ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್‌ಫುಲ್ ಟಿಪ್ಸ್
1) ಸುಂದರವಾದ ಕೈಬರಹ ನಿಮಗೆ ಅತಿ ಹೆಚ್ಚು ಅಂಕಗಳನ್ನು ತಂದುಕೊಡುತ್ತದೆ.
ಇನ್ನು ಕಾಪಿ ಬರೆದು ಅಕ್ಷರ ಚಂದ ಮಾಡಲು ನಿಮಗೆ ಸಮಯ ಇಲ್ಲ. ಆದರೆ ದಿನಕ್ಕೊಂದು ಅರ್ಧ ಗಂಟೆ ಸಮಯ ತೆಗೆದುಕೊಂಡು ಖಾಲಿ ಪೇಪರಿನಲ್ಲಿ ಐದಾರು ಪುಟ ಸುಂದರವಾಗಿ ಬರೆಯುವುದರಿಂದ ನಿಮ್ಮ ಪ್ರೆಸೆಂಟೇಷನ್ ಹೆಚ್ಚು ಮೌಲ್ಯ ಪಡೆಯುತ್ತದೆ. ಅದಕ್ಕೂ ಹೆಚ್ಚು ಏಕಾಗ್ರತೆ ಬೇಕು.
2) ಮೂರೂ ಭಾಷೆಗಳಲ್ಲಿ ಪತ್ರ ಲೇಖನಕ್ಕೆ ತಲಾ ಐದು ಅಂಕಗಳು ಇವೆ. ಅಫಿಶಿಯಲ್ ಪತ್ರ ಮತ್ತು ಇನ್ಫಾರ್ಮಲ್ ಪತ್ರಗಳ ನಡುವೆ ಆಯ್ಕೆ ಇದ್ದಾಗ ಖಂಡಿತವಾಗಿ ಅಫಿಷಿಯಲ್ ಪತ್ರವನ್ನು ಆಯ್ಕೆ ಮಾಡಿಕೊಳ್ಳಿ. ಅದು ನಿಮಗೆ ಹೆಚ್ಚಿನ ಅಂಕ ತಂದುಕೊಡುತ್ತದೆ.
3) ಡಿಸ್ಟಿಂಕ್ಷನ್ ಮಾರ್ಕ್ ಪಡೆಯಲು ಬಯಸುವವರು ಪ್ರತೀ ವಿಷಯವನ್ನು ಸಮಾನ ಪ್ರಾಶಸ್ತ್ಯ ಕೊಟ್ಟು ಓದಬೇಕು. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕಿಂತ ಭಾಷೆಗಳಲ್ಲಿ ಸ್ಕೋರ್ ಮಾಡುವುದು ಸುಲಭ. ಅದರಲ್ಲಿಯೂ ತೃತೀಯ ಭಾಷೆಯನ್ನು ನಿರ್ಲಕ್ಷ್ಯ ಮಾಡಬೇಡಿ.
4) ಸಮಾಜ ವಿಜ್ಞಾನದಲ್ಲಿ ಅಪ್ಲಿಕೇಶನ್ ಪ್ರಶ್ನೆ ಬರುವ ಸಾಧ್ಯತೆ ಕಡಿಮೆ. ಇನ್ನೊಂದು ಲಾಭ ಎಂದರೆ ಎಂಬತ್ತು ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 60 ಅಂಕಗಳ ಪ್ರಶ್ನೆಗಳು ಹೆಚ್ಚು ಕಡಿಮೆ ರಿಪೀಟ್ ಆಗುತ್ತವೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದಾಗ ನಿಮಗೆ ರಿಪೀಟ್ ಆಗುವ ಪ್ರಶ್ನೆಗಳು ದೊರೆಯುತ್ತವೆ. ಉದಾಹರಣೆಗೆ ನೇತಾಜಿ ಸುಭಾಸ್ ಚಂದ್ರ ಬೋಸರ ಕೊಡುಗೆಗಳು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿಯವರ ಕೊಡುಗೆಗಳು, ಮೊದಲ ಸ್ವಾತಂತ್ರ್ಯ ಸಂಗ್ರಾಮ ಯಾಕೆ ವಿಫಲವಾಯಿತು? ಭಾರತ ಪಾಕ್ ಸಂಬಂಧ, ಭಾರತದ ಕೃಷಿ ರಂಗದ ಸಮಸ್ಯೆಗಳು, ಬ್ಯಾಂಕುಗಳ ಮಹತ್ವ...ಇವೆಲ್ಲವೂ ಅತೀ ಹೆಚ್ಚು ಬಾರಿ ರಿಪೀಟ್ ಆಗುವ ಪ್ರಶ್ನೆಗಳು. ಅವುಗಳ ಬಗ್ಗೆ ಹೆಚ್ಚು ಗಮನ ಕೊಡಿ.
5) ಗಣಿತದಲ್ಲಿ ಸೂತ್ರಗಳು ತುಂಬಾ ಮುಖ್ಯ. ಸೂತ್ರಗಳನ್ನು ಕಲಿಯುವುದು ಖಂಡಿತ ಕಷ್ಟ ಅಲ್ಲ. ಎಲ್ಲ ಸೂತ್ರಗಳನ್ನು 40 ಪುಟಗಳ ಒಂದೇ ಪುಸ್ತಕದಲ್ಲಿ ಪಾಠಗಳ ಅನುಕ್ರಮಣಿಕೆಯಲ್ಲಿ ಬರೆದು ಇಡಬೇಕು. ದಿನಕ್ಕೊಮ್ಮೆ ಅವುಗಳನ್ನು ಜಸ್ಟ್ ಒಮ್ಮೆ ಗ್ಲಾನ್ಸ್ ಮಾಡಿದರೆ ಯಾವ ಸೂತ್ರವೂ ಮರೆತು ಹೋಗುವುದಿಲ್ಲ. ಸೂತ್ರಗಳನ್ನು ಪರಸ್ಪರ ಹೋಲಿಕೆ ಮಾಡಿ ಕಲಿಯುವುದು ಒಳ್ಳೆಯ ವಿಧಾನ. ಉದಾಹರಣೆಗೆ ಸಮಾಂತರ ಶ್ರೇಡಿಯ nನೇ ಪದವನ್ನು ಹುಡುಕುವ ಸೂತ್ರ ಮತ್ತು n ಪದಗಳ ಮೊತ್ತವನ್ನು ಮಾಡುವ ಸೂತ್ರಗಳ ನಡುವೆ ಹೋಲಿಕೆ ಇದೆ. ಹಾಗೆಯೇ ಸಿಲಿಂಡರ್ ಘನಫಲ ಮತ್ತು ಶಂಕುವಿನ ಘನಫಲ ಸೂತ್ರಗಳ ನಡುವೆ ಹೋಲಿಕೆ ಇದೆ. ಆ ಹೋಲಿಕೆಗಳನ್ನು ಗಮನಿಸಿದರೆ ಎಷ್ಟು ಸೂತ್ರವನ್ನು ಬೇಕಾದರೂ ಕಲಿಯಬಹುದು.
6) ಇತಿಹಾಸದಲ್ಲಿ ಇಸವಿಯನ್ನು ಕಲಿಯುವುದು ಖಂಡಿತ ಸುಲಭ. ನಿಮ್ಮ ಇತಿಹಾಸ ಪುಸ್ತಕದ ಎಲ್ಲ ಘಟನೆಗಳನ್ನು ಒಂದೇ ಪುಸ್ತಕದಲ್ಲಿ ಇಸವಿಯೊಂದಿಗೆ ಬರೆದಿಟ್ಟರೆ ತುಂಬಾ ಅನುಕೂಲ. ಹಾಗೆಯೇ ಆ ಇಸವಿಗಳ ನಡುವೆ ಇರುವ ಅಂತರವನ್ನು ಗಮನಿಸಿದರೆ ಎಷ್ಟು ಇಸವಿ ಕೂಡ ನೆನಪಿಟ್ಟು ಕೊಳ್ಳಬಹುದು.
ಉದಾಹರಣೆಗೆ 1757 ಪ್ಲಾಸಿ ಕದನ ನಡೆಯಿತು. ಅದಾಗಿ ಸರಿಯಾಗಿ ನೂರು ವರ್ಷಗಳ ನಂತರ ( 1857) ಮೊದಲ ಸ್ವಾತಂತ್ರ್ಯ ಸಂಗ್ರಾಮ ಆಯಿತು. ಅಲ್ಲಿಂದ 12 ವರ್ಷಗಳ ನಂತರ ( 1869) ಗಾಂಧೀಜಿ ಹುಟ್ಟಿದರು,.. ಹೀಗೆ!
) ಪ್ರಶ್ನೆಗಳನ್ನು ರೀಡ್ ಮಾಡಲು ಕಲಿಯುವುದು ಅತೀ ಅಗತ್ಯ. ಅದಕ್ಕೆ ತುಂಬಾ ತಾಳ್ಮೆ ಮತ್ತು ಅವಲೋಕನ ಸಾಮರ್ಥ್ಯ ಬೇಕು. ಆ ಪ್ರಶ್ನೆಯು ನಮ್ಮಿಂದ ಏನು ಉತ್ತರ ನಿರೀಕ್ಷೆ ಮಾಡುತ್ತದೆ ಎಂದು ನಮಗೆ ಅರಿವಾದರೆ ನೀವು ಉತ್ತರ ಬರೆಯಲು ಖಂಡಿತ ಆರಂಭ ಮಾಡಬಹುದು.
8) ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಟು ದ ಪಾಯಿಂಟ್( ಬುಲೆಟ್ ಉತ್ತರಗಳು) ಉತ್ತರ ಬರೆಯುವುದನ್ನು ಕಲಿಯಬೇಕು. ಒಂದಾನೊಂದು ಕಾಲದಲ್ಲಿ ಎಂದು ಇಷ್ಟುದ್ದ ಕತೆ ಬರೆಯುವ ಅಗತ್ಯ ಇಲ್ಲ. ಸಮಾಜ ವಿಜ್ಞಾನದಲ್ಲಿ ಒಂದು ಅಂಕದ ಪ್ರಶ್ನೆಗೆ ಎರಡು ಪಾಯಿಂಟ್, ಎರಡು ಅಂಕಗಳ ಪ್ರಶ್ನೆಗೆ ನಾಲ್ಕು ಪಾಯಿಂಟ್, ಮೂರು ಅಂಕಗಳ ಪ್ರಶ್ನೆಗೆ ಆರು ಪಾಯಿಂಟ್, ನಾಲ್ಕು ಅಂಕದ ಪ್ರಶ್ನೆಗೆ ಎಂಟು ಅಂಕ.. ಹೀಗೆ ಬರೆಯಬೇಕು. ಅದೇ ರೀತಿ ವಿಜ್ಞಾನದಲ್ಲಿ ಒಂದು ಅಂಕದ ಪ್ರಶ್ನೆಗೆ ಒಂದೇ ಪಾಯಿಂಟ್, ಎರಡು ಅಂಕಗಳ ಪ್ರಶ್ನೆಗೆ ಎರಡೇ ಪಾಯಿಂಟ್, ಮೂರು ಅಂಕಗಳ ಪ್ರಶ್ನೆಗೆ ಮೂರೇ ಪಾಯಿಂಟ್, ನಾಲ್ಕು ಅಂಕಗಳ ಪ್ರಶ್ನೆಗೆ ನಾಲ್ಕು ಪಾಯಿಂಟ್.. ಹೀಗೆ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿ.
9) ಭಾಷೆಗಳಲ್ಲಿ ಪ್ರಬಂಧಗಳನ್ನು ಬರೆಯುವಾಗ ಚಂದದ ಶೀರ್ಷಿಕೆ ಕೊಟ್ಟು ಆರಂಭ ಮಾಡಿ. ಸಣ್ಣ ಸಣ್ಣ ಪ್ಯಾರಾಗ್ರಾಫ್ ಮಾಡಿ ಬರೆಯಿರಿ. ಮುಖ್ಯಾಂಶಗಳನ್ನು ಅಡಿಗೆರೆ ಹಾಕುವುದನ್ನು ಅಭ್ಯಾಸ ಮಾಡಿ. ಯಾವುದೋ ಪ್ರಬಂಧವನ್ನು ಬಾಯಿಪಾಠ ಮಾಡಿ ಬರೆಯುವುದಕ್ಕಿಂತ ನಿಮ್ಮದೇ ಶೈಲಿಯನ್ನು ಡೆವಲಪ್ ಮಾಡಿದರೆ ತುಂಬಾ ಒಳ್ಳೆದು.
10) ಈಗ ಗಟ್ಟಿಯಾಗಿ ಓದುವುದಕ್ಕಿಂತ ( Loud Reading) ಮೌನವಾಗಿ ಓದುವುದು
(Silent Reading) ಹೆಚ್ಚು ಲಾಭದಾಯಕ. ಇದು ನಿಮ್ಮ ಮನಸಿನಲಿ ಇರಲಿ.
11) ನಿಮ್ಮ ಮೆಮೊರಿಯ ಬಗ್ಗೆ ಅಪನಂಬಿಕೆ ಬೇಡ. ಒಬ್ಬ ಸಾಮಾನ್ಯ ವಿದ್ಯಾರ್ಥಿ ಕೂಡ ಅತೀ ಹೆಚ್ಚು ಅಂಕ ಪಡೆಯವ ಮೆಮೊರಿ ಪವರ್ ಹೊಂದಿರುತ್ತಾನೆ. ಮೆಮೊರಿ ಹೆಚ್ಚು ಉಪಯೋಗ ಮಾಡಿದಷ್ಟು ನಿಮ್ಮ ಮೆಮೊರಿ ಹೆಚ್ಚು ಹರಿತ ಆಗುತ್ತದೆ. ಆತಂಕ ಮಾಡಿದರೆ ಮೆಮೊರಿ ಕೈ ಕೊಡುತ್ತದೆ.
12) ನಿಮ್ಮ ಮೆಮೊರಿ ಪವರ್ ಹೆಚ್ಚು ಮಾಡಲು ಯಾವುದೇ ಔಷಧ ಬೇಕಾಗಿಲ್ಲ. ನೀವು ಒತ್ತಡ ಇಲ್ಲದೆ ಕೂಲ್ ಇದ್ದಷ್ಟು ನಿಮ್ಮ ಮೆಮೊರಿ ಹೆಚ್ಚು ವರ್ಕ್ ಆಗುತ್ತದೆ.
13) ಬಹು ಆಯ್ಕೆಯ ಪ್ರಶ್ನೆಗಳನ್ನು( MCQ) ಉತ್ತರಿಸಲು ತುಂಬಾ ತಾಳ್ಮೆ ಮತ್ತು ಅವಲೋಕನ ಸಾಮರ್ಥ್ಯ ಬೇಕು. ಪರೀಕ್ಷೆಯ ನಿಯಮ ಅಂದರೆ ಒಮ್ಮೆ MCQ ಪ್ರಶ್ನೆಗಳಿಗೆ ಉತ್ತರ ಬರೆದಾದ ನಂತರ ಅದನ್ನು ತಿದ್ದಿ ಬರೆಯಲು ಅವಕಾಶ ಇಲ್ಲ. ಆದ್ದರಿಂದ ಎಲ್ಲ ವಿಷಯಗಳಲ್ಲಿ MCQ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಆರಂಭದಲ್ಲಿ ಮಾಡದೆ ಕೊನೆಗೆ ಮಾಡುವುದು ಒಳ್ಳೆಯದು.
14) ವಿಜ್ಞಾನದಲ್ಲಿ ರಾಸಾಯನಿಕ ಸಮೀಕರಣ ಬರೆಯುವುದನ್ನು ಹೆಚ್ಚು ಅಭ್ಯಾಸ ಮಾಡಬೇಕು. ಲೋಹಗಳು ಪಾಠದಲ್ಲಿ ಮತ್ತು ಮೊದಲ ಪಾಠದಲ್ಲಿ ಹೆಚ್ಚು ಕೆಮಿಕಲ್ ರಿಯಾಕ್ಷನ್ ಪರೀಕ್ಷೆಗೆ ಬರುತ್ತವೆ. ಸಮೀಕರಣ ಬರೆಯುವಾಗ ಸಮೀಕರಣ ಸಮತೂಗಿಸಿ ಬರೆಯುವುದು ಅತೀ ಅಗತ್ಯ.
15) ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದಲ್ಲಿ ಹೈಡ್ರೋ ಕಾರ್ಬನಗಳ ಅಣುಸೂತ್ರ ಮತ್ತು ರಚನಾ ಸೂತ್ರಗಳನ್ನು ಅಭ್ಯಾಸ ಮಾಡಿ. ಮೀಥೇನ್, ಈಥೆನ್, ಪ್ರೋಪೆನ್, ಈಥೀನ್, ಈಥೈನ್, ಬೆಂಜಿನ್, ಸೈಕ್ಲೋಹೆಕ್ಸೆನ್ ಇವುಗಳು ಪರೀಕ್ಷೆಗೆ ಹೆಚ್ಚು ರಿಪೀಟ್ ಆದವುಗಳು.
16) ಪ್ರತಿಯೊಬ್ಬರಿಗೂ ಒಂದು ಮೆದುಳಿನ ವೇಗ ಅಂತ ಒಂದಿದೆ. ಅದೇ ವೇಗದಲ್ಲಿ ಬರೆಯುವುದು ಒಳ್ಳೆಯದು.
17) ಮೆಮೊರಿಯಲ್ಲಿ ಆಡಿಯೊ ಮೆಮೊರಿ ತುಂಬಾ ಸ್ಟ್ರಾಂಗ್. ನೀವು ಒಂದು ಪಾಠವನ್ನು ಓದುವುದಕ್ಕಿಂತ ಬೇರೆಯವರ ಕೈಯ್ಯಲ್ಲಿ ಪುಸ್ತಕವನ್ನು ಕೊಟ್ಟು ಓದಿಸುವುದು ತುಂಬಾ ಒಳ್ಳೆಯದು. ಆಗ ನೀವು ಎದುರು ಕೂತು ಕೇಳುತ್ತಾ ಹೋದರೆ ಅದು ನಿಮ್ಮ ಪರ್ಮನೆಂಟ್ ಮೆಮೋರಿಯ ಭಾಗವಾಗುತ್ತದೆ.
18) ಪರೀಕ್ಷೆಯಲ್ಲಿ ನೀವು ಸುಲಭದ ಪ್ರಶ್ನೆಗಳನ್ನು ಮೊದಲು ಮಾಡಿ, ಕಷ್ಟವಾದ ಪ್ರಶ್ನೆಗಳನ್ನು ನಂತರ ಮಾಡುವ ಅವಕಾಶ ಇದೆ. ಯಾವ ಪ್ರಶ್ನೆಗಳು ನಿಮಗೆ ಚೆನ್ನಾಗಿ ಗೊತ್ತಿವೆ ಅಲ್ಲಿಂದ ನೀವು ಆರಂಭ ಮಾಡಬಹುದು. ಗಣಿತದಲ್ಲಿ ಪ್ರಮೇಯಗಳು, ರಚನೆಗಳು, ಓಜೀವ್, ಗ್ರಾಫ್ ಪ್ರಶ್ನೆಗಳನ್ನು ಮೊದಲ ಸುತ್ತಿನಲ್ಲಿ ಮಾಡಬಹುದು. ವಿಜ್ಞಾನದಲ್ಲಿ ಚಿತ್ರಗಳನ್ನು ಮೊದಲು ಮಾಡಬಹುದು. ಸಮಾಜ ವಿಜ್ಞಾನದಲ್ಲಿ ಭಾರತದ ಭೂಪಟದೊಂದಿಗೆ ಆರಂಭ ಮಾಡಬಹುದು.
19) ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಆರಂಭ ಆದ ಕೂಡಲೇ ಮೊದಲ 15 ನಿಮಿಷ ನಿಮಗೆ ಪ್ರಶ್ನೆಪತ್ರಿಕೆ ಓದಲು ಎಸೆಸೆಲ್ಸಿ ಬೋರ್ಡ್ ಅವಕಾಶ ನೀಡಿದೆ. ಮೌನವಾಗಿ ಪ್ರಶ್ನೆ ಪತ್ರಿಕೆಯನ್ನು 15 ನಿಮಿಷ ಓದುವುದರಿಂದ ನಿಮ್ಮ ಆತ್ಮವಿಶ್ವಾಸ ಖಂಡಿತವಾಗಿ ಹೆಚ್ಚುತ್ತದೆ.
20) ಪರೀಕ್ಷೆಗೆ ಓದುವಾಗ ಈ ಪ್ರಶ್ನೆ ಪರೀಕ್ಷೆಗೆ ಬರುತ್ತದೆ, ಇದು ಪರೀಕ್ಷೆಗೆ ಬರುವುದಿಲ್ಲ ಎಂದು ಮಿಸ್ ಗೈಡ್ ಆಗಬೇಡಿ. ಯಾವ ಪ್ರಶ್ನೆ ಕೂಡ ಪರೀಕ್ಷೆಗೆ ಬರಬಹುದು ಎಂಬ ಮೈಂಡ್ ಸೆಟ್ ನಿಮ್ಮನ್ನು ಗೆಲ್ಲಿಸುತ್ತದೆ.
No comments:
Post a Comment