✍️: ಕೊರೋನಾ ಭಾಗ-3 ಗಂಟಲನ್ನು ಹರ್ಬಲ್ ಆ್ಯಂಟಿ ವೈರಲ್ ಕಷಾಯದಿಂದ ತೊಳೆಯೋಣ, ಸೋಂಕನ್ನೇ ಸೀಲ್ ಡೌನ್ ಮಾಡೋಣ.*

Friday, 26 March 2021

ತ್ರಿಕ್ (ಸೊಂಟ-ಬೆನ್ನು-ಕತ್ತು) ಶೂಲೆ ಮತ್ತು ಅದರ ಶಾಶ್ವತ ಪರಿಹಾರ.ಭಾಗ-4

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
27.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-43
••••••••••••••
✍️: ಇಂದಿನ ವಿಷಯ:
ತ್ರಿಕ್ (ಸೊಂಟ-ಬೆನ್ನು-ಕತ್ತು) ಶೂಲೆ ಮತ್ತು ಅದರ ಶಾಶ್ವತ ಪರಿಹಾರ.
ಭಾಗ-4
•••••••••••••••••••••••••••••••••••••••••

🌿 ತ್ರಿಕ್ ಶೂಲಕ್ಕೆ ಆಯುರ್ವೇದ ಚಿಕಿತ್ಸೆ ಅತ್ಯಂತ ಶ್ರೇಷ್ಠ.

📜 ವಾತಸ್ಯೋಪಕ್ರಮಃ *ಸ್ನೇ ಹ ಸ್ವೇದ..,ಸ್ನಿಗ್ಧೋಷ್ಣಾ ಬಸ್ತಯೋ………ಸ್ನೇಹಸ್ಯ ..... ತೈಲಾನುವಾಸನಮ್*||01-03||
- ಅಷ್ಟಾಂಗ ಹೃದಯ

🔅 ಬೆನ್ನಿನ ಸ್ನಾಯುಗಳು ಒಣಗಲು ಕಾರಣವೇನು?
ಒಣಗಿಸುವ ಗುಣವಿರುವ *ವಾತ* ಸ್ನಾಯುಗಳನ್ನು ಒಣಗಿಸುತ್ತದೆ.
(ಉದಾ:  ಚಳಿಗಾಲದಲ್ಲಿ ಬಟ್ಟೆಗಳೂ, ನಮ್ಮ ಚರ್ಮವೂ ಗಾಳಿಗೆ ಬಹು ಬೇಗ ಒಣಗಲು ಕಾರಣ *ಶೀತ* ಮತ್ತು *ರೂಕ್ಷ(ಒಣಗುವಿಕೆ)* ಗುಣ.

◾️ ಸ್ನೇಹ ಚಿಕಿತ್ಸೆ:
👉 ತ್ರಿಕಾದಿ ಸರ್ವ ಸಂಧಿಗಳನ್ನು ಒಣಗಿಸುವ ವಾತಕ್ಕೆ, ಹಸಿ ಮಾಡುವುದೇ ಚಿಕಿತ್ಸೆ. *ವಿಧಿಪೂರ್ವಕ ಸ್ನೇಹ ಪ್ರಯೋಗ ಮಾತ್ರ ಎಲ್ಲಾ ಸ್ನಾಯು, ಮಾಂಸಖಂಡ, ಸಂಧಿಗಳನ್ನು ಹಸಿ ಮತ್ತು ಮೃದುವಾಗಿಸುತ್ತದೆ.*

◾️ ಸ್ವೇದ ಚಿಕಿತ್ಸೆ:
👉 ಶೀತದಿಂದ ಸಂಕೋಚಗೊಂಡ ಸ್ನಾಯುಗಳು ಉಷ್ಣ ಚಿಕಿತ್ಸೆಯಿಂದ ವಿಕಾಸಗೊಳ್ಳುತ್ತವೆ.

ವಾತಜನ್ಯ ವ್ಯಾಧಿಗಳಿಗೆ ಪ್ರಮುಖ ಚಿಕಿತ್ಸೆಯಾದ *ಸ್ನೇಹನ-ಸ್ವೇದನ* ಗಳನ್ನು ವೈದ್ಯರು ಅನೇಕ ವಿಧಿವಿಧಾನಗಳಿಂದ ಮಾಡುತ್ತಾರೆ.

◾️ ಕಟಿಬಸ್ತಿ, ಪೃಷ್ಠಬಸ್ತಿ ಚಿಕಿತ್ಸೆ:
 (ಸ್ನೇಹ-ಸ್ವೇದಗಳ ಮಿಶ್ರಣ)
👉 ವಾತ ಶಾಮಕ ಔಷಧಿ ಸಿದ್ಧ ತಿಲತೈಲ ಬಳಸಿ ಸ್ನಿಗ್ಧಗೊಳಿಸುತ್ತಾರೆ. ಅದೇ ತೈಲವನ್ನು ಬಿಸಿಮಾಡಿ(This is not dry heat like hot water bag, IR heat etc.,) ಸ್ನಾಯು ಸಂಕೋಚಗಳನ್ನು ನಿವಾರಿಸುತ್ತಾರೆ. ಶೇ 90ರಷ್ಟು ಅವಸ್ಥೆಗಳಲ್ಲಿ ಇಷ್ಟು ಸಾಕು.

◾️ ಶಮನ ಚಿಕಿತ್ಸೆ:
👉 ವಾತ ಉತ್ಪತ್ತಿಯಾಗುವ ಮೂಲ ಸ್ಥಾನದಲ್ಲೇ ಶಮನಗೊಳಿಸುವ ಈ ಚಿಕಿತ್ಸೆ ಅತ್ಯಂತ ಮಹತ್ವದ್ದು. ಇದು ಮಲಪಾಚನ, ವಾತ ಶಮನ ಮತ್ತು ವಾತ ಹೊರಹಾಕುವ ಅನುಲೋಮನ ಮಾಡುತ್ತದೆ.

☑️ ಆಹಾರ-ವಿಹಾರದಲ್ಲಿ ಬದಲಾವಣೆ:
ಬಹಳ ಜನ ಆಯುರ್ವೇದ ಎಂದರೆ ಪಥ್ಯ ಎನ್ನುತ್ತಾರೆ. ಆದರೆ *ಪಥ್ಯಾಹಾರವು ವಿಕೃತಿಗೊಂಡ ನಿಮ್ಮ ಶರೀರಕ್ಕೇ ಹೊರತು ಆಯುರ್ವೇದ ಔಷಧಿಗಳಿಗಾಗಿ ಅಲ್ಲ.* 

*ಆಹಾರ-ವಿಹಾರಗಳನ್ನು ಸರಿಮಾಡದೇ ಯಾವ ಚಿಕಿತ್ಸೆಯೂ ಪೂರ್ಣವಲ್ಲ ಹಾಗೂ ಯಾವ ವ್ಯಾಧಿಯೂ ಶಾಶ್ವತ ಪರಿಹಾರವಾಗಲು ಸಾಧ್ಯವಿಲ್ಲ.* 
⤴️ ಇದೇ ಆಯುರ್ವೇದದ ಗುಟ್ಟು.

◾️ ದಾರುಣ ಮತ್ತು ದೀರ್ಘಕಾಲದ ತ್ರಿಕ್ ಶೂಲೆಗಳ ಚಿಕಿತ್ಸೆ:
👉 ತೀವ್ರ ಮತ್ತು ಬಹುಕಾಲದ ತ್ರಿಕ್ ಶೂಲೆಗೆ, ವಿರೇಚನ, ನಿರೂಹ, ಅನುವಾಸನ ಮುಂತಾದ ಸೂಕ್ಷ್ಮ ಮತ್ತು ಶಕ್ತಿಯುತ ಪಂಚವಿಧ ಶೋಧನ-ಶಮನ-ಪೋಷಣೆಗಳಂತಹ ಪರಿಪೂರ್ಣ ಚಿಕಿತ್ಸೆಗಳನ್ನು ತಜ್ಞ ವೈದ್ಯರು ಮಾಡುತ್ತಾರೆ.

👁 ಜನರ ಸಂದೇಹಗಳು:
ಅನೇಕರು ಆಯುರ್ವೇದದ ಬಗ್ಗೆ ಅತಿಯಾದ ಸಂದೇಹದಿಂದ ಚಿಕಿತ್ಸೆಗೆ ಬರುತ್ತಾರೆ. ಯಾವ ದುಷ್ಪರಿಣಾಮಗಳೂ ಇಲ್ಲದೇ ಅತ್ಯಂತ ಸಮರ್ಥವಾಗಿ ಚಿಕಿತ್ಸೆ ಮಾಡುವುದು ಎಲ್ಲಾ ಆಯುರ್ವೇದ ವೈದ್ಯರ ಉದ್ದೇಶ. ಇವರೂ ಸಹ ಪಂಚಕರ್ಮ ಚಿಕಿತ್ಸಾ ಮಹತ್ವವನ್ನರಿತು, ಆಯಾ ತಜ್ಞರ ಸಲಹೆ ಪಡೆಯುತ್ತಾರೆ. ಅಂತಹುದರಲ್ಲಿ *ಆಯುರ್ವೇದದ ಹೆಸರಿನಲ್ಲಿ ಕೇವಲ ಮಸಾಜ್ ಮಾಡುವವರೂ, ವೈದ್ಯರಲ್ಲದವರೂ, ಯೋಗ ತರಬೇತಿದಾರರೂ, ಗುರುಗಳ ಹೆಸರನ್ನಿಟ್ಟುಕೊಂಡವರೂ ತಮಗೆ ತಿಳಿದಂತೆ ಪಂಚಕರ್ಮ ಮಾಡುತ್ತಿದ್ದಾರೆ. ಇಂಥವರ ಬಳಿ ಚಿಕಿತ್ಸೆಗೆ ತೆರಳಿ ತೊಂದರೆಗೊಳಗಾಗುವ ಮೊದಲು ಎಚ್ಚರದಿಂದಿರಿ.*

ಆಯುರ್ವೇದದಲ್ಲಿ ಬೇಗ ಗುಣವಾಗುವುದಿಲ್ಲ ಎಂಬ ಸಾಮಾನ್ಯವಾಗಿ ಹರಿದಾಡುವ ಮಿಥ್ಯೆಯನ್ನು ನಂಬಿದ್ದರೆ ಗಮನಿಸಿ- ಕೇವಲ ಅರ್ಧ ಗಂಟೆಯ ಒಂದು ಚಿಕಿತ್ಸೆಯಿಂದ ಹೊತ್ತುಕೊಂಡು ಬಂದವರನ್ನು ನಡೆಸಿ ಕರೆದುಕೊಂಡು ಹೋದ ಅನೇಕ ಉದಾಹರಣೆಗಳು ನಮ್ಮ ಕೇಂದ್ರದಲ್ಲೇ ಇವೆ. 
ನಮ್ಮ ಶರೀರವೊಂದು ಜೀವಂತ ವ್ಯವಸ್ಥೆ, ಹಳೆಯ ತೊಂದರೆ ಸರಿಪಡಿಸಿಕೊಳ್ಳಲು ಮತ್ತು ನೈಸರ್ಗಿಕವಾಗಿ ಬೆಳೆಯಲು ತನ್ನದೇ ಆದ ಸಮಯ ಬೇಕು, ನಮ್ಮ ಆತುರಕ್ಕೆ ಮಗುವೊಂದು ಒಮ್ಮೆಗೇ ಯುವಕನಾಗಲಾರದು.

👉 ಆತುರತೆಯೇ?:
ಅಲೋಪಥಿ ಆಸ್ಪತ್ರೆಗಳಲ್ಲಿ ಬೇರೆ ಬೇರೆ ಡಿಪಾರ್ಟ್ ಮೆಂಟ್ ಗಳನ್ನು ತೋರಿಸಿ ನಮ್ಮ ವಿಭಾಗದ ಕೆಲಸ ಆಗಿದೆ, ಅವರ ವಿಭಾಗಕ್ಕೆ ಹೋಗಿ! ಎನ್ನುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಒಂದು ಚಿಕಿತ್ಸೆಗೆ ಇನ್ನೊಂದು ವ್ಯಾಧಿ ಬಳುವಳಿಯಾದರೆ ತೊಂದರೆ ಅನುಭವಿಸುವ ಶರೀರ ಯಾರದು? 
(ಉದಾ: ಅಲರ್ಜಿಕ್ ಕಾಯಿಲೆಗಳಿಗೆ ಕೊಡುವ ಸಣ್ಣ ಔಷಧಗಳೂ ಮೂಳೆ ಸವೆತ ಮಾಡಿ ಮೂಳೆ ತಜ್ಞರತ್ತ ಹೊರಳಿಸುತ್ತವೆ, ಮುಟ್ಟಿನ ತೊಂದರೆಯ ಹಾರ್ಮೋನ್ ಚಿಕಿತ್ಸೆ ಸ್ಥೌಲ್ಯ, ಮಧುಮೇಹ ತರುತ್ತವೆ. ಇದು ವೈದ್ಯರಿಗೆ ಸ್ಪಷ್ಟವಾಗಿ ಗೊತ್ತಿದೆ, ಆದರೆ ಆ ವಿಜ್ಞಾನದ ಸೀಮಿತತೆ ಅಷ್ಟೇ. ಆದರೂ ಅದು ಚಿಕಿತ್ಸೆಯ ಬಳುವಳಿ ಎಂದು ನಾವು ಒಪ್ಪದಂತೆ ಇರುವುದು ಆಶ್ಚರ್ಯ!!!

ಆಯುರ್ವೇದ ವೈದ್ಯ ರೋಗಿ ಹೇಳಿದ ತೊಂದರೆಯನ್ನಷ್ಟೇ ಅಲ್ಲದೇ ಎಲ್ಲಾ ಸಮಸ್ಯೆಗಳ ಇತಿಹಾಸ ಪಡೆದು, ಎಲ್ಲವನ್ನೂ ಗಮನಿಸಿ, ಒಂದೇ ಚಿಕಿತ್ಸೆಯಲ್ಲಿ ಹಲವಾರು ವ್ಯಾಧಿಗಳನ್ನು ಗುಣಪಡಿಸುತ್ತಾನೆ. ಇದಕ್ಕೆ ತನ್ನದೇ ಸಮಯ, ನಿಷ್ಠೆ ಬೇಕಾಗುತ್ತದೆ.

*ಆಯುರ್ವೇದದಿಂದ ಗುಣ ಪಡಿಸಿಕೊಂಡ ತ್ರಿಕ್ ಶೂಲಗಳು ಅಪಾಯರಹಿತ, ದೀರ್ಘಕಾಲಿಕ ಪರಿಹಾರ. ಶಸ್ತ್ರಚಿಕಿತ್ಸೆಗೆ ಹೋಗುವ ಬದಲು ಮನೆಯಲ್ಲೇ ವಿರಮಿಸಿ, ಆಯುರ್ವೇದದ ಉಪದೇಶ ಪಾಲಿಸಿ ಶೇ 90ರಷ್ಟು ವ್ಯಾಧಿಗಳು ವಾಸಿಯಾಗುತ್ತವೆ. ಆಗದಿದ್ದರೆ ಮಾತ್ರ ಔಷಧೋಪಚಾರಗಳು ಮತ್ತು ಪಂಚಕರ್ಮ ಮುಂತಾದ ಚಿಕಿತ್ಸೆಗಳು ಬೇಕು.*
🙏ಧನ್ಯವಾದಗಳು 🙏

Monday, 22 March 2021

ಬಹುವಾಗಿ ಕಾಡುವ *ತ್ರಿಕ್ (ಸೊಂಟ-ಬೆನ್ನು-ಕತ್ತು) ನೋವು* ಮತ್ತು ಅದರ ಶಾಶ್ವತ ಪರಿಹಾರ. ಭಾಗ-3

🙏ಅಮೃತಾತ್ಮರೇ ನಮಸ್ಕಾರ 🙏
  🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼
     🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿
••••••••••••••••••••••••••••••••••••••••••
22.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-42
••••••••••••••
✍️: ಇಂದಿನ ವಿಷಯ:
ಬಹುವಾಗಿ ಕಾಡುವ *ತ್ರಿಕ್ (ಸೊಂಟ-ಬೆನ್ನು-ಕತ್ತು) ನೋವು* ಮತ್ತು ಅದರ ಶಾಶ್ವತ ಪರಿಹಾರ.
 ಭಾಗ-3
•••••••••••••••••••••••••••••••••••••••••

🏷 ವಿಶೇಷಸ್ತು…………. ಕ್ಷಾರಂ ಪಿಬೇನ್ ನರಃ
||89|| 
ಪಾಚನೈಃ ದೀಪನೈಃ………. *ಪಾಚಯೇತ್ ಮಲಾನ್||90||*
- ಚರಕ ಸಂಹಿತಾ. ವಾತ ಚಿಕಿತ್ಸಾಧ್ಯಾಯ 28

🔹 ಆಚಾರ್ಯ ಚರಕರು, ತ್ರಿಕ್ ಶೂಲ ಚಿಕಿತ್ಸೆಯಾಗಿ-
• ಕ್ಷಾರ(ಪ್ರತ್ಯಾಮ್ಲ) ಯೋಜನೆ 
• ಹಸಿವು ವರ್ಧನೆ
• ಜೀರ್ಣಕ್ರಿಯೆ ವೃದ್ಧಿ
ಮತ್ತು 
ಮುಖ್ಯವಾಗಿ 
*• ಮಲಪಾಚನ*
ಹೇಳುತ್ತಾರೆ. 

ಒಟ್ಟಾರೆ,
*ಮಲೋತ್ಪತ್ತಿ ಸರಿಯಾಗಿ ಆಗದಿರುವುದೇ ಸೊಂಟ, ಬೆನ್ನು ಕತ್ತು ನೋವುಗಳಿಗೆ ಕಾರಣ ಎಂದು ಈ ಚಿಕಿತ್ಸಾ ಸೂತ್ರದಿಂದ ತಿಳಿದುಬರುತ್ತದೆ.*

***

📝 ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರಗಳನ್ನು ನೋಡೋಣ.

🔺 ವಿ.ಸೂಚನೆಗಳು:
1. ಇಲ್ಲಿ ವಿಶದಪಡಿಸುವ ಪರಿಹಾರಗಳು, ನಿರಂತರ, ತೀವ್ರ ಮತ್ತು ಬಹುಕಾಲದ ತ್ರಿಕ್ ಶೂಲಗಳನ್ನೂ ಸಹ ನಿವಾರಿಸಲು ಸಮರ್ಥವಾಗಿವೆ, ಅಳವಡಿಸಿಕೊಂಡರೆ ಪರಿಹಾರ ನಿಶ್ಚಿತ. ಆದರೆ ಅಪಘಾತಾದಿ ಅತ್ಯುಗ್ರ ಮತ್ತು ತೀಕ್ಷ್ಣ ಅವಸ್ಥೆಗಳಲ್ಲಿ ಮಾತ್ರ ಈ ಪರಿಹಾರಕ್ಕೆ ಮುಂದಾಗಬಾರದು.

2. ಈ ಪರಿಹಾರಗಳನ್ನು ನಿತ್ಯವೂ ಸ್ವಲ್ಪ ಸ್ವಲ್ಪವಾಗಿ ಅಳವಡಿಸಿಕೊಂಡು 16ನೇ ದಿನಕ್ಕೆ ಪರಿಪೂರ್ಣ ಪಾಲಿಸಬೇಕೇ ಹೊರತು, ಮೊದಲನೇ ದಿನವೇ ಹೇಳಿದುದಕ್ಕಿಂತ ಹೆಚ್ಚು ಮಾಡಿ ತೊಂದರೆಯನ್ನು ಹೆಚ್ಚು ಮಾಡಿಕೊಳ್ಳಬಾರದು.

👉 ಪರಿಹಾರಗಳು:

*⃣ ಆಹಾರ-ನಿದ್ರೆಗೆ ಸಂಬಂಧಿಸಿದ ವಿಷಯಗಳು:
ಎಲ್ಲಾ ತ್ರಿಕ್ ಶೂಲಗಳಿಗೂ ಮಲ ಉತ್ಪತ್ತಿಯನ್ನು ಸುಗಮಗೊಳಿಸುವುದೇ ಶಾಶ್ವತ ಪರಿಹಾರವಾಗಿದೆ. ಆದ್ದರಿಂದ-

1. ರಾತ್ರಿ ಆಹಾರವನ್ನು 7:30ರೊಳಗೆ ಮುಗಿಸಿಬಿಡಿ. ಯಾವ ಕಾರಣಕ್ಕೂ ರಾತ್ರಿ ಅತಿಪ್ರಮಾಣ ಅಥವಾ ಶಕ್ತಿಯುತ ಆಹಾರ ಸೇವನೆ ಮಾಡಬೇಡಿ.

2. ಸುಲಭವಾಗಿ ಜೀರ್ಣಿಸಿಕೊಳ್ಳುವಷ್ಟು ಮಾತ್ರ ಆಹಾರ ಸೇವಿಸಿ ಅಥವಾ ಸೇವಿಸಿದ ಪ್ರಮಾಣಕ್ಕೆ ಸಮಸಮವಾಗಿ ಬೆವರು ಬರುವ ಕೆಲಸ ಮಾಡಿ.

3. ಒಂದು ಊಟದ ನಂತರ ಮತ್ತೆ ಹಸಿವಾಗುವವರೆಗೆ ಏನನ್ನೂ ಸೇವಿಸಬೇಡಿ, ಸಮಯವಾಯಿತು, ಗ್ಯಾಸ್ ಆಗುತ್ತದೆ, ವಿಜ್ಞಾನ ಹೇಳಿದೆ, ವೈದ್ಯರು ಹೇಳಿದ್ದಾರೆ ಎಂದೆಲ್ಲಾ ಯೋಚಿಸಿ ಪದೇ ಪದೇ ತಿನ್ನುವ ಬದಲು ನಿಮ್ಮ ನಿಮ್ಮ ಹೊಟ್ಟೆಯ ಮಾತನ್ನು ಕೇಳಿರಿ. ಅದಕ್ಕಿಂತ ದೊಡ್ಡ personal ವೈದ್ಯ ಇಲ್ಲ.

4. ಅತ್ಯಂತ ಶಕ್ತಿಯಿಂದ ಕೂಡಿದ ಮೊಳಕೆಕಾಳುಗಳನ್ನು ಮತ್ತು ಯಾವುದೇ ಪ್ರೋಟೀನ್ ಆಹಾರವನ್ನು ಸೇವಿಸುವ ವಿಧಾನ ತಿಳಿದುಕೊಂಡು ಬಳಸಿ,‌ ಆಗದಿದ್ದಲ್ಲಿ ಸಂಪೂರ್ಣವಾಗಿ ನಿಲ್ಲಿಸಿ, ಇಲ್ಲದಿದ್ದರೆ ಗ್ಯಾಸ್ ಉಂಟಾಗಿ ಸ್ನಾಯುಗಳು ಒಣಗುತ್ತವೆ.

5. ಅತಿಯಾದ ಜಲಸೇವನೆ ನಂತರ ಮತ್ತು ಪಚನವಾಗದ ಆಹಾರ ಸೇವನೆ ನಂತರ ತೀವ್ರ ಶಾರೀರಿಕ ಕೆಲಸ ಮಾಡಿದರೆ ಅಗ್ನಿಯು ತೀವ್ರ ಮಂದವಾಗಿ, ಅಜೀರ್ಣ, ಮಲಬದ್ಧತೆಯನ್ನುಂಟುಮಾಡುತ್ತದೆ. ಇದು ಕೆಲವರಲ್ಲಿ ಆಮವಾತದಿಂದ ಆರಂಭಿಸಿ, ankylosing spondylitis ವರೆಗೆ ತೊಂದರೆ ತರುತ್ತವೆ, ಹಾಗಾಗಿ ಲೆಕ್ಕ ಮಾಡಿ ಹೆಚ್ಚು ಹೆಚ್ಚು ಜಲಸೇವನೆ, ಹೆಚ್ಚು ಆಹಾರ ಸೇವನೆ ಮಾಡುವ ಬಗ್ಗೆ ಎಚ್ಚರ ವಹಿಸಿ.

6. ಉದ್ದಿನಬೇಳೆ ಮಲವನ್ನು ಹೆಚ್ಚಿಸುವ ಕಾರಣ, ಸೊಂಟನೋವಿಗೆ ಕಾರಣವಾಗುತ್ತದೆ. ಅತಿ ದುರ್ಬಲತೆಯಿಂದ ಬಂದ ಸೊಂಟ ನೋವಿನಲ್ಲಿ, ಚಿಕಿತ್ಸಾ ದೃಷ್ಟಿಯಿಂದ ಸೇವಿಸಬಹುದು, ಆದರೆ ನಿತ್ಯ ಆಹಾರವಾಗಿ ಅಲ್ಲ.

7. ಕಾಫಿ, ಟೀ ಸೇವನೆಯಿಂದ ಸ್ನಾಯುಗಳು ಒಣಗುತ್ತವೆ, ಹಾಗಾಗಿ ಪೂರ್ಣ ನಿಲ್ಲಿಸುವುದೊಳಿತು. ಆಗದದಿದ್ದವರು ದಿನಕ್ಕೆ ಒಂದು-ಎರೆಡು ಬಾರಿ ಅತ್ಯಲ್ಪ ಪುಡಿ ಬಳಸಿ ತಯಾರಿಸಿ ಸೇವಿಸಬಹುದು.

8. ನಿದ್ದೆಗೆ ಈ ಜಗತ್ತಿನಲ್ಲಿ ಪರ್ಯಾಯವೇ ಇಲ್ಲ, ತಡರಾತ್ರಿ ನಿದ್ದೆ ಮಾಡುವುದರಿಂದ, ಶರೀರದ ಪ್ರಾಕೃತ ಸ್ನೇಹಾಂಶವೇ ಒಣಗಿ ಸ್ನಾಯುಗಳು ಒಣಗುತ್ತವೆ, ಇನ್ನೂ ಕೆಲವರಲ್ಲಿ ನಿದ್ರೆ ತೊಂದರೆಯಿಂದ ವಿಕೃತ ಸ್ನೇಹ(ಕ್ಲೇದ) ಸಂಚಯವಾಗಿ ಸ್ಥೂಲದೇಹಿಗಳಾಗಿರುತ್ತಾರೆ, ಆಗಲೂ ಸ್ನಾಯುಗಳು ಒಣಗುತ್ತವೆ. ಹಾಗಾಗಿ ರಾತ್ರಿ ಊಟದ ನಂತರ 90ನಿಮಿಷ ಆರಾಮವಾಗಿ ಕುಳಿತುಕೊಂಡಿದ್ದು ನಂತರ 100 ಹೆಜ್ಜೆ ನಡೆದು, ಮೂತ್ರ ವಿಸರ್ಜಿಸಿ ಮಲಗಿಬಿಡಿ.

ಇನ್ನು,
*⃣ ವ್ಯಾಯಾಮಕ್ಕೆ ಸಂಬಂಧಿಸಿದಂತೆ ಕೆಲ ವಿಷಯಗಳನ್ನು ನೋಡೋಣ:

1. ಬೆನ್ನಿನ ಸ್ನಾಯುಗಳಿಗೆ ಕೆಲಸ ಕೊಡುವುದೇ ಸರ್ವಶ್ರೇಷ್ಠ ಉಪಾಯ. ಶರೀರದ ಎಲ್ಲಾ ಸ್ನಾಯುಗಳಿಗೆ ಸಣ್ಣ ಕೆಲಸಗಳಿಂದಲೇ ವ್ಯಾಯಾಮವಾಗುತ್ತದೆ ಆದರೆ ಬೆನ್ನಿನ ಸ್ನಾಯುಗಳಿಗೆ ವಿಶೇಷ ರೀತಿಯ ಭಂಗಿಗಳು ಬೇಕಾಗುವುದರಿಂದ, ಎಲ್ಲಾ ವ್ಯಾಯಾಮಗಳಿಗಿಂತ ಅತೀ ಹೆಚ್ಚು ಫಲದಾಯಕ ವ್ಯಾಯಾಮ ಎಂದರೆ *ಈಜುವುದು*, ದಿನಕ್ಕೆ 48 ನಿಮಿಷ ಈಜುವುದನ್ನು ರೂಢಿಸಿಕೊಳ್ಳಿ ಎಲ್ಲಾ ತ್ರಿಕ್ ಶೂಲಗಳೂ ಶಾಶ್ವತವಾಗಿ ದೂರವಾಗುತ್ತವೆ. 

ಅಥವಾ

2. ವಿಶೇಷ ರೀತಿಯ ಭಂಗಿಗಳ ಇರುವ ಸೂರ್ಯನಮಸ್ಕಾರ ಮಾಡಬಹುದು(ಒಂದೇ ದಿನಕ್ಕೆ ಹೆಚ್ಚು ಬೇಡ).

3. ಪದೇ ಪದೇ ಮೆಟ್ಟಿಲು ಹತ್ತಿ ಇಳಿಯುವುದು ವ್ಯಾಯಾಮವಾಗುವ ಬದಲು, ನೇರವಾಗಿ lumbar discಗೆ ಒತ್ತಡಬೀಳುವುದರಿಂದ ಅತ್ಯಂತ ದಾರುಣ ನೋವನ್ನು ಅನುಭವಿಸುತ್ತೀರಿ, ಹಾಗಾಗಿ ಸಾಧ್ಯವಾದಷ್ಟು ಹತ್ತಿಳಿಯುವುದನ್ನು ನಿಲ್ಲಿಸಿ, ಅನಿವಾರ್ಯ ಪ್ರಸಂಗದಲ್ಲಿ ಹಗುರವಾಗಿ ಹತ್ತಿಳಿಯಿರಿ. ಆ ಕಾಲದಲ್ಲಿ ಮೇಲಿನ ಮನೆಯ ಕಲ್ಪನೆ ಅತ್ಯಂತ ಕಡಿಮೆ ಇತ್ತು, ಈಗ ಈ ತರಹದ ಮನೆ ಜೊತೆಗೆ ಸೊಂಟನೋವು ಬಳುವಳಿ.

4. ನಿತ್ಯವೂ ಶಾರೀರಿಕ ಶ್ರಮದ ವ್ಯಾಯಾಮ ಮಾಡಿದ ನಂತರ ಬೆನ್ನು ಮತ್ತು ಕಾಲುಗಳನ್ನು ಮೃದುವಾಗಿ ಒತ್ತಿಸಿಕೊಳ್ಳಿ.

5. ಕತ್ತು ಮತ್ತು ಬೆನ್ನು ನೋವಿಗೆ ತೈಲ ಹಚ್ಚುವ ಬದಲು, ಶುಷ್ಕಪೀಡನ(ಎಣ್ಣೆ ಹಚ್ಚದೇ ಹಿಚುಕುವುದು) ಮತ್ತು ಒಣ ಶಾಖ ತೆಗೆದುಕೊಳ್ಳುವುದು ಅತ್ಯಂತ ಸೂಕ್ತ.

6. ಆದರೆ ಸೊಂಟಕ್ಕೆ ಮಾತ್ರ ತೈಲ ಹಚ್ಚಿ ಬಿಸಿನೀರನ್ನು ಹಾಕಿಕೊಳ್ಳುವುದು ಸೂಕ್ತ.

7. ಮಕ್ಕಳಾದಿ ಎಲ್ಲರೂ ನಿತ್ಯವೂ ಎಣ್ಣೆ ಸವರಿಕೊಂಡು ಬಿಸಿನೀರ ಸ್ನಾನ ಮಾಡುವುದು ಸರಿಯಾದ ಪದ್ಧತಿ. ಆದರೆ ವಸಂತ ಋತುವಿನಲ್ಲಿ(ಮಾರ್ಚ್-ಏಪ್ರಿಲ್-ಮೇ) ಎಣ್ಣೆ, ಬಿಸಿ ನೀರು ಸೂಕ್ತವಲ್ಲ.

        🙏ಧನ್ಯವಾದಗಳು 🙏
••••••••••••••

Sunday, 21 March 2021

ಬಹುವಾಗಿ ಕಾಡುವ *ಸೊಂಟ-ಬೆನ್ನು-ಕತ್ತು ನೋವು* ಮತ್ತು ಅದರ ಶಾಶ್ವತ ಪರಿಹಾರ. ಭಾಗ-2

🙏ಅಮೃತಾತ್ಮರೇ ನಮಸ್ಕಾರ 🙏
 ☀️ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ☀️
     🍀ಸ್ವಾಸ್ಥ್ಯ ಸರ್ವರದ್ದೂ ಆಗಲಿ🍀
••••••••••••••••••••••••••••••••••••••••••
21.03.2021
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ 
ಸಂಚಿಕೆ-41
••••••••••••••
✍️: ಇಂದಿನ ವಿಷಯ:
ಬಹುವಾಗಿ ಕಾಡುವ *ಸೊಂಟ-ಬೆನ್ನು-ಕತ್ತು ನೋವು* ಮತ್ತು ಅದರ ಶಾಶ್ವತ ಪರಿಹಾರ.
 ಭಾಗ-2
•••••••••••••••••••••••••••••••••••••••••

📖 ಗುರ್ವಂಗಂ ತುದ್ಯತೇ........|
ಭೇದೋ ಅಸ್ಥಿ ಪರ್ವಾಣಾಂ.....ಮಾಂಸ ಬಲ ಕ್ಷಯಃ ||
-ಚರಕ ಸಂಹಿತಾ

🖌 ಸೊಂಟ-ಬೆನ್ನು-ಕತ್ತು ನೋವುಗಳ ಉತ್ಪತ್ತಿ ಹೇಗೆ ಆಗುತ್ತದೆ?
• ದೊಡ್ಡ ಕರುಳಿನಲ್ಲಿ ಆಹಾರದ ಶೇಷ ದ್ರವ್ಯಗಳನ್ನು ದ್ರವರೂಪದಲ್ಲಿ ಹೀರಿಕೊಳ್ಳುವ ಮತ್ತು ಮಲವನ್ನು ಗಟ್ಟಿಗೊಳಿಸುವ ವ್ಯವಸ್ಥೆ ಇದೆ. ಈ ಕರುಳಿಗೆ ಊತ ಬಂದರೆ, ದ್ರವವನ್ನು ಹೀರಿಕೋಳ್ಳುವ ಸಾಮರ್ಥ್ಯ ಕ್ಷೀಣವಾಗಿ ಪ್ರಾಕೃತ ಮಲೋತ್ಪತ್ತಿಯಾಗುವುದಿಲ್ಲ. ಇಂತಹ ಅವಸ್ಥೆಯಲ್ಲಿ ಕರುಳು ಅಪಕ್ವ ಮಲವನ್ನು ಹಿಡಿದಿಟ್ಟು (“ಅಪಕ್ವಂ ಧಾರಯತಿ” ಗುಣದಿಂದ),  ಹೀರಿಕೊಳ್ಳುವ ಬದಲು ಜಲವನ್ನು ಶರೀರದೊಳಕ್ಕೆ ಒತ್ತಡಪೂರ್ವಕವಾಗಿ ತಳ್ಳಲು ಬಲವಾದ ಅಸಹಜ ವಾತವನ್ನು ಉತ್ಪತ್ತಿಮಾಡಿಬಿಡುತ್ತದೆ. ಹೀಗೆ ನಿರಂತರ 14 ದಿನಗಳವರೆಗೆ ಉಂಟಾದ ವಾಯುವು ತನ್ನ ಸ್ಥಾನವಾದ ಕಟಿ(ಸೊಂಟಕ್ಕೆ)ಗೆ ವರ್ಗಾವಣೆಯಾಗುತ್ತದೆ. ಆಗ ಅಲ್ಲಿರುವ ಮೆದುವಾದ ಮಾಂಸಖಂಡಗಳು ಮತ್ತು ಸ್ನಾಯುಗಳ ಸ್ನೇಹಾಂಶವನ್ನು ಹೀರಿಕೊಂಡು ವಾತವು ಶಾಂತವಾಗುತ್ತದೆ, ಆದರೆ ಸ್ನಾಯುಗಳು ಒಣಗಿ ಕುಗ್ಗುತ್ತವೆ. ಬಲ ಅಥವಾ ಎಡಕ್ಕೆ ಕುಗ್ಗಿದ ಸ್ನಾಯುವಿನ ಕಾರಣ discಗಳ ಮೇಲೆ ಸೂಕ್ಷ್ಮವಾಗಿ ಒತ್ತಡ ಆರಂಭವಾಗುತ್ತದೆ. ಇದೇ ನೋವಿನ ಆರಂಭ, ಇದು ಯಾವ ಸ್ನಾಯುವನ್ನು ಹಿಡಿದುಕೊಂಡಿದೆ ಎಂಬ ಆಧಾರದಲ್ಲಿ ನೋವು ಕತ್ತಿಗೋ, ಬೆನ್ನಿಗೋ ಅಥವಾ ಸೊಂಟಕ್ಕೋ ಬರುತ್ತದೆ.

🖌 ಸಾಮನ್ಯವಾಗಿ ಸೊಂಟ-ಬೆನ್ನು-ಕತ್ತು ನೋವುಗಳು ಯಾವಾಗಲೂ ಮೂಳೆ ತೊಂದರೆಗೇ ಸಂಬಂಧಿಸಿರುವುದಿಲ್ಲ:
● ಬೆನ್ನಿನಲ್ಲಿರುವ ಮಾಂಸಖಂಡಗಳ, ಸ್ನಾಯುಗಳು ನಮ್ಮ ಶಿರಸ್ಸಿನಿಂದ(skull) ಆರಂಭವಾಗಿ ಭುಜದ ಕೆಳಗೆ ಇರುವ ಅಂಶಾಸ್ಥಿ(Scapula) ಮತ್ತು ಕಟಿಯಲ್ಲಿರುವ ಅಗಲವಾದ ಭಗಾಸ್ಥಿ(Hip bone)ಗಳವರೆಗೆ ಹರಡಿಕೊಂಡಿವೆ ಮತ್ತು ಪ್ರತಿ ಕಶೇರುಕ ಮೂಳೆಗೂ ಬಲವಾಗಿ ಅಂಟಿರುವ ಶಕ್ತಿಯುತ ಸ್ನಾಯುಗಳು ಕತ್ತಿನ 7 + ಬೆನ್ನಿನ12 + ಕಟಿಯ5 + ತ್ರಿಕಾಸ್ಥಿಯ 1 (ಪರಸ್ಪರ ಅಂಟಿಕೊಂಡ 5) ಕಶೇರುಕ ಮಣಿಗಳನ್ನು ಒಂದು ನಿರ್ದಿಷ್ಟ ಅಂತರದಲ್ಲಿ ನೇರವಾಗಿ ಹಿಡಿದಿರಿಸಿರುತ್ತವೆ. *ಈ ಸ್ನಾಯುಗಳಲ್ಲಿ ಉಂಟಾಗುವ ಬಹುಕಾಲದ ಸಂಕೋಚವೇ ಕತ್ತು, ಬೆನ್ನು ಅಥವಾ ಸೊಂಟದ ನೋವುಗಳಿಗೆ ಕಾರಣವೇ ಹೊರತು, discಗಳು ಅಲ್ಲ, ನೇರವಾಗಿ ಮೂಳೆಗಳಂತೂ ಅಲ್ಲವೇ ಅಲ್ಲ!
  ದಾರುಣ ಹಂತದಲ್ಲಿ, ಅಪಘಾತಾದಿ ಕಾರಣಗಳಲ್ಲಿ ಮಾತ್ರ ಕಶೇರುಕ ಮೂಳೆಗಳ ನೇರ ಪಾತ್ರ ಇರುತ್ತದೆ.

ಇಲ್ಲಿ ಮೂಳೆ ತಜ್ಞರ, ಚಿಕಿತ್ಸಕರ ಪಾತ್ರ ಬಹಳ ಕಡಿಮೆ. ಏಕೆಂದರೆ ಸಾಮಾನ್ಯವಾಗಿ ಇದಕ್ಕೆ ಕೊಡುವ ಮಾತ್ರೆಗಳೆಂದರೆ ಸ್ನಾಯುಗಳ ಬಿಗಿತವನ್ನು ಬಿಡಿಸುವ Muscles relaxants, NSAID ಮಾತ್ರೆಗಳು. ಇವುಗಳ ಸೇವನೆಯಿಂದ ತತ್ಕ್ಷಣದ ಪರಿಣಾಮ ತೋರಿದರೂ, ಆ ನೋವು ನಿವಾರಕ ಮತ್ತು ಊತನಿವಾರಕ ಮಾತ್ರೆಗಳ ಕಾರಣದಿಂದಲೇ ಕರುಳಿನಲ್ಲಿ ಹೆಚ್ಚು ಊತ ಬಂದು ಮತ್ತೆ ಗ್ಯಾಸ್ ಉತ್ಪತ್ತಿ ಹೆಚ್ಚುವುದರಿಂದ ಬೆನ್ನುನೋವು ಮೊದಲಿಗಿಂತ ಹೆಚ್ಚಾಗುತ್ತದೆ!! ವಿಟಮಿನ್ ಮಾತ್ರೆಗಳು ಸ್ವಲ್ಪ ಬಲ ಕೊಟ್ಟಂತೆ ಕಂಡರೂ, ಇರುವ ಮೂಲ ಕಾರಣವನ್ನು ನಿವೃತ್ತಿ ಮಾಡಲಾರವು! ಕೆಲವೇ ದಿನಗಳಲ್ಲಿ ಮತ್ತೆ ನೋವು ಬಂದೇ ಬರುತ್ತದೆ. 
ವಾತ ಕಡಿಮೆಯಾಗಿ ನಮ್ಮ ಸ್ನಾಯುಗಳಲ್ಲಿ ಹಿಗ್ಗುವ ಶಕ್ತಿ ಮರಳಿದರೆ ಫಿಜಿಯೋಥೆರಪಿ ಬಹಳ ಉಪಕಾರ ಮಾಡುವುದಾದರೂ, ಒಣಗಿದ ಸ್ನಾಯುಗಳನ್ನಿಟ್ಟುಕೊಂಡು ಫಿಜಿಯೋಥೆರಪಿ ಮಾಡಿದರೆ ಅವು ಹರಿಯುವ(tear) ಸಾಧ್ಯತೆ ಹೆಚ್ಚು ಮತ್ತು ಸ್ನಾಯುಗಳನ್ನು ಒಣಗಿಸುವ ಮೂಲಕಾರಣ ನಿವಾರಣೆಯಾಗದೇ ಇರುವುದರಿಂದ ಸಮಸ್ಯೆ ಮತ್ತೆ ಮೊದಲಿಗಿಂತ ಜೋರಾಗಿ ಮರುಕಳಿಸುತ್ತದೆ!!

♨️ ದಾರುಣತೆಯ ಹಂತ: 
ಮೂಳೆಗಳ ನಡುವೆ ಇರುವ ಮೆತ್ತನೆಯ ಸ್ಪಂಜಿನಾಕಾರದ inter vertebral discಗಳಿಗೆ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಕಡಿಮೆ ಇರುತ್ತದೆ. ಹಾಗಾಗಿ, ಬೆನ್ನಿನ ಸ್ನಾಯುಗಳ ಸಂಕೋಚ discಗಳನ್ನೂ ಮತ್ತು discಗಳು ನರಗಳನ್ನು ಒತ್ತುತ್ತವೆ, ದೀರ್ಘ ಕಾಲ ಉಪಶಮನಗೊಳಿಸದಿದ್ದರೆ discಗಳು ಒಡೆದು ಕಶೇರುಕಗಳ ಅಂತರವನ್ನು ಕಡಿಮೆ ಮಾಡುವುದರಿಂದ ಗೃಧ್ರಸಿ(sciatica)ಯಂತಹ ತೀವ್ರ ತೊಂದರೆಗಳು ಬರುತ್ತವೆ. ಈ ಹಂತದಲ್ಲಿ ಕುಳಿತರೂ ನಿಂತರೂ ಕೆಲವೊಮ್ಮೆ ಮಲಗಿದರೂ ತಡೆಯಲಾರದ ದಾರುಣ ಸ್ಥಿತಿ ತಲುಪುತ್ತೇವೆ.

🖌 ಶಸ್ತ್ರಚಿಕಿತ್ಸೆ ಅನಗತ್ಯ:
ಸ್ನಾಯುಗಳ ಹಂತದಲ್ಲೇ ಇರಲಿ, ದಾರುಣ ಸ್ಥಿತಿ ಇರಲಿ, ನೇರವಾಗಿ ಶಸ್ತ್ರಚಿಕಿತ್ಸೆಗೆ ಹೋಗದೇ ತಾಳ್ಮೆಯಿಂದ ಆಯುರ್ವೇದ ಚಿಕಿತ್ಸೆ ಮಾಡಿಸಿಕೊಂಡರೆ ಶಾಶ್ವತ ಪರಿಹಾರವನ್ನು ಕಾಣಬಹುದು. ಶಸ್ತ್ರಚಿಕಿತ್ಸೆಯಿಂದ ಕೇವಲ ತೊಂದರೆ ಎಂದು ಕಂಡುಬರುವ 1-2 ಸ್ಥಾನಗಳನ್ನು ಮಾತ್ರ ಸರಿಗೊಳಿಸಲು ಯತ್ನಿಸುತ್ತಾರೆ, ಆದರೆ ಅನ್ಯ ಕಶೇರುಕಗಳ ಸ್ಥಾನಗಳು ಮತ್ತು ಉತ್ಪತ್ತಿಯ ಮೂಲ ಹಾಗೇ ಉಳಿದುಕೊಳ್ಳುವುದರಿಂದಲೂ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ತನ್ನದೇ ಆದ ಅನೇಕ ದುಷ್ಪರಿಣಾಮಗಳು ಇರುವುದರಿಂದಲೂ ಯೋಚಿಸಿ ನಿರ್ಧರಿಸುವುದೊಳಿತು.

🚫 ಮಸಾಜ್ ಬೇಡ ಎಚ್ಚರಿಕೆ!:
 ಕತ್ತು, ಬೆನ್ನು, ಸೊಂಟಕ್ಕೆ ಎಣ್ಣೆ ಮಸಾಜ್ ಮಾಡಿಸಿದರೆ ಸ್ನಾಯುಗಳು ಮತ್ತಷ್ಟೂ ಊದಿಕೊಂಡು ಸಮಸ್ಯೆ ಅತ್ಯಂತ ದಾರುಣಸ್ಥಿತಿಗೆ ತಲುಪುತ್ತದೆ!!

ಇಷ್ಟೊಂದು ಕಷ್ಟ ಕೊಡುವ ಈ ನೋವುಗಳನ್ನು ಆರಂಭಿಕ ಹಂತದಲ್ಲಿ ಅತ್ಯಂತ ಸರಳವಾಗಿ ಮನೆಯಲ್ಲಿಯೇ ವಾಸಿಮಾಡಿಕೊಳ್ಳಬಹುದು.

🔜 ನಾಳಿನ ಸಂಚಿಕೆಯಲ್ಲಿ ನೋಡೋಣ......

         🙏ಧನ್ಯವಾದಗಳು 🙏

•••••••••••••

ಮಜ್ಜಿಗೆಯ ಮಾತು ಭಾಗ-01

🦢   ಅಮೃತಾತ್ಮರೇ, ನಮಸ್ಕಾರ   🦢   ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ     ಸಂಚಿಕೆ-92, ದಿನಾಂಕ: 19.07.2026 ••••••••••••••••••••••••••••••••••••••• ...