✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Monday, 17 July 2023

ಖಗೋಳವೆಂಬ ಕೌತುಕ ಮತ್ತು ಚಂದ್ರಯಾನ - 3.....


             ಜುಲೈ ‌14 2023 ಶುಕ್ರವಾರ ಅಂದರೆ ಇಂದು ಸಮಯ ಮಧ್ಯಾಹ್ನ ‌2/35 ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲಕ್ಕೆ ಉಡಾವಣೆಯಾಗಲಿದೆ ಭಾರತದ ಉಪಗ್ರಹ.....

ಎಲ್ಲವೂ ಸರಿಯಾದರೆ ಈಗಿನ ಯೋಜನೆಯಂತೆ ಆಗಸ್ಟ್ ‌23 ರಂದು ಚಂದ್ರನ ಮೇಲೆ ಇಳಿಯಲಿದೆ. ಅನೇಕ ಕುತೂಹಲಕಾರಿ ಮಾಹಿತಿಗಳನ್ನು ನೀಡಲಿದೆ......

ರಷ್ಯಾದ ಯೂರಿ ಗಗಾರಿನ್ ಎಂಬ ಮೊದಲ ಗಗನಯಾತ್ರಿ, ಚಂದ್ರನ ಮೇಲೆ  ಪಾದ ಸ್ಪರ್ಶ ಮಾಡಿದ ಮೊದಲ ಮಾನವ ಅಮೆರಿಕದ ನೀಲ್ ಆರ್ಮ್‌ಸ್ಟ್ರಾಂಗ್, ವೆಲೆಂಟೈನ ಟೆರೆಶ್ಕೋವ ಎಂಬ ಮೊದಲ ಮಹಿಳಾ ಗಗನಯಾತ್ರಿ, ಭಾರತದ ರಾಕೇಶ್ ಶರ್ಮಾ ಮತ್ತು ಅವರ ಸಹಾಯಕ ರವೀಶ್ ಮಲ್ಹೋತ್ರ ಎಂಬ ಭಾರತದ ಮೊದಲ ಗಗನಯಾತ್ರಿಗಳು, ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಂಸ್ ಎಂಬ ಭಾರತೀಯ ಮೂಲದ ಇಬ್ಬರು ಗಗನಯಾತ್ರಿಗಳು ಮತ್ತು ವಿಶ್ವದ ಇತರೆ ದೇಶಗಳ ಕೆಲವು ಗಗನಯಾತ್ರಿಗಳು, ಹಗಲು ರಾತ್ರಿ ಖಗೋಳ ನಿಗೂಢ ಬೇದಿಸಲು ನಿರಂತರ ಪ್ರಯತ್ನ ಮಾಡುತ್ತಿರುವ ಎಲ್ಲಾ ಖಗೋಳ ಶಾಸ್ತ್ರಜ್ಞರಿಗು ಕೃತಜ್ಞಾ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ..........

ಈ ನಿಟ್ಟಿನಲ್ಲಿ ಭಾರತದ ಹೆಮ್ಮೆಯ ಹೆಸರುಗಳಾದ ಆರ್ಯಭಟ ಮತ್ತು ವಿಕ್ರಮ್ ಸಾರಾಭಾಯಿ ಅವರನ್ನು ಸ್ಮರಿಸುತ್ತಾ.......

ಅರ್ಧ ಶತಮಾನಕ್ಕೂ ಹೆಚ್ಚು ಸಮಯವನ್ನು ಈ ಭೂಮಿಯ ಮೇಲೆ ಕಳೆದ ನನಗೆ ಈಗಲೂ ಬಾಹ್ಯಾಕಾಶ ಯಾತ್ರೆಯ ಬಗ್ಗೆ ಮಗುವಿನಷ್ಟು ಕುತೂಹಲ ಮುಗ್ದತೆ ಉಳಿದಿದೆ. ಮನೆಯ ಮಹಡಿಯ ಮೇಲೆ ನಿಂತು ಕೆಳಗೆ ನೋಡಲು ಭಯವಾಗುವ ಮನಸ್ಥಿತಿಯ ನಾವು, ವಿಮಾನದ ಹಾರಾಟವನ್ನೇ ಕುತೂಹಲದಿಂದ ವೀಕ್ಷಿಸುವ ನಾವು, ಅನಂತ ಆಗಸದಲ್ಲಿ ಮಿಂಚಿನ ವೇಗದಲ್ಲಿ ಪ್ರಯಾಣಿಸುವುದನ್ನು ಊಹಿಸಿಕೊಳ್ಳುವುದು ಕಷ್ಟ.....

ಭೂಮಿಯಿಂದ ಸುಮಾರು 385000 ( ಮೂರು ಲಕ್ಷ ಎಂಬತ್ತೈದು ಸಾವಿರ ) ಕಿಲೋಮೀಟರ್ ದೂರದಲ್ಲಿ ಇರುವ ಚಂದ್ರನಲ್ಲಿಗೆ ಮನುಷ್ಯನ ಪ್ರಯಾಣವೇ ಇರಬಹುದು ಅಥವಾ ಅಲ್ಲಿ ಕೆಲ ದಿನಗಳ ವಾಸವೇ ಇರಬಹುದು ಅಥವಾ ಮಾನವ ರಹಿತ ಸಂಶೋಧನಾ ಯಂತ್ರ ಕಳಿಸುವುದೇ ಇರಬಹುದು, ಮತ್ತು ‌ಅದನ್ನು ಇಲ್ಲಿನಿಂದಲೇ ನಿಯಂತ್ರಿಸುವುದು ಇರಬಹುದು, ಬಾಹ್ಯಾಕಾಶ ಕೇಂದ್ರದಲ್ಲಿ ಅಧ್ಯಯನ ಮಾಡುವುದೇ ಇರಬಹುದು ಎಲ್ಲವೂ ಸಾಮಾನ್ಯರ ಕಲ್ಪನೆಗೆ ಮೀರಿದ್ದು.....

ಎಲ್ಲಾ ಸೌಕರ್ಯಗಳ ನಡುವೆಯೂ ಒಂದು ವಾರದ ದೂರದ ಪ್ರವಾಸ ಅಥವಾ ಒಂದು ತಿಂಗಳ ವಿದೇಶ ಯಾತ್ರೆ ಅಥವಾ ಕೆಲವು ತಿಂಗಳ ಹೊರ ರಾಜ್ಯದ ತರಬೇತಿ ಅಥವಾ ಒಂದೆರಡು ವರ್ಷಗಳ ಶೈಕ್ಷಣಿಕ ಪ್ರವಾಸ ಇಷ್ಟಕ್ಕೇ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುವ ನಾವು ಯಾರ ನೇರ ಒಡನಾಟವಿಲ್ಲದೇ ಕೇವಲ ಧ್ವನಿ ಸಂಪರ್ಕ ಮಾತ್ರದೊಂದಿಗೆ ಲಕ್ಷಾಂತರ ಕಿಲೋಮೀಟರ್ ದೂರಕ್ಕೆ ಪ್ರಯಾಣಿಸಿ ಕೆಲ ಸಮಯ ಅಲ್ಲಿ ವಾಸಿಸುವ  ರೀತಿಯೇ ಕನಸಿನ ಲೋಕದಂತೆ ಭಾಸವಾಗುತ್ತದೆ. ತಂತ್ರಜ್ಞಾನ, ತರಬೇತಿ, ದೈಹಿಕ ಮತ್ತು ಮಾನಸಿಕ ಸಿದ್ದತೆ ಗಗನಯಾತ್ರಿಗಳಿಗೆ ಇರುತ್ತದೆ ಎಂಬುದು ನಿಜ. ಆದರೆ ಸಾಮಾನ್ಯ ಜನರಾದ ನಮಗೆ ಇದು ಒಂದು ವಿಸ್ಮಯ ಲೋಕ. ಅಲ್ಲಿನ‌ ಊಟ, ಸ್ನಾನ, ಆರೋಗ್ಯದ ವ್ಯತ್ಯಾಸ, ಒಂಟಿತನದ ಬೇಸರ, ಹಗಲು ರಾತ್ರಿಗಳು ಕಳೆಯುವ ರೀತಿ, ಅಲ್ಲಿನ ನೀರವತೆ, ಸಾವಿನ ಭಯ, ಪ್ರೀತಿ ಪಾತ್ರರ ನೆನಪು ಎಲ್ಲವನ್ನೂ ನಿಭಾಯಿಸುವ ರೀತಿ ನಿಜಕ್ಕೂ ಬಹುದೊಡ್ಡ ಸವಾಲು. ಏಕೆಂದರೆ ಅವರು ಸಹ ಮನುಷ್ಯರೇ ಅಲ್ಲವೇ....

ಬಾಹ್ಯಾಕಾಶ ಸಂಶೋಧನಾ ವಿಜ್ಞಾನದಲ್ಲಿ ಅಮೆರಿಕ ಮತ್ತು ರಷ್ಯಾ ಸಾಕಷ್ಟು ಅಭಿವೃದ್ಧಿ ಹೊಂದಿವೆ ಮತ್ತು ಅದರ ಮೇಲೆ ನಿಯಂತ್ರಣ ಸಾಧಿಸಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಫ್ರಾನ್ಸ್ ಜರ್ಮನಿ ಮತ್ತು ಭಾರತ ಸಹಾ ಅತಿವೇಗದಲ್ಲಿ ತಮ್ಮ ಛಾಪು ಮೂಡಿಸುತ್ತಿವೆ......

ವಿಷಯ ಯಾವುದೇ ಇರಲಿ. ಆ ಬಗ್ಗೆ ಕನಿಷ್ಠ ಮಟ್ಟದ ಕುತೂಹಲ ಬೆಳೆಸಿಕೊಳ್ಳುವ ಮನೋಭಾವ ಇದ್ದರೆ ಅದು ನಮ್ಮ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಉತ್ತಮ. ಬಹಳಷ್ಟು ಜನ ಕೆಲವು ವಿಷಯಗಳು ನಮಗೆ ಸಂಬಂಧಿಸಿಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಅದು ಒಟ್ಟು ವ್ಯಕ್ತಿತ್ವ ವಿಶಾಲವಾಗದೆ ಸಂಕುಚಿತಗೊಳ್ಳಲು ಕಾರಣವಾಗಿದೆ. ನಮಗೆ ರಾಜಕೀಯ ಬೇಡ, ವಿಜ್ಞಾನ ಬೇಡ, ಕಲೆ ಸಾಹಿತ್ಯ ಸಂಗೀತ ಕ್ರೀಡೆ ಬೇಡ, ಆರ್ಥಿಕ ಚಟುವಟಿಕೆಗಳ ಮಾಹಿತಿ ಬೇಡ ಎಂದು ಅದರಿಂದ ದೂರವಿದ್ದು ಕೇವಲ ತಮ್ಮ ಹಣ ಸಂಪಾದನೆ, ತಮ್ಮ ಕುಟುಂಬ ಮತ್ತು ಅದರ ನಿರ್ವಹಣೆಯ ಸುತ್ತಲೇ ಇಡೀ ಜೀವನ ರೂಪಿಸಿಕೊಂಡಿರುವ ಪರಿಣಾಮವೇ ಇಂದು ನಾವುಗಳು ಅಲ್ಪಮತಿಗಳಾಗುತ್ತಿರುವುದು.....

ನಿಮ್ಮ ಪಂಚೇಂದ್ರಿಯಗಳನ್ನು ಸ್ವಲ್ಪ ಮುಕ್ತವಾಗಿಡಿ. ಸಾಧ್ಯವಿರುವ ಮತ್ತು ಆಸಕ್ತಿ ಇರುವ ವಿಷಯಗಳನ್ನು ಸ್ವಲ್ಪ ಒಳ ಸ್ಪರ್ಶಿಸಲು ಅನುವು ಮಾಡಿಕೊಡಿ. ಆ ಮ‌ೂಲಕ ಬದುಕಿನ ಕ್ವಾಲಿಟಿಯನ್ನು ಉತ್ತಮ ಗೊಳಿಸಿಕೊಳ್ಳಬಹುದು.....

ಜೊತೆಗೆ ಮಕ್ಕಳಿಗೆ ಈ ರೀತಿಯ ವಿಸ್ಮಯಕಾರಿ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾ ಅವರ ಕುತೂಹಲ ಕೆರಳಿಸಿದರೆ ಖಂಡಿತ ಮುಂದಿನ ಭವಿಷ್ಯದಲ್ಲಿ ಅವರು ಯಾವುದಾದರೂ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡುವ ಸಾಧ್ಯತೆ ಇರುತ್ತದೆ. ಅನೇಕ ಹೊಸ ಹೊಸ ಸಂಶೋಧನೆಗಳು ರೂಪಗೊಂಡಿರುವುದೇ ಈ ರೀತಿಯ ಕುತೂಹಲಕಾರಿ ಪ್ರಶ್ನೆಗಳ ಮೂಲಕವೇ.
ರೇಡಿಯೋ, ರೈಲು, ವಿಮಾನ, ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದ ಎಲ್ಲವೂ ಇದಕ್ಕೆ ಉದಾಹರಣೆಗಳು......

ನಾವು ಮಾಡಬೇಕಿರುವುದು ಮಕ್ಕಳಿಗೆ ಈ ಮಾಹಿತಿಗಳು ಸುಲಭವಾಗಿ ಸಿಗಬೇಕು ಮತ್ತು ಮನೆಗಳಲ್ಲಿ, ಶಾಲೆಗಳಲ್ಲಿ, ಗೆಳೆಯರ ಬಳಗದಲ್ಲಿ ಇದರ ಬಗ್ಗೆಯೇ ಚರ್ಚೆಗಳನ್ನು ಹುಟ್ಟು ಹಾಕಿ ಒಂದು ರೀತಿಯ ಸಾಂಸ್ಕೃತಿಕ ವಾತಾವರಣ ಸೃಷ್ಟಿ ಮಾಡಬೇಕು. ಆಗ ಹೆಚ್ಚು ಹೆಚ್ಚು ಉತ್ತಮ ಫಲಿತಾಂಶಗಳು ಬರುತ್ತವೆ........

ಟಿವಿ ಧಾರವಾಹಿಗಳನ್ನು, ಸಿನಿಮಾಗಳನ್ನು ವೀಕ್ಷಿಸುತ್ತಾ, ಅದರ ಬಗ್ಗೆಯೇ ಚರ್ಚಿಸುತ್ತಾ, ವಿಡಿಯೋ ಗೇಮ್ ಗಳಲ್ಲಿ ಅವರನ್ನು ಮುಳುಗಿಸುತ್ತಾ, ಅತಿಯಾದ ಹೋಂ ವರ್ಕ್ ಮತ್ತು ಅಂಕಗಳಲ್ಲಿಯೇ ಅವರನ್ನು ಬಂಧಿಸುತ್ತಾ, ಮನೆ ಕಾರು ಆಸ್ತಿಗಳನ್ನು ಮಾಡುವುದೇ ಜೀವನದ ಬಹುದೊಡ್ಡ ಗುರಿ ಎಂದು ಉಪದೇಶಿಸುತ್ತಾ ಇದ್ದರೆ ಖಂಡಿತ ಈಗ ನೋಡುತ್ತಿರುವ ಅಸಹಿಷ್ಣತಾ ಮತ್ತು ಹಿಂಸಾ ಸಮಾಜದ ನಿರ್ಮಾಣ ಇನ್ನಷ್ಟು ವೇಗ ಪಡೆಯುತ್ತದೆ.....

ಆದ್ದರಿಂದ ಇನ್ನು ಮುಂದಾದರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದಿಕ್ಕಿನಲ್ಲಿ ಯೋಚಿಸೋಣ. ಮಾನವೀಯ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ಹೆಜ್ಜೆ ಇಡೋಣ. ಭಾರತದ ಚಂದ್ರ ಯಾನ - 3 ಎಂಬ ಇಸ್ರೋದ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸೋಣ. ಸಾಧ್ಯವಾದರೆ ಮಧ್ಯಾಹ್ನ ಇದನ್ನು ನೇರ ಪ್ರಸಾರದಲ್ಲಿ ವೀಕ್ಷಿಸೋಣ........

ಮಕ್ಕಳಲ್ಲಿ ಮುಂದೊಂದು ದಿನ ನಮ್ಮ ಕಲ್ಪನೆಯ " ಚಂದ ಮಾಮನಲ್ಲಿ " ವಾಸಿಸುವ ಕನಸು ಬಿತ್ತೋಣ........

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

No comments:

Post a Comment

MATHS TIME LINE

MATHS TIME LINE https://mathigon.org/timeline