✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Saturday 8 July 2023

ಕ್ಷಮೆ ಅಂದರೇನು? ಒಂದು ಚರ್ಚೆ...

ಕ್ಷಮೆ

ಕ್ಷಮೆ ಅಂದರೇನು?  ನಾನು ಮತ್ತೊಬ್ಬರನ್ನು ಕ್ಷಮಿಸಿದ್ದೀನಿ ಅನ್ನೋ ಭಾವವೇ ಅಹಂಕಾರ ಜನ್ಯವಾದದ್ದು. "ಹೋಗು ಬಿಟ್ಟಿದ್ದೀನಿ, ಎಲ್ಲಾದರೂ ಬದುಕಿಕೊ" ಎಂಬ ಕಥೆ, ಸಿನಿಮಾಗಳಲ್ಲಿನ ಮಾತೇ ಮತ್ತೊಬ್ಬನಿಗೆ ಆಂತರ್ಯದಲ್ಲಿ ಅವಮಾನ‍ದ‍ ಅನುಭವ ಹುಟ್ಟಿಸುತ್ತೇನೋ!

ಪ್ರತಿ ನಿತ್ಯ ಯಾರಿಂದಲೋ ಬೇಸರ ಆಗುತ್ತೆ.  ನಾವೂ ಮತ್ತೊಬ್ಬರ ಬೇಸರಕ್ಕೆ ಕಾರಣ ಆಗಿರುತ್ತೇವೆ.  “ನಮ್ಮ ಬೇಸರಕ್ಕೆ ಮತ್ತೊಬ್ಬರು ಕಾರಣ ಎಂಬ ಭಾವವೇ ನಮ್ಮಲ್ಲಿ ಬರದಂತೆ ಅರಿವು ಮೂಡಿಸಿಕೊಳ್ಳುವುದು” ಕ್ಷಮೆಯ ಮೂಲತತ್ವ ಆಗಬೇಕೇನೋ. ನಾವು ಯಾವುದೋ ಕಾರಣಕ್ಕೆ ಕಿತ್ತಾಡಿ ಕೈಕುಲುಕಿ ಮಾಡಿಕೊಳ್ಳುವ compromise ಅನ್ನೋದು ಪೂರ್ತಿ ಕ್ಷಮೆಯ ಆಳವನ್ನು ಸ್ಪುರಿಸುವುದಿಲ್ಲ.    ಆ ವಿಚಾರವನ್ನು ಎರಡೂ ಪಕ್ಷದವರೂ  ಮತ್ತೊಬ್ಬರ ಬಳಿ ಹೋಗಿ, "ಹೀಗೆ ಹೀಗೆ ಆಯ್ತು ಹೋಕ್ಕೊಳ್ಳಿ ಅಂತ ಬಿಟ್ಟು ಬಿಟ್ಟೆ" ಎಂದು ಹೇಳಿಕೊಳ್ಳುತ್ತಾ  ಕಾಡಿನ ಬೆಂಕಿಯಂತಾ ವಿಸ್ತಾರ ಪಡೆಯುತ್ತಲೇ ಇರುತ್ತೆ.

ಕ್ಷಮೆಯ ಮೂಲ ತತ್ವಗಳು ಇಲ್ಲಿರಬಹುದೇನೋ:

1. ನಾನೂ ತಪ್ಪು ಮಾಡುವ ಸಾಧ್ಯತೆ ಇದೆ ಎಂಬ ಅರಿವು
2. ಒಂದು ಭಿನ್ನಾಭಿಪ್ರಾಯ ಬಂದಾಗ, ನಾವು ಚರ್ಚೆಯಲ್ಲಿ ಗೆಲುವು ಸಾಧಿಸುವುದರತ್ತ ಗಮನ ಹರಿಸದಿರುವುದು
3. ವಾದಗಳಲ್ಲಿ ಜಯದ ಅಪೇಕ್ಷೆ ಹೊಂದದಿರುವಾಗ ನಮ್ಮಲ್ಲಿ ಅಹಂ ಬದಲು ಮತ್ತೊಬ್ಬನನ್ನು ಕೇಳಿಸಿಕೊಳ್ಳುವ ಸೌಜನ್ಯ ನಿರ್ಮಾಣ ಆಗುತ್ತೆ
4. ಅಲ್ಲಿ ಸಮಾನ ಭಾವವಿರುತ್ತೆ, ಆಪ್ತತೆ ಹೆಚ್ಚಾಗುತ್ತೆ
 
ಇತ್ತೀಚೆಗೆ ಒಬ್ಬರ ಬಳಿ ಅಪ್ತ ಮಾತುಕತೆ ಸಂದರ್ಭದಲ್ಲಿ, ತಮಾಷೆ-ಆಪ್ತತೆಯ ಸೂಕ್ಷ್ಮತೆಗಳು ಸಡಿಲಾದ ಒಂದು ಕ್ಷಣ ಆ ವ್ಯಕ್ತಿಯಲ್ಲಿ ನನ್ನ ಕುರಿತು ಅಸಮಾಧಾನ ಹುಟ್ಟಿಸಿತು ಎಂದು ಅರಿವಿಗೆ ಬರಲಿಕ್ಕೆ ನನಗೆ ತಡವಾಗಲಿಲ್ಲ. ನಾನು ಅವರಿಗೆ ಹೃದಯಾಂತರಾಳದಿಂದ ಅಗತ್ಯವಾದ ಬೆಂಬಲ ನೀಡಿದ್ದೆ,  ಆದರೂ ಹೀಗೆ ಆಯ್ತಲ್ಲ ಎಂಬ ಹಲವು ಸಮ್ಮಿಶ್ರ ಭಾವಗಳು ಎದುರಾದವು. 

ನಮಗೆ ನೋವು ಎಂಬುದಾದಾಗ ನಿನ್ನೆ ಜೊತೆಯಾಗಿ ಸಿಹಿ ತಿಂದಿದ್ದೆವು ಎಂದು ನೆನಪಿರುತ್ತದೆ ಎನ್ನಲಿಕ್ಕಾಗುವುದಿಲ್ಲ.  ಹೀಗಾಗಿ ನಾವು ಕೊಟ್ಟ ಮತ್ತೊಂದು ಬೆಂಬಲ, ನಾವು  ಅವರ ಮನಸ್ಸಿನ ಮೇಲೆ ಹಾಕಿದ ಗೀರಿಗೆ ಸಮಜಾಯಿಷಿ ಆಗಬಾರದು.  ನನ್ನಿಂದ ಆದ  ಗೀರಿನ ದೆಸೆಯಿಂದ ಅವರಿಗೆ ನಮ್ಮಲ್ಲಿ ಮೊದಲಿನ ಆಪ್ತತೆ ಹಿಂದಿರುಗದಿದ್ದರೂ ಅಚ್ಚರಿಯಿಲ್ಲ.  'ಇದೇನು ಮಹಾ ನಾ ಮಾಡಿದ ತಪ್ಪು?' ಎಂದುಕೊಳ್ಳುವುದೇ ನನ್ನ ಅಹಂಕಾರ.  ಅವರು ನನ್ನ ಸ್ನೇಹಕ್ಕೆ ಹಿಂದಿರುಗದಿದ್ದರೂ, ಅವರೂ ಮನುಷ್ಯರು ಎಂಬ ಅರಿವು ನನ್ನಲ್ಲಿರುವುದು ಮುಖ್ಯ.  ಹೀಗಿದ್ದಾಗ ಮಾತ್ರಾ ಸಂಬಂಧಗಳ ಎಳೆಗಳ ಕುರಿತು ನನ್ನ ಅಂತರಂಗದಲ್ಲಿ ಒಂದು ಸ್ವಚ್ಛತೆ ಮೂಡೀತೇನೊ! ಆ ಸ್ವಚ್ಛತೆಯ ಆಳದೊಳಗೆ ನೆಲೆಸಿರುವುದು ಸಾಧ್ಯವಾದರೆ ಮಾತ್ರಾ  ಕ್ಷಮೆ ಎಂಬ ಅಂತಃಕರಣದ ಕಿಂಚಿತ್ ಅನುಭವವಾದರೂ  ಅಂತರಂಗದಲ್ಲಿ ಮೂಡಬಹುದೇನೊ.

ಒಂದು ಮಾತುಕತೆಯಲ್ಲಿ ಒಂದು ಅಭಿವ್ಯಕ್ತಿ  ನನ್ನಿಂದ ಮೂಡುವಲ್ಲಿ ಮತ್ತು ಇನ್ನೊಂದೆಡೆ ಅದು ಸ್ವೀಕೃತವಾಗುವಲ್ಲಿ ವೈಪರೀತ್ಯತೆ ಮೂಡಿ, ಮತ್ತೊಬ್ಬರು ನೀನು ಎಲ್ಲೆಡೆಯೂ ಹೀಗೇ ಎಂದಾಗ ಅಲುಗಾಡಿ ಹೋದೆ. ಅಹಂ ಚುಚ್ಚಲಿಲ್ಲ ಎನ್ನಲಾರೆ, ಹಲವು ಮಾನುಷೀಯ ಸಹಜ ಕೀಳರಿಮೆಗಳು ಚಿಗುರಿರಲಿಲ್ಲ ಎನ್ನಲಾರೆ.  ಆದರೆ ಅಂತಃಮಥನದಲ್ಲಿ ಈ ವ್ಯಕ್ತಿಯೇನೋ ಹೇಳಿದರು, ಹಾಗೆ ಹೇಳದೆ ಮನಸ್ಸಲ್ಲಿ ಉಳಿಸಿಕೊಂಡಿರುವವರು ಎಷ್ಟು ಜನವೊ ಎನಿಸಿದಾಗ, ಆ ವ್ಯಕ್ತಿ ನೀಡಿದ್ದು ನಿಜವಾದ ಬೆಳಕು ಅನಿಸಿತು. ಒಬ್ಬರು ಹೇಳುವುದು ಕಟುವಾಗಿದ್ದಾಗ ಅದರಲ್ಲಿ ಏನೋ ಮಹತ್ವದ್ದಿರಬಹುದು.  ಅವರು ಹಾಗೆಲ್ಲಾ ಹೇಳಿದರು; ಆದರೂ ಕ್ಷಮೆ ಹೊಂದಿದ್ದೇ ಎಂಬುದೇ ಹುಂಬತನ.  ಇಲ್ಲಿ ಕ್ಷಮೆ ಎಂಬ ಪದವೆಲ್ಲಿಯದು, ಯಾವುದೋ ಒಂದು ಮೂಲದ ಮೂಲಕ, ನಮಗೆ ಬೆಳಕು ಸಂದ ಕೃಪೆಯ ಕುರಿತು ನಮಗೆ ಇರಬೇಕಾದದ್ದು ನಮನಭಾವ.

No comments:

Post a Comment

MATHS TIME LINE

MATHS TIME LINE https://mathigon.org/timeline