✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Sunday 26 March 2023

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್‌ಫುಲ್‌ ಟಿಪ್ಸ್‌

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್‌ಫುಲ್‌ ಟಿಪ್ಸ್‌

1) ಸುಂದರವಾದ ಕೈಬರಹ ನಿಮಗೆ ಅತಿ ಹೆಚ್ಚು ಅಂಕಗಳನ್ನು ತಂದುಕೊಡುತ್ತದೆ.

ಇನ್ನು ಕಾಪಿ ಬರೆದು ಅಕ್ಷರ ಚಂದ ಮಾಡಲು ನಿಮಗೆ ಸಮಯ ಇಲ್ಲ. ಆದರೆ ದಿನಕ್ಕೊಂದು ಅರ್ಧ ಗಂಟೆ ಸಮಯ ತೆಗೆದುಕೊಂಡು ಖಾಲಿ ಪೇಪರಿನಲ್ಲಿ ಐದಾರು ಪುಟ ಸುಂದರವಾಗಿ ಬರೆಯುವುದರಿಂದ ನಿಮ್ಮ ಪ್ರೆಸೆಂಟೇಷನ್ ಹೆಚ್ಚು ಮೌಲ್ಯ ಪಡೆಯುತ್ತದೆ. ಅದಕ್ಕೂ ಹೆಚ್ಚು ಏಕಾಗ್ರತೆ ಬೇಕು.

2) ಮೂರೂ ಭಾಷೆಗಳಲ್ಲಿ ಪತ್ರ ಲೇಖನಕ್ಕೆ ತಲಾ ಐದು ಅಂಕಗಳು ಇವೆ. ಅಫಿಶಿಯಲ್ ಪತ್ರ ಮತ್ತು ಇನ್ಫಾರ್ಮಲ್ ಪತ್ರಗಳ ನಡುವೆ ಆಯ್ಕೆ ಇದ್ದಾಗ ಖಂಡಿತವಾಗಿ ಅಫಿಷಿಯಲ್ ಪತ್ರವನ್ನು ಆಯ್ಕೆ ಮಾಡಿಕೊಳ್ಳಿ. ಅದು ನಿಮಗೆ ಹೆಚ್ಚಿನ ಅಂಕ ತಂದುಕೊಡುತ್ತದೆ.

3) ಡಿಸ್ಟಿಂಕ್ಷನ್ ಮಾರ್ಕ್ ಪಡೆಯಲು ಬಯಸುವವರು ಪ್ರತೀ ವಿಷಯವನ್ನು ಸಮಾನ ಪ್ರಾಶಸ್ತ್ಯ ಕೊಟ್ಟು ಓದಬೇಕು. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕಿಂತ ಭಾಷೆಗಳಲ್ಲಿ ಸ್ಕೋರ್ ಮಾಡುವುದು ಸುಲಭ. ಅದರಲ್ಲಿಯೂ ತೃತೀಯ ಭಾಷೆಯನ್ನು ನಿರ್ಲಕ್ಷ್ಯ ಮಾಡಬೇಡಿ.

4) ಸಮಾಜ ವಿಜ್ಞಾನದಲ್ಲಿ ಅಪ್ಲಿಕೇಶನ್ ಪ್ರಶ್ನೆ ಬರುವ ಸಾಧ್ಯತೆ ಕಡಿಮೆ. ಇನ್ನೊಂದು ಲಾಭ ಎಂದರೆ ಎಂಬತ್ತು ಅಂಕಗಳ ಪ್ರಶ್ನೆ ಪತ್ರಿಕೆಯಲ್ಲಿ 60 ಅಂಕಗಳ ಪ್ರಶ್ನೆಗಳು ಹೆಚ್ಚು ಕಡಿಮೆ ರಿಪೀಟ್ ಆಗುತ್ತವೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದಾಗ ನಿಮಗೆ ರಿಪೀಟ್ ಆಗುವ ಪ್ರಶ್ನೆಗಳು ದೊರೆಯುತ್ತವೆ. ಉದಾಹರಣೆಗೆ ನೇತಾಜಿ ಸುಭಾಸ್ ಚಂದ್ರ ಬೋಸರ ಕೊಡುಗೆಗಳು, ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿಯವರ ಕೊಡುಗೆಗಳು, ಮೊದಲ ಸ್ವಾತಂತ್ರ್ಯ ಸಂಗ್ರಾಮ ಯಾಕೆ ವಿಫಲವಾಯಿತು? ಭಾರತ ಪಾಕ್ ಸಂಬಂಧ, ಭಾರತದ ಕೃಷಿ ರಂಗದ ಸಮಸ್ಯೆಗಳು, ಬ್ಯಾಂಕುಗಳ ಮಹತ್ವ...ಇವೆಲ್ಲವೂ ಅತೀ ಹೆಚ್ಚು ಬಾರಿ ರಿಪೀಟ್ ಆಗುವ ಪ್ರಶ್ನೆಗಳು. ಅವುಗಳ ಬಗ್ಗೆ ಹೆಚ್ಚು ಗಮನ ಕೊಡಿ.

5) ಗಣಿತದಲ್ಲಿ ಸೂತ್ರಗಳು ತುಂಬಾ ಮುಖ್ಯ. ಸೂತ್ರಗಳನ್ನು ಕಲಿಯುವುದು ಖಂಡಿತ ಕಷ್ಟ ಅಲ್ಲ. ಎಲ್ಲ ಸೂತ್ರಗಳನ್ನು 40 ಪುಟಗಳ ಒಂದೇ ಪುಸ್ತಕದಲ್ಲಿ ಪಾಠಗಳ ಅನುಕ್ರಮಣಿಕೆಯಲ್ಲಿ ಬರೆದು ಇಡಬೇಕು. ದಿನಕ್ಕೊಮ್ಮೆ ಅವುಗಳನ್ನು ಜಸ್ಟ್ ಒಮ್ಮೆ ಗ್ಲಾನ್ಸ್ ಮಾಡಿದರೆ ಯಾವ ಸೂತ್ರವೂ ಮರೆತು ಹೋಗುವುದಿಲ್ಲ. ಸೂತ್ರಗಳನ್ನು ಪರಸ್ಪರ ಹೋಲಿಕೆ ಮಾಡಿ ಕಲಿಯುವುದು ಒಳ್ಳೆಯ ವಿಧಾನ. ಉದಾಹರಣೆಗೆ ಸಮಾಂತರ ಶ್ರೇಡಿಯ nನೇ ಪದವನ್ನು ಹುಡುಕುವ ಸೂತ್ರ ಮತ್ತು n ಪದಗಳ ಮೊತ್ತವನ್ನು ಮಾಡುವ ಸೂತ್ರಗಳ ನಡುವೆ ಹೋಲಿಕೆ ಇದೆ. ಹಾಗೆಯೇ ಸಿಲಿಂಡರ್ ಘನಫಲ ಮತ್ತು ಶಂಕುವಿನ ಘನಫಲ ಸೂತ್ರಗಳ ನಡುವೆ ಹೋಲಿಕೆ ಇದೆ. ಆ ಹೋಲಿಕೆಗಳನ್ನು ಗಮನಿಸಿದರೆ ಎಷ್ಟು ಸೂತ್ರವನ್ನು ಬೇಕಾದರೂ ಕಲಿಯಬಹುದು.

6) ಇತಿಹಾಸದಲ್ಲಿ ಇಸವಿಯನ್ನು ಕಲಿಯುವುದು ಖಂಡಿತ ಸುಲಭ. ನಿಮ್ಮ ಇತಿಹಾಸ ಪುಸ್ತಕದ ಎಲ್ಲ ಘಟನೆಗಳನ್ನು ಒಂದೇ ಪುಸ್ತಕದಲ್ಲಿ ಇಸವಿಯೊಂದಿಗೆ ಬರೆದಿಟ್ಟರೆ ತುಂಬಾ ಅನುಕೂಲ. ಹಾಗೆಯೇ ಇಸವಿಗಳ ನಡುವೆ ಇರುವ ಅಂತರವನ್ನು ಗಮನಿಸಿದರೆ ಎಷ್ಟು ಇಸವಿ ಕೂಡ ನೆನಪಿಟ್ಟು ಕೊಳ್ಳಬಹುದು.

ಉದಾಹರಣೆಗೆ 1757 ಪ್ಲಾಸಿ ಕದನ ನಡೆಯಿತು. ಅದಾಗಿ ಸರಿಯಾಗಿ ನೂರು ವರ್ಷಗಳ ನಂತರ ( 1857) ಮೊದಲ ಸ್ವಾತಂತ್ರ್ಯ ಸಂಗ್ರಾಮ ಆಯಿತು. ಅಲ್ಲಿಂದ 12 ವರ್ಷಗಳ ನಂತರ ( 1869) ಗಾಂಧೀಜಿ ಹುಟ್ಟಿದರು,.. ಹೀಗೆ!

) ಪ್ರಶ್ನೆಗಳನ್ನು ರೀಡ್ ಮಾಡಲು ಕಲಿಯುವುದು ಅತೀ ಅಗತ್ಯ. ಅದಕ್ಕೆ ತುಂಬಾ ತಾಳ್ಮೆ ಮತ್ತು ಅವಲೋಕನ ಸಾಮರ್ಥ್ಯ ಬೇಕು. ಪ್ರಶ್ನೆಯು ನಮ್ಮಿಂದ ಏನು ಉತ್ತರ ನಿರೀಕ್ಷೆ ಮಾಡುತ್ತದೆ ಎಂದು ನಮಗೆ ಅರಿವಾದರೆ ನೀವು ಉತ್ತರ ಬರೆಯಲು ಖಂಡಿತ ಆರಂಭ ಮಾಡಬಹುದು.

8) ವಿಜ್ಞಾನ ಮತ್ತು ಸಮಾಜ ವಿಜ್ಞಾನದಲ್ಲಿ ಟು ದ ಪಾಯಿಂಟ್( ಬುಲೆಟ್ ಉತ್ತರಗಳು) ಉತ್ತರ ಬರೆಯುವುದನ್ನು ಕಲಿಯಬೇಕು. ಒಂದಾನೊಂದು ಕಾಲದಲ್ಲಿ ಎಂದು ಇಷ್ಟುದ್ದ ಕತೆ ಬರೆಯುವ ಅಗತ್ಯ ಇಲ್ಲ. ಸಮಾಜ ವಿಜ್ಞಾನದಲ್ಲಿ ಒಂದು ಅಂಕದ ಪ್ರಶ್ನೆಗೆ ಎರಡು ಪಾಯಿಂಟ್, ಎರಡು ಅಂಕಗಳ ಪ್ರಶ್ನೆಗೆ ನಾಲ್ಕು ಪಾಯಿಂಟ್, ಮೂರು ಅಂಕಗಳ ಪ್ರಶ್ನೆಗೆ ಆರು ಪಾಯಿಂಟ್, ನಾಲ್ಕು ಅಂಕದ ಪ್ರಶ್ನೆಗೆ ಎಂಟು ಅಂಕ.. ಹೀಗೆ ಬರೆಯಬೇಕು. ಅದೇ ರೀತಿ ವಿಜ್ಞಾನದಲ್ಲಿ ಒಂದು ಅಂಕದ ಪ್ರಶ್ನೆಗೆ ಒಂದೇ ಪಾಯಿಂಟ್, ಎರಡು ಅಂಕಗಳ ಪ್ರಶ್ನೆಗೆ ಎರಡೇ ಪಾಯಿಂಟ್, ಮೂರು ಅಂಕಗಳ ಪ್ರಶ್ನೆಗೆ ಮೂರೇ ಪಾಯಿಂಟ್, ನಾಲ್ಕು ಅಂಕಗಳ ಪ್ರಶ್ನೆಗೆ ನಾಲ್ಕು ಪಾಯಿಂಟ್.. ಹೀಗೆ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿ.

9) ಭಾಷೆಗಳಲ್ಲಿ ಪ್ರಬಂಧಗಳನ್ನು ಬರೆಯುವಾಗ ಚಂದದ ಶೀರ್ಷಿಕೆ ಕೊಟ್ಟು ಆರಂಭ ಮಾಡಿ. ಸಣ್ಣ ಸಣ್ಣ ಪ್ಯಾರಾಗ್ರಾಫ್ ಮಾಡಿ ಬರೆಯಿರಿ. ಮುಖ್ಯಾಂಶಗಳನ್ನು ಅಡಿಗೆರೆ ಹಾಕುವುದನ್ನು ಅಭ್ಯಾಸ ಮಾಡಿ. ಯಾವುದೋ ಪ್ರಬಂಧವನ್ನು ಬಾಯಿಪಾಠ ಮಾಡಿ ಬರೆಯುವುದಕ್ಕಿಂತ ನಿಮ್ಮದೇ ಶೈಲಿಯನ್ನು ಡೆವಲಪ್ ಮಾಡಿದರೆ ತುಂಬಾ ಒಳ್ಳೆದು.

10) ಈಗ ಗಟ್ಟಿಯಾಗಿ ಓದುವುದಕ್ಕಿಂತ ( Loud Reading) ಮೌನವಾಗಿ ಓದುವುದು (Silent Reading) ಹೆಚ್ಚು ಲಾಭದಾಯಕ. ಇದು ನಿಮ್ಮ ಮನಸಿನಲಿ ಇರಲಿ.

11) ನಿಮ್ಮ ಮೆಮೊರಿಯ ಬಗ್ಗೆ ಅಪನಂಬಿಕೆ ಬೇಡ. ಒಬ್ಬ ಸಾಮಾನ್ಯ ವಿದ್ಯಾರ್ಥಿ ಕೂಡ ಅತೀ ಹೆಚ್ಚು ಅಂಕ ಪಡೆಯವ ಮೆಮೊರಿ ಪವರ್ ಹೊಂದಿರುತ್ತಾನೆ. ಮೆಮೊರಿ ಹೆಚ್ಚು ಉಪಯೋಗ ಮಾಡಿದಷ್ಟು ನಿಮ್ಮ ಮೆಮೊರಿ ಹೆಚ್ಚು ಹರಿತ ಆಗುತ್ತದೆ. ಆತಂಕ ಮಾಡಿದರೆ ಮೆಮೊರಿ ಕೈ ಕೊಡುತ್ತದೆ.

12) ನಿಮ್ಮ ಮೆಮೊರಿ ಪವರ್ ಹೆಚ್ಚು ಮಾಡಲು ಯಾವುದೇ ಔಷಧ ಬೇಕಾಗಿಲ್ಲ. ನೀವು ಒತ್ತಡ ಇಲ್ಲದೆ ಕೂಲ್ ಇದ್ದಷ್ಟು ನಿಮ್ಮ ಮೆಮೊರಿ ಹೆಚ್ಚು ವರ್ಕ್ ಆಗುತ್ತದೆ.

13) ಬಹು ಆಯ್ಕೆಯ ಪ್ರಶ್ನೆಗಳನ್ನು( MCQ) ಉತ್ತರಿಸಲು ತುಂಬಾ ತಾಳ್ಮೆ ಮತ್ತು ಅವಲೋಕನ ಸಾಮರ್ಥ್ಯ ಬೇಕು. ಪರೀಕ್ಷೆಯ ನಿಯಮ ಅಂದರೆ ಒಮ್ಮೆ MCQ ಪ್ರಶ್ನೆಗಳಿಗೆ ಉತ್ತರ ಬರೆದಾದ ನಂತರ ಅದನ್ನು ತಿದ್ದಿ ಬರೆಯಲು ಅವಕಾಶ ಇಲ್ಲ. ಆದ್ದರಿಂದ ಎಲ್ಲ ವಿಷಯಗಳಲ್ಲಿ MCQ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಆರಂಭದಲ್ಲಿ ಮಾಡದೆ ಕೊನೆಗೆ ಮಾಡುವುದು ಒಳ್ಳೆಯದು.

14) ವಿಜ್ಞಾನದಲ್ಲಿ ರಾಸಾಯನಿಕ ಸಮೀಕರಣ ಬರೆಯುವುದನ್ನು ಹೆಚ್ಚು ಅಭ್ಯಾಸ ಮಾಡಬೇಕು. ಲೋಹಗಳು ಪಾಠದಲ್ಲಿ ಮತ್ತು ಮೊದಲ ಪಾಠದಲ್ಲಿ ಹೆಚ್ಚು ಕೆಮಿಕಲ್ ರಿಯಾಕ್ಷನ್ ಪರೀಕ್ಷೆಗೆ ಬರುತ್ತವೆ. ಸಮೀಕರಣ ಬರೆಯುವಾಗ ಸಮೀಕರಣ ಸಮತೂಗಿಸಿ ಬರೆಯುವುದು ಅತೀ ಅಗತ್ಯ.

15) ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದಲ್ಲಿ ಹೈಡ್ರೋ ಕಾರ್ಬನಗಳ ಅಣುಸೂತ್ರ ಮತ್ತು ರಚನಾ ಸೂತ್ರಗಳನ್ನು ಅಭ್ಯಾಸ ಮಾಡಿ. ಮೀಥೇನ್, ಈಥೆನ್, ಪ್ರೋಪೆನ್, ಈಥೀನ್, ಈಥೈನ್, ಬೆಂಜಿನ್, ಸೈಕ್ಲೋಹೆಕ್ಸೆನ್ ಇವುಗಳು ಪರೀಕ್ಷೆಗೆ ಹೆಚ್ಚು ರಿಪೀಟ್ ಆದವುಗಳು.

16) ಪ್ರತಿಯೊಬ್ಬರಿಗೂ ಒಂದು ಮೆದುಳಿನ ವೇಗ ಅಂತ ಒಂದಿದೆ. ಅದೇ ವೇಗದಲ್ಲಿ ಬರೆಯುವುದು ಒಳ್ಳೆಯದು.

17) ಮೆಮೊರಿಯಲ್ಲಿ ಆಡಿಯೊ ಮೆಮೊರಿ ತುಂಬಾ ಸ್ಟ್ರಾಂಗ್. ನೀವು ಒಂದು ಪಾಠವನ್ನು ಓದುವುದಕ್ಕಿಂತ ಬೇರೆಯವರ ಕೈಯ್ಯಲ್ಲಿ ಪುಸ್ತಕವನ್ನು ಕೊಟ್ಟು ಓದಿಸುವುದು ತುಂಬಾ ಒಳ್ಳೆಯದು. ಆಗ ನೀವು ಎದುರು ಕೂತು ಕೇಳುತ್ತಾ ಹೋದರೆ ಅದು ನಿಮ್ಮ ಪರ್ಮನೆಂಟ್ ಮೆಮೋರಿಯ ಭಾಗವಾಗುತ್ತದೆ.

18) ಪರೀಕ್ಷೆಯಲ್ಲಿ ನೀವು ಸುಲಭದ ಪ್ರಶ್ನೆಗಳನ್ನು ಮೊದಲು ಮಾಡಿ, ಕಷ್ಟವಾದ ಪ್ರಶ್ನೆಗಳನ್ನು ನಂತರ ಮಾಡುವ ಅವಕಾಶ ಇದೆ. ಯಾವ ಪ್ರಶ್ನೆಗಳು ನಿಮಗೆ ಚೆನ್ನಾಗಿ ಗೊತ್ತಿವೆ ಅಲ್ಲಿಂದ ನೀವು ಆರಂಭ ಮಾಡಬಹುದು. ಗಣಿತದಲ್ಲಿ ಪ್ರಮೇಯಗಳು, ರಚನೆಗಳು, ಓಜೀವ್, ಗ್ರಾಫ್ ಪ್ರಶ್ನೆಗಳನ್ನು ಮೊದಲ ಸುತ್ತಿನಲ್ಲಿ ಮಾಡಬಹುದು. ವಿಜ್ಞಾನದಲ್ಲಿ ಚಿತ್ರಗಳನ್ನು ಮೊದಲು ಮಾಡಬಹುದು. ಸಮಾಜ ವಿಜ್ಞಾನದಲ್ಲಿ ಭಾರತದ ಭೂಪಟದೊಂದಿಗೆ ಆರಂಭ ಮಾಡಬಹುದು.

19) ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಆರಂಭ ಆದ ಕೂಡಲೇ ಮೊದಲ 15 ನಿಮಿಷ ನಿಮಗೆ ಪ್ರಶ್ನೆಪತ್ರಿಕೆ ಓದಲು ಎಸೆಸೆಲ್ಸಿ ಬೋರ್ಡ್ ಅವಕಾಶ ನೀಡಿದೆ. ಮೌನವಾಗಿ ಪ್ರಶ್ನೆ ಪತ್ರಿಕೆಯನ್ನು 15 ನಿಮಿಷ ಓದುವುದರಿಂದ ನಿಮ್ಮ ಆತ್ಮವಿಶ್ವಾಸ ಖಂಡಿತವಾಗಿ ಹೆಚ್ಚುತ್ತದೆ.

20) ಪರೀಕ್ಷೆಗೆ ಓದುವಾಗ ಪ್ರಶ್ನೆ ಪರೀಕ್ಷೆಗೆ ಬರುತ್ತದೆ, ಇದು ಪರೀಕ್ಷೆಗೆ ಬರುವುದಿಲ್ಲ ಎಂದು ಮಿಸ್ ಗೈಡ್ ಆಗಬೇಡಿ. ಯಾವ ಪ್ರಶ್ನೆ ಕೂಡ ಪರೀಕ್ಷೆಗೆ ಬರಬಹುದು ಎಂಬ ಮೈಂಡ್ ಸೆಟ್ ನಿಮ್ಮನ್ನು ಗೆಲ್ಲಿಸುತ್ತದೆ.

Wednesday 8 March 2023

ನೆನಪಿಸಿಕೊಳ್ಳುವ ಹಂತಗಳ ವೈಜ್ಞಾನಿಕ ವಿಶ್ಲೇಷಣೆ......

ನೆನಪಿರಿಸಿಕೊಳ್ಳುವ ಹಂತಗಳು

" ಓದಿದ್ದು ನಿನ್ನೆ ಅಷ್ಟು ಚೆನ್ನಾಗಿ ನೆನಪಿತ್ತು. ಈಗ ನೆನಪಿಗೆ ಬರುತ್ತಿಲ್ಲ" ಎಂದು ಚಿಂತಿತರಾಗುವ ಹಲವು ವಿದ್ಯಾರ್ಥಿಗಳಿರುತ್ತಾರೆ. ಯಾಕೆ ಹೀಗಾಗುತ್ತದೆ ಎನ್ನುವುದು ಗೊತ್ತಾಗಬೇಕಾದರೆ ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು.

ನೆನಪಿರಿಸಿಕೊಳ್ಳುವ ವೈಜ್ಞಾನಿಕ ಪ್ರಕ್ರಿಯೆ:

* ನರವ್ಯೂಹದಲ್ಲಿ ಕೋಟ್ಯಂತರ ನರ ಕೋಶಗಳು ಇರುತ್ತವೆ.
* ನರ ಕೋಶಗಳು ಸಂಪರ್ಕ ತಂತುವಿನಿಂದ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ.
* ಪ್ರತಿಯೊಂದು ವಿಷಯದ ಕುರಿತ ನಮ್ಮ ತಿಳಿವಳಿಕೆ ಒಂದು ಗಣದ ನರಕೋಶಗಳನ್ನು, ರಾಸಾಯನಿಕ ಸ್ರಾವದ ಮೂಲಕ ಉದ್ದೀಪಿಸುತ್ತದೆ.
* ಉದ್ದೀಪನ ಕ್ರಿಯೆಯು ತಾತ್ಕಾಲಿಕ ಮತ್ತು ದೀರ್ಘ ಕಾಲಿಕ ಎಂಬ ಎರಡು ಹಂತಗಳಲ್ಲಿ ನಡೆಯುತ್ತದೆ.
* ತಾತ್ಕಾಲಿಕ ಉದ್ದೀಪನವು ಬೇಗನೆ ಮರೆತು ಹೋಗುತ್ತದೆ. ತಾತ್ಕಾಲಿಕ ಉದ್ದೀಪನಕ್ಕೆ ಒಳಗಾದ ನರಕೋಶಗಳನ್ನು ಮತ್ತೆ ಮತ್ತೆ ಉದ್ದೀಪಿಸಿದಾಗ ದೀರ್ಘ ಕಾಲಿಕವಾಗಿ ನೆನಪಿನಲ್ಲಿ ದಾಖಲಾಗುತ್ತದೆ.
* ಕೆಲವೊಂದು ಪಠ್ಯ ವಿಷಯಗಳ ಕಂಠಪಾಠ, ಪುನರಾವರ್ತನೆ, ವಿಚಾರ ವಿನಿಮಯ, ವಿಚಾರ ಮಂಡನೆ, ಬೋಧನೆ, ಗುಂಪು ಚರ್ಚೆ, ವಿಚಾರ ಸಂಕಿರಣಗಳೆಲ್ಲವೂ ತಾತ್ಕಾಲಿಕ ಉದ್ದೀಪನವನ್ನು ಮತ್ತೆ ಮತ್ತೆ ಉದ್ದೀಪಿಸಿ ದೀರ್ಘಕಾಲಿಕವಾಗಿ ದಾಖಲಿಸುವ ಪ್ರಕ್ರಿಯೆಯಾಗಿದೆ.
* ಹೊಸ ಮಾಹಿತಿಯನ್ನು ಈಗಾಗಲೇ ಸ್ಥಾಪಿತವಾಗಿರುವ ನರಕೋಶಗಳ ಗಣಕ್ಕೆ ಹೋಲಿಕೆ, ಭಿನ್ನತೆಗಳ ಮರು ಅವಲೋಕನದ ಮೂಲಕ ಲಗತ್ತಿಸಿದರೆ ಹೊಸ ಮಾಹಿತಿಯು ಹಳೆಯದನ್ನೆ ಒಳಗೊಂಡು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ.

ಈ ಪ್ರಕ್ರಿಯೆಗಳ ಮೂಲಕ ನೆನಪಿನಲ್ಲಿ ಉಳಿಯಬೇಕಾದರೆ ಕಲಿಕೆಯ ಮೂಲ ಅಗತ್ಯವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಕಲಿಕಾರ್ಥಿ; ಅಂದರೆ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರು ಕಲಿಕೆಯ ಮೂಲ ಅಗತ್ಯಗಳಾಗಿರುತ್ತಾರೆ.  ಇವರೆಲ್ಲರಿಗೂ ಕಲಿಕೆಯಲ್ಲಿ ತಮ್ಮದೇ ಆದ ಪಾತ್ರವಿದೆ.
* ಪೋಷಕರು ಕಲಿಕೆಗೆ ಅಗತ್ಯವಾದ ಸಂಪನ್ಮೂಲ, ಸಂಸ್ಕಾರ ಮತ್ತು ಪ್ರೋತ್ಸಾಹವನ್ನು ನೀಡಬೇಕು.
* ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವವರು ಶಿಕ್ಷಕರು. ಅಂದರೆ ವಿದ್ಯಾರ್ಥಿಯು ಕಲಿಕೆಗೆ ತೊಡಗಿದಾಗ ಉಂಟಾಗುವ ಕಲಿಕಾ ಅಡತಡೆಗಳನ್ನು ಶಿಕ್ಷಕರು ನಿವಾರಿಸಬೇಕು. ಅವರು ವಿದ್ಯಾರ್ಥಿಗೆ ಕಲಿಕೆಗೆ ಅನುಕೂಲ ಮಾಡಿಕೊಡುವುದರೊಂದಿಗೆ ಕಲಿತುಕೊಳ್ಳಲು ವಿದ್ಯಾರ್ಥಿಗೆ ಉತ್ತೇಜನವನ್ನು ನೀಡಬೇಕು. ಅಲ್ಲದೆ, ವಿದ್ಯಾರ್ಥಿಗಳಿಗೆ ಒಂದು ಆದರ್ಶವನ್ನು ಕಲ್ಪಿಸಿಕೊಡಬೇಕು. ಅದು ಕಲಿಕೆಗೆ ಬೇಕಾದ ಆದರ್ಶವೂ ಹೌದು. ಜೀವನದ ಆದರ್ಶವೂ ಹೌದು. ಮತ್ತು ಸ್ವತಃ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಆದರ್ಶವಾಗುವುದೂ ಆಗಿದೆ. 

ಇವರೆಲ್ಲರಲ್ಲಿ ಬಹಳ ಮುಖ್ಯರಾದವರು ವಿದ್ಯಾರ್ಥಿಗಳು. ತಾನು ಕಲಿಯಬೇಕು ಎಂಬ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಇರಬೇಕು. ಅದಿಲ್ಲದೆ ಹೋದರೆ ಪೋಷಕರು ಮತ್ತು ಶಿಕ್ಷಕರು ಅಸಹಾಯಕರಾಗುತ್ತಾರೆ. ವಿದ್ಯಾರ್ಥಿಯು ಕಲಿತುಕೊಳ್ಳಲು ಹೊರಟಾಗ ಪೋಷಕರು ಮತ್ತು ಶಿಕ್ಷಕರು ಏನನ್ನಾದರೂ ಮಾಡಲು ಸಾಧ್ಯವಾಗುವುದು. ವಿದ್ಯಾರ್ಥಿಗಳು ತಮ್ಮನ್ನು ತಾವು ಸನ್ನದ್ಧಗೊಳಿಸಿಕೊಂಡ ನಂತರ ಕ್ರಮಿಸಬೇಕಾದ ಕಲಿಕಾ ಹಂತಗಳು ಹೀಗಿವೆ:

ಶ್ರವಣ: ಅಂದರೆ ಕೇಳಿಸಿಕೊಳ್ಳುವುದು.‌ ಕೇಳಿಸಿಕೊಳ್ಳುವುದು ತರಗತಿ ಕಲಿಕೆಯ ಪ್ರಾಥಮಿಕ ಹಂತವಾಗಿದೆ. ಕೇಳಿಸಿಕೊಳ್ಳಲಿಕ್ಕೇ ತಯಾರಿಲ್ಲದವರು ಮುಂದಿನ ಹಂತಕ್ಕೆ ಹೋಗುವುದು ಬಹಳ ಕಷ್ಟ. ಆದ್ದರಿಂದ ಪಾಠಗಳನ್ನು ಕೇಳಿಸಿಕೊಳ್ಳಬೇಕು.

ಪಠನ: ಅಂದರೆ ಓದುವುದು. ವ್ಯವಸ್ಥಿತ ಕಲಿಕೆಗಾದಾಗ ಕಥೆ, ಕಾದಂಬರಿಗಳನ್ನು ಓದುವ ಹಾಗೆ ಓದುವುದಲ್ಲ. ಪಠ್ಯದ ವಿಚಾರ, ಭಾವ, ಪರಿಕಲ್ಪನೆ, ಕ್ಲಿಷ್ಟ ವಿಷಯಗಳನ್ನು ಅರ್ಥ ಮಾಡಿಕೊಂಡು‌‌ ಓದಬೇಕು.

ಮನನ: ಅರ್ಥ ಮಾಡಿಕೊಂಡದ್ದನ್ನು‌ ಮನಸ್ಸಿಗೆ ಖಚಿತಪಡಿಸಿಕೊಳ್ಳುವುದು. ಈ ಹಂತದಲ್ಲಿ ಹೊರಗಿನಿಂದ ಬಂದ ವಿಷಯಗಳು ವಿದ್ಯಾರ್ಥಿಯದ್ದೇ ಆಗಿ " ಇದು ಹೀಗೀಗೆ" ಎಂಬ ಸ್ಪಷ್ಟ ರೂಪವನ್ನು ಧರಿಸಿ ವಿದ್ಯಾರ್ಥಿಯಲ್ಲಿ ಸೇರಿಕೊಳ್ಳಬೇಕು.

ನಿದಿಧ್ಯಾಸನ: ಮನಸ್ಸಿಗೆ ಖಚಿತವಾದದ್ದನ್ನು ಜಿಜ್ಞಾಸೆ ನಡೆಸಬೇಕು. " ಇದು ಹೀಗಲ್ಲದಿದ್ದರೆ ಬೇರೆ ಹೇಗೆ ಸಾಧ್ಯ?" ಎಂಬಂತಹ ಬಹುಮುಖಿ ಪ್ರಶ್ನೆಗಳನ್ನಿರಿಸಿಕೊಂಡು ತಾರ್ಕಿಕವಾಗಿ ವಿಚಾರ ಮಂಥನ ನಡೆಸಬೇಕು.

ಪುನರಾವರ್ತನೆ: ಜಿಜ್ಞಾಸೆಯ ನಂತರ ವಿದ್ಯಾರ್ಥಿಯಲ್ಲಿ ಆಂತರಿಕವಾಗಿ ದೃಢೀಕರಣವಾದದ್ದನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಅಥವಾ ಗುಂಪಾಗಿ ಚರ್ಚೆ ನಡೆಸಿ ಅಥವಾ ಪ್ರಶ್ನೋತ್ತರಗಳನ್ನು ನಡೆಸುವ ಮೂಲಕ ಅಧ್ಯಯನ ನಡೆಸಿ ದೃಢೀಕರಿಸಿಕೊಳ್ಳಬೇಕು.

ಪುನರ್ಪ್ರತಿಷ್ಠಾಪನೆ: ಸ್ಪಷ್ಟವಾದದ್ದನ್ನು ಸರಳ ಟಿಪ್ಪಣಿಯಾಗಿ ಒಂದೆರಡು ಅಂಶಗಳಲ್ಲಿ ಬರೆದಿಡಬೇಕು. ಅಥವಾ ಮಾನಸಿಕ ಕ್ರಿಯೆಯಾಗಿ ಮನದೊಳಗೇ ಪಠ್ಯ ವಿಷಯಗಳನ್ನು ವಿದ್ಯಾರ್ಥಿಗಳದ್ದೇ ಆದ ಮಾತುಗಳಲ್ಲಿ ದೃಢಪಡಿಸಿರಿಸಿಕೊಳ್ಳಬೇಕು.

ನೆನಪಿರಿಸಿಕೊಳ್ಳಲು ಅಥವಾ ನೆನಪು ಶಕ್ತಿಯನ್ನು ಹೆಚ್ಚಿಸಲು ಯಾವ ಔಷಧಿಗಳೂ ಇಲ್ಲ. ಆದರೆ ಕಲಿಕೆಯನ್ನು ಸಮರ್ಪಕವಾಗಿ ನಡೆಸುವ ಮೂಲಕ, ಪರಿಣಾಮಕಾರಿಯಾದ ವಿಧಾನಗಳಿಂದ ಅಧ್ಯಯನ ನಡೆಸುವ ಮೂಲಕ ಕಲಿತದ್ದು ನೆನಪಿನಲ್ಲಿ ಉಳಿಯುವಂತೆ ಮಾಡಬಹುದು.‌ ಮೇಲೆ ಹೇಳಿದ ವಿಧಾನಗಳನ್ನು ಅಳವಡಿಸಿಕೊಳ್ಳುವ ದೃಢ ನಿರ್ಧಾರ ವಿದ್ಯಾರ್ಥಿಗಳಲ್ಲಿದ್ದರೆ ನೆನಪಿರಿಸಿಕೊಳ್ಳುವುದು ಕಷ್ಟವಾಗುವುದಿಲ್ಲ.

1.ಕಲಿಕೆಗೆ ಪೂರಕ ವಾತಾವರಣ ಮಕ್ಕಳಿಗೆ ಮನೆಯಲ್ಲಿ ದೊರೆಯಬೇಕು. ತಂದೆ- ತಾಯಿ ಸಂತೋಷವಾಗಿರುವುದು ಮಕ್ಕಳ ಕಲಿಕೆಗೆ ಉತ್ತೇಜನ ನೀಡುತ್ತದೆ.
2. ಮಕ್ಕಳ ಕಲಿಕೆಯ ಮೇಲ್ವಿಚಾರಣೆ ಇರಬೇಕು.‌ಆದರೆ ಅದು ಮಕ್ಕಳಲ್ಲಿ ಒತ್ತಡ ಸೃಷ್ಟಿಸಬಾರದು. ಉದಾಹರಣೆಗೆ,ಪಾಠದ ಯಾವುದಾದರೊಂದು ವಿಷಯವನ್ನು ಮಕ್ಕಳೊಂದಿಗೆ ಪ್ರಸ್ತಾಪಿಸಿ. ನಂತರ ಅವರು ಅದನ್ನು ವಿಸ್ತರಿಸಬೇಕು. ನಡುನಡುವೆ ಕಷ್ಟವಾದಾಗ ನೆನಪಿಸುವುದನ್ನಷ್ಟೆ ಹಿರಿಯರು ಮಾಡಬೇಕು.
3.ಮಕ್ಕಳನ್ನು ಚಟುವಟಿಕೆಯಲ್ಲಿರಿಸಬೇಕು.‌ದೈಹಿಕವೂ ಆಗಬಹುದು.‌ಮಾನಸಿಕವೂ ಇರಬಹುದು. ಒಟ್ಟಾರೆ ಚಟುವಟಿಕೆಯಲ್ಲಿರಬೇಕು.‌ 4.ಚಟುವಟಿಕೆಯ ಜೊತೆಗೆ ವಿಶ್ರಾಂತಿಯ ಅಗತ್ಯವೂ ಮಕ್ಕಳಿಗಿದೆ. ಅಲ್ಲದೆ ಕ್ರೀಡೆ, ವ್ಯಾಯಾಮದಂತಹ ದೈಹಿಕ ಚಟುವಟಿಕೆ ಮಕ್ಕಳ ಕಲಿಕೆಗೂ ಸಹಾಯಕವಾಗಿ ಬರುತ್ತದೆ. 
5. ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ಕಾಲಕಾಲಕ್ಕೆ ಒದಗಿಸಬೇಕು.
 6. ಮಕ್ಕಳಲ್ಲಿ ಒಂದು ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಂಡು ಯೋಚಿಸುವ ಪ್ರವೃತ್ತಿಯನ್ನು ಬೆಳೆತಿಸಬೇಕು.
7.ಮಕ್ಕಳಿಗೆ ಭಾವನಾತ್ಮಕ ಬೆಂಬಲ ನೀಡಿ ಹತಾಶೆಗೆ ಹೋಗದಂತೆ ನೋಡಿಕೊಳ್ಳಬೇಕು.
8. ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ಬೆಳೆಯಿಸಬೇಕು. 
9. ಮಕ್ಕಳ ತರಗತಿ, ಸ್ನೇಹಿತರು, ಭವಿಷ್ಯ ಮುಂತಾದವುಗಳ ಬಗ್ಗೆ ಚರ್ಚಿಸಬೇಕು.

ಕಲಿಕಾ ಅಡೆತಡೆಯ ಪರಿಕಲ್ಪನೆ: ಮಕ್ಕಳು ಕಲಿಕೆಗೆ ತೊಡಗಿಕೊಳ್ಳುತ್ತಾರೆ ಎನ್ನುವುದು ತತ್ವ. ಹೀಗೆ ತೊಡಗಿಕೊಂಡಾಗ ಅವರಿಗೆ ಭಾಷೆಯ ಅಡಚಣೆಯಾಗುತ್ತದೆ. ಆಗ ಭಾಷಾ ಪ್ರಯೋಗವನ್ನು ತಿಳಿಸಿ ಆ ಅಡಚಣೆಯನ್ನು ಶಿಕ್ಷಕರು ನಿವಾರಿಸಬೇಕು. ಓದಿಕೊಳ್ಳುವಾಗ ಕ್ಲಿಷ್ಟ ಪರಿಕಲ್ಪನೆಗಳು ಕಲಿಕಾ ಅಡಚಣೆಯಾಗಬಹುದು. ಆಗ ಕ್ಲಿಷ್ಟ ಪರಿಕಲ್ಪನೆಗಳನ್ನು ಉದಾಹರಣೆಯ ಮೂಲಕ ಸರಳೀಕರಿಸಿಕೊಟ್ಟು ಮಕ್ಕಳ ಕಲಿಕೆಯ ಸುಗಮಕಾರರಾಗಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ಭಾವದ ಅಭಿವ್ಯಕ್ತಿ ಗೊತ್ತಾಗದಿರಬಹುದು. ಆಗ ಯಾವಾಗ ಯಾವ ಭಾವವನ್ನು ಹೇಗೆ ಅಭಿವ್ಯಕ್ತಿಪಡಿಸಬೇಕು ಎಂದು ಶಿಕ್ಷಕರು ತಿಳಿಸಿಕೊಡಬೇಕು. ಪ್ರಬಂಧ ಬರೆಯಲು ಮಕ್ಕಳಿಗೆ ಗೊತ್ತಾಗದಿರಬಹುದು. ಆಗ ಪ್ರಬಂಧ ಬರೆಯುವ ವಿಧಾನವನ್ನು ಶಿಕ್ಷಕರು ತಿಳಿಸಿಕೊಡಬೇಕು. ಹೀಗೆ ಕಲಿಕಾ ಅಡಚಣೆಯ ನಿವಾರಣೆಯು ವ್ಯಾಪಕ ಆಯಾಮಗಳನ್ನು ಹೊಂದಿದೆ.

ಎಸ್ ಎಸ್ ಎಲ್ ಸಿ ಮಕ್ಕಳು ನೆನಪಿರಿಸಿಕೊಳ್ಳಬಹುದಾದ ತಂತ್ರಗಳು:

1. ವಿಷಯಗಳ ಕೋಡ್ ವರ್ಡ್ ರಚನೆ ಮಾಡಿ ಅದನ್ನು ಡಿಕೋಡ್ ಮಾಡುವ ಸಮರ್ಪಕ ವಿಧಾನವನ್ನು ಬಳಸುವುದು. 
2. ಪಠ್ಯ ವಿಷಯಗಳನ್ನು ಪ್ರಶ್ನೋತ್ತರಗಳ ಸರಣಿಯ ರೀತಿಯಲ್ಲಿ ನೆನಪಿರಿಸಿಕೊಳ್ಳುವುದಯ.
3. ಓದಿದ ವಿಷಯಗಳನ್ನು ಟಿಪ್ಪಣಿಗಳಾಗಿ ಮಾಡಿ ನೆನಪಿರಿಸಿಕೊಳ್ಳುವುದು.4. ದೊಡ್ಡ ಪ್ರಶ್ನೆಗಳ ಹಲವು ಉಪಶೀರ್ಷಿಕೆಗಳ ಉತ್ತರಗಳನ್ನು ಅಭ್ಯಾಸ ಮಾಡಿ ಉಪಶೀರ್ಷಿಕೆಗಳ ಸರಣಿ ರಚಿಸುವುದು.
 5. ಮಕ್ಕಳೇ ಪ್ರಶ್ನೆಗಳನ್ನು ರಚಿಸುವುದು.‌ ಪ್ರಶ್ನೆ ತೆಗೆದಾಗ ಉತ್ತರ ಕೊಡುವ ಕೌಶಲ ತಾನಾಗಿಯೇ ಬರುತ್ತದೆ.
 6. ಉತ್ತರಗಳಿಗೆ ಬಹುಮುಖಿ ಉತ್ತರಗಳ ಪ್ರಶ್ನೆಗಳನ್ನು ಸೃಷ್ಟಿಸಿಕೊಂಡು ಚಿಂತನೆಯನ್ನು ನಡೆಸುವುದು. 
7. ಪಾಠದಲ್ಲಿ ಕಲಿತದ್ದನ್ನು ನಿತ್ಯ ಬದುಕಿಗೆ ಅನ್ವಯಿಸಿಕೊಂಡು ಅರ್ಥ ಮಾಡಿಕೊಳ್ಳುವುದು.
 8.ಪಠ್ಯ ವಸ್ತುವಿನ ಮೇಲೆ ಗುಂಪು ಚರ್ಚೆಗಳನ್ನು ನಡೆಸುವುದು.

Tuesday 7 March 2023

ಪ್ರಾಣಾಯಾಮ ಅಭ್ಯಾಸಿಗಳು ಗಮನಿಸಬೇಕಾದ ಕೆಲವು ಮುಖ್ಯ ಸಂಗತಿಗಳು

*ಹೇಗೆ, ಎಲ್ಲಿ ಪ್ರಾಣಾಯಾಮ ಮಾಡಬೇಕು?: ಪ್ರಾಣಾಯಾಮ ಅಭ್ಯಾಸಿಗಳು ಗಮನಿಸಬೇಕಾದ ಕೆಲವು ಮುಖ್ಯ ಸಂಗತಿಗಳು ಇಲ್ಲಿವೆ !!!!*
 
ಪ್ರಾಣಾಯಾಮ ಅಭ್ಯಾಸಿಗಳು ಗಮನಿಸಬೇಕಾದ ಕೆಲವು ಮುಖ್ಯ ಸಂಗತಿಗಳಿವೆ.

# ನಮ್ಮ ದೇಹಪ್ರಕೃತಿಗೆ ಒಗ್ಗುವಂತಹ ಯೋಗಾಸನಗಳನ್ನು ಅಭ್ಯಾಸ ಮಾಡಿದ ಬಳಿಕವೇ ಪ್ರಾಣಾಯಾಮದ ಅಭ್ಯಾಸಕ್ಕೆ ಅರ್ಹತೆ ಲಭಿಸುತ್ತದೆ.

# ಕೆಲವೊಂದು ಪ್ರಾಣಾಯಾಮ ಪ್ರಭೇದಗಳ ಹೊರತು (ಉದಾ: ಶೀತಲೀ) ಬಹುತೇಕ ಎಲ್ಲ ಪ್ರಾಣಾಯಾಮಗಳಲ್ಲೂ ಮೂಗಿನ ಮೂಲಕವೇ ಉಸಿರಾಟ.

# ಪ್ರಾಣಾಯಾಮ ಮಾಡುವಾಗ ಕಣ್ಣುಗಳನ್ನು ಮುಚ್ಚಿಕೊಂಡರೆ ಒಳ್ಳೆಯದು. ಒಳಗಣ್ಣಿನಿಂದ ಉಸಿರಿನ ಆಗಮನ, ನಿರ್ಗಮನಗಳನ್ನು ಗಮನಿಸಲು ಇದರಿಂದ ಸುಲಭಸಾಧ್ಯ.

# ಪ್ರಾಣಾಯಾಮ ಅಭ್ಯಾಸಿ ಆಹಾರದ ಬಗ್ಗೆ ಎಚ್ಚರ ವಹಿಸಲೇಬೇಕು. ಸಾತ್ತಿ್ವಕ ಆಹಾರಕ್ಕೆ ಪ್ರಥಮ ಆದ್ಯತೆ ನೀಡಬೇಕು.

# ಪ್ರಾಣಾಯಾಮಕ್ಕಾಗಿ ಆಯ್ದುಕೊಳ್ಳುವ ಸ್ಥಳ ಪ್ರಶಾಂತವಾಗಿರಲಿ, ನಿರ್ಮಲವಾಗಿರಲಿ. ಮನೆಯಲ್ಲಿ ದೇವರ ಕೋಣೆ ಇದ್ದರೆ, ಅದರಲ್ಲೇ ಅಭ್ಯಾಸ ಮಾಡಿ. ಇಲ್ಲವೆಂದಾದರೆ, ಮನೆಮಂದಿ ಆಗಾಗ ಪ್ರವೇಶಿಸದ ಪ್ರತ್ಯೇಕ ಕೊಠಡಿಯೂ ಆಗಬಹುದು.

ಪ್ರಾಣಾಯಾಮವನ್ನು ನಿಗದಿತ ಸ್ಥಳದಲ್ಲಿ ನಿಗದಿತ ವೇಳೆಯಲ್ಲಿಯೇ ಮಾಡಿ. ಯೋಗಾಸನಗಳನ್ನು ಮಾಡುವವರು ಪ್ರಾಣಾಯಾಮಕ್ಕೆ ಇನ್ನೊಂದು ವೇಳೆಯನ್ನು ಗೊತ್ತುಮಾಡಿಕೊಳ್ಳಿ.

# ತೀರ ತಗ್ಗೂ ಅಲ್ಲದ, ತುಂಬ ಎತ್ತರವೂ ಅಲ್ಲದ ಆಸನವನ್ನು ಮಾಡಿಕೊಳ್ಳಬೇಕು. ಬರಿ ನೆಲದಲ್ಲಿ ಪ್ರಾಣಾಯಾಮ ಮಾಡಬಾರದು.

# ಬೆನ್ನು ಬಾಗಿಸದೆ ನೇರವಾಗಿ ಕುಳಿತುಕೊಳ್ಳಬೇಕು. ಬೆನ್ನು ಬಾಗಿಸಿ ಕುಳಿತರೆ ನಾಡಿ, ಚಕ್ರಗಳಲ್ಲಿನ ಪ್ರಾಣಶಕ್ತಿಯ ಸಂಚಾರಕ್ಕೆ ತಡೆಯಾಗಿ ಸಾಧಕ ರೋಗಕ್ಕೆ ತುತ್ತಾಗಬಹುದು.

# ಪ್ರಾಣಾಯಾಮ ಆರಂಭಿಸುವವರಿಗಾಗಿಯೇ ಪ್ರಾಥಮಿಕ ಪ್ರಾಣಾಯಾಮ ಕ್ರಮಗಳಿವೆ. ನಾಡಿಗಳ ಶುದ್ಧಿಗಾಗಿ ಇರುವ ಕಪಾಲ ಭಾತಿ ಕ್ರಿಯೆ, ಅನುಲೋಮ-ವಿಲೋಮ, ಭ್ರಾಮರೀ, ಶೀತ್ಕಾರೀ ಅಥವಾ ಶೀತಕಾರೀ ಮತ್ತು ಶೀತಲೀ. ಕಪಾಲಭಾತಿ ಮತ್ತು ಅನುಲೋಮ ವಿಲೋಮಗಳು ಪ್ರಾಣಾಯಾಮದ ಅಭ್ಯಾಸಕ್ಕೆ ಬೆನ್ನುಲುಬಿನಂತೆ.

# ಪ್ರಾಥಮಿಕ ಹಂತವನ್ನು ಕರಗತ ಮಾಡಿಕೊಂಡವರಿಗಾಗಿ (ಅಂದರೆ, ಅಂತಹ ಪ್ರಾಣಾಯಾಮಗಳನ್ನು ಕೆಲವು ತಿಂಗಳು ಅಭ್ಯಾಸ ಮಾಡಿದವರಿಗಾಗಿ) ಇರುವ ಪ್ರಾಣಾಯಾಮಗಳು ಉಜ್ಜಾಯೀ, ಸೂರ್ಯಭೇದನ, ಚಂದ್ರಭೇದನ, ಭಸ್ತ್ರಿಕಾ ಹಾಗೂ ಸಮನು. ಈ ಪ್ರೌಢಹಂತದ ಪ್ರಾಣಾಯಾಮ ಅಭ್ಯಾಸಕ್ರಮಗಳು ಕುಂಡಲಿನೀ ಶಕ್ತಿಯನ್ನು (ಪ್ರಾಣದ ಸೂಕ್ಷ್ಮರೂಪ) ಜಾಗೃತಗೊಳಿಸುವುದಕ್ಕಾಗಿ ಇವೆ. ಈ ಹಂತವನ್ನು ಪ್ರವೇಶಿಸಬಯಸುವ ಸಾಧಕನಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ವಿಶಿಷ್ಟವಾಗಿ ಸಿದ್ಧತೆಯೊಂದು ಬೇಕಾಗುತ್ತದೆ.

# ಈ ಮುಂದುವರಿದ ಹಂತದ ಪ್ರಾಣಾಯಾಮ ಕ್ರಮಗಳನ್ನು ಅಭ್ಯಾಸ ಮಾಡಬೇಕೆಂದಿರುವವರು, ಈ ಕ್ರಮಗಳ ಮೂಲಕ ನಮ್ಮ ಶರೀರದಲ್ಲಿ ಉತ್ಪಾದಿತವಾಗುವ ಪ್ರಾಣಶಕ್ತಿಯನ್ನು ಸಂರಕ್ಷಿಸಿಕೊಂಡು ಬಳಸಲು ಸಹಾಯಕವಾಗುವಂತಹ ಮೂರು ಬಂಧಗಳನ್ನು (ಜಾಲಂಧರ ಬಂಧ, ಉಡ್ಡೀಯಾನ ಬಂಧ ಹಾಗೂ ಮೂಲಬಂಧ) ಹಾಕಲು ಕಲಿತುಕೊಳ್ಳಬೇಕು.

# ಪ್ರಾಣಾಯಾಮವನ್ನು ಶಾಂತ ಮನಸ್ಸಿನಿಂದ, ಅಂದರೆ ಅವಸರ, ಉದ್ವೇಗಗಳಿಲ್ಲದೆ ನಿಧಾನವಾಗಿ ಮಾಡಬೇಕು. ಶ್ವಾಸಕೋಶದಲ್ಲಿ ತೊಂದರೆ ಇದ್ದಾಗ, ನೋವು ಇದ್ದಾಗ ಉಸಿರಾಟಕ್ಕೆ ತೊಡಕಿದ್ದಾಗ ಪ್ರಾಣಾಯಾಮ ಮಾಡಬಾರದೆಂಬುದು ಸ್ವಾಮಿ ಶಿವಾನಂದ ಮತ್ತು ಬಿ.ಕೆ.ಎಸ್. ಅಯ್ಯಂಗಾರ್​ರ ಅವರಂತಹ ಯೋಗಪಟುಗಳ ಕಿವಿಮಾತು.

# ಪ್ರಾಣಾಯಾಮಕ್ಕೆ ಸಂಬಂಧಿಸಿದಂತೆ ಸ್ತ್ರೀಯರಿಗೆ ಕೆಲವೊಂದು ವಿಧಿ, ನಿಷೇಧಗಳನ್ನು ಹೇಳಲಾಗಿದೆ. ಗರ್ಭಿಣಿಯರಿಗೆ ಕಪಾಲಭಾತಿ, ಭಸ್ತ್ರಿಕಾ, ಅಂತರಕುಂಭಕ, ಉಡ್ಡೀಯಾನ ಸಹಿತ ಬಾಹ್ಯ ಕುಂಭಕ ನಿಷೇಧ.

# ಎಲ್ಲಕ್ಕಿಂತ ಮುಖ್ಯವಾದ ಅಂಶವೆಂದರೆ ಈ ಯಾವ ಪ್ರಾಣಾಯಾಮಗಳನ್ನು ಯೋಗ/ಪ್ರಾಣಾಯಾಮ ಶಿಕ್ಷಕ ಅಥವಾ ಗುರುಗಳ ಮಾರ್ಗದರ್ಶನವಿಲ್ಲದೆ ಮಾಡಲೇಬಾರದು.

📖
🙏🙏🙏🙏 ಜೈ ಹಿಂದ್🌺

*ಮಾಹಿತಿ ಸಂಗ್ರಹ*
* ಹೆಚ್.ಬಿ.ಮೇಟಿ*
*ಶಿಕ್ಷಕ್ರು . ಜಿ.ಹೆಚ್.ಎಸ್ ಗೊಜನೂರ

MATHS TIME LINE

MATHS TIME LINE https://mathigon.org/timeline