿಯಿತು, ಹೊರಗೆ ಬಂದು ಬರೆದಿರುವ ಉತ್ತರಗಳ ಬಗ್ಗೆ ಯಾರೊಡನೆಯೂ ಚರ್ಚೆ ಬೇಡ.* ಆಗಿರುವುದನ್ನು ಬದಲಿಸಲಾಗದು ಆದರೆ ಅದರ ಪರಿಣಾಮ ಮುಂದೆ ಬರೆಯುವ ಪತ್ರಿಕೆಗಳ ಮೇಲೂ ಆಗುತ್ತದೆ.

No comments:

Post a Comment

MATHS TIME LINE

MATHS TIME LINE https://mathigon.org/timeline